“ಚಿಕ್ಕವಳಿದ್ದಾಗ ನಾನು ಚಂದವಿದ್ದೆ. ಆದರೆ ಈಗ ಅದೆಲ್ಲದರ ಕುರಿತು ಕಾಳಜಿ ಮಾಡಲು ಸಮಯವಿಲ್ಲ” ಎಂದು ನೂರ್ (ಹೆಸರು ಬದಲಾಯಿಸಲಾಗಿದೆ) ತನ್ನ ಬಾಡಿಗೆ ಮನೆಯ ಮೆಟ್ಟಿಲುಗಳ ಮೇಲೆ ಕುಳಿತು ಕೆಲವು ಕ್ಷಣಗಳ ವಿರಾಮವನ್ನು ಆನಂದಿಸುತ್ತಾ ನಿಟ್ಟುಸಿರು ಬಿಡುತ್ತಾ ಹೇಳಿದರು.
ತನಗೆ 22 ವರ್ಷವಾಗುವ ಹೊತ್ತಿಗೆ ನೂರ್ ದುಡಿಮೆ ಪ್ರಾರಂಭಿಸಿದರು. ಮೊದಲು ನಿರ್ಮಾಣ ಸ್ಥಳಗಳು, ಕಾರ್ಖಾನೆಗಳಲ್ಲಿ ಹಾಗೂ ಮನೆಗೆಲಸದ ಸಹಾಯಕಿಯಾಗಿಯೂ ದುಡಿದಿದ್ದ ಅವರು, ಪ್ರಸ್ತುತ ದೆಹಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದಾರೆ. “ನಾನು ದೆಹಲಿಗೆ ಬಂದ ನಂತರವೇ ಹೊರಗೆ ದುಡಿಯಲು ಹೋಗಿದ್ದು.”
ರೋಹಿಣಿ ಸೆಕ್ಟರ್ 15ರ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ನೂರ್ ನರ್ಸಿಂಗ್ ಮತ್ತು ಕ್ಲೀನಿಂಗ್ ಕೆಲಸಗಳಿಗೆ ಸಹಾಯ ಮಾಡುತ್ತಾರೆ. ಅವರು ರೋಗಿಗಳ ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಅಗತ್ಯವಿದ್ದಾಗ ಆಹಾರ ಹಾಗೂ ನೀರನ್ನು ತಂದುಕೊಡುವ ಕೆಲಸಗಳನ್ನು ಮಾಡುತ್ತಾರೆ. ನರ್ಸ್ ಬ್ಯಾಂಡೇಜ್ ಮಾಡುವಾಗ ಮತ್ತು ರೋಗಿಗಳಿಗೆ ಫಾಲೋ-ಅಪ್ ವಿಚಾರದಲ್ಲಿ ಸಹಾಯ ಅಗತ್ಯವಿದ್ದಾಗಲೂ ಅವರು ಮುಂದಕ್ಕೆ ಬರುತ್ತಾರೆ. "ದಿನಕ್ಕೆ ಸುಮಾರು 12-13 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ಈ ಮೂಲಕ ತಿಂಗಳಿಗೆ 11,000 ರೂಪಾಯಿ ಗಳಿಸುತ್ತೇನೆ. ದೆಹಲಿಯಂತಹ ನಗರದಲ್ಲಿ ಬದುಕಲು ಇಷ್ಟು ಹಣ ಸಾಕಾಗುವುದಿಲ್ಲ” ಎಂದು ಅವರು ಹೇಳುತ್ತಾರೆ.
ನೂರ್ ಇಸವಿ 2004ರಲ್ಲಿ ತನ್ನ ಮೌಸಿ (ಅಮ್ಮನ ತಂಗಿ), ತನ್ನ ಪತಿಯೊಂದಿಗೆ ದೆಹಲಿಗೆ ಬಂದರು. ಆಗ ಕೇವಲ 21 ವರ್ಷದವರಾಗಿದ್ದ ಅವರು ತನ್ನ ಮೊದಲ ಮಗುವನ್ನು ಗರ್ಭದಲ್ಲಿ ಹೊತ್ತಿದ್ದರು. ಬಿಹಾರದ ಸುಲಿಂದಾಬಾದ್ ಮೂಲದ ಈ ಕುಟುಂಬ ಕೆಲಸ ಮತ್ತು ಉತ್ತಮ ಸಂಪಾದನೆಯ ಹುಡುಕಾಟದಲ್ಲಿ ದೆಹಲಿ ತಲುಪಿತ್ತು. ನೂರ್ ಉತ್ತಮ ಬದುಕಿನ ನಿರೀಕ್ಷೆಯಲ್ಲಿದ್ದರು.
1991 ಮತ್ತು 2001ರ ನಡುವೆ ದೆಹಲಿ-ಎನ್ಸಿಟಿ ಪ್ರದೇಶಕ್ಕೆ ವಲಸೆ ಬಂದ ಜನಸಂಖ್ಯೆಯಲ್ಲಿ ಬಿಹಾರ 2ನೇ ಸ್ಥಾನದಲ್ಲಿದೆ. ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ - 2024 ಈಗಲೂ ಈ ವಿಚಾರದಲ್ಲಿ ಏನೂ ಬದಲಾವಣೆ ಕಂಡುಬಂದಿಲ್ಲದಿರುವುದನ್ನು ತೋರಿಇಸುತ್ತದೆ. ಸಮೀಕ್ಷೆ ಹೇಳುವಂತೆ 11 ಲಕ್ಷಕ್ಕೂ ಹೆಚ್ಚು ಜನರು ಬಿಹಾರದಿಂದ ದೆಹಲಿಗೆ ವಲಸೆ ಬಂದಿದ್ದು, ಇದಕ್ಕೆ ಮುಖ್ಯ ಕಾರಣ ಉದ್ಯೋಗ.
ದೆಹಲಿಗೆ ಬಂದ ನಂತರ ನೂರ್ ಅವರ ಕುಟುಂಬವು ಕಾಶ್ಮೀರ್ ಗೇಟ್ ಬಳಿಯ ಜುಗ್ಗಿಗಳಲ್ಲಿ [ತಾತ್ಕಾಲಿಕ ಬಾಡಿಗೆ ಮನೆಗಳು] ನೆಲೆಸಿತು. ಗರ್ಭಿಣಿ ಯುವತಿ ನೂರ್ ಮೊದಲು ಕೆಲಸ ಮಾಡಿದ್ದು ನಿರ್ಮಾಣ ಸ್ಥಳಗಲ್ಲಿ. ನಂತರ ಅವರು ಸ್ವರೂಪ್ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡಿದರು.








