ಹಾಲುವಾಣ ಮರವು (ಎರಿಥ್ರಿನಾ ವೆರಿಗಾಟಾ) ಮೈತುಂಬಾ ಹೂ ಧರಿಸಿ ನಿಂತಿತ್ತು. ನಾಗಾಲ್ಯಾಂಡ್ ರಾಜ್ಯದ ಮೋನ್ ಗ್ರಾಮದಲ್ಲಿ ಈ ಬೆಂಕಿಯಂತಹ ಹೂವು ಅರಳಿತೆಂದರೆ ಆ ವರ್ಷದ ವಸಂತದ ಹಬ್ಬ ಒಯೆಲಿಯಾಂಗ್ ಆರಂಭವಾಯಿತೆಂದೇ ಅರ್ಥ.
ಈ ಹಬ್ಬವನ್ನು ನೋಡಲು 62 ವರ್ಷದ ನಿಲೈ ಕೊಂಯಾಕ್ ತಮ್ಮ ಮೊಮ್ಮಗನ ಜೊತೆ ಬಂದಿದ್ದರು. ಕೊಂಯಾಕ್ ಸ್ಟೂಡೆಂಟ್ ಯೂನಿಯನ್ ಬಿಲ್ಡಿಂಗ್ನ ವರಾಂಡಾದಲ್ಲಿ ಕುಳಿತುಕೊಂಡು ನಗುತ್ತಾ, "ನನಗೆ ಇಲ್ಲಿಗೆ ಬಂದು ಈ ಎಲ್ಲಾ ಕಾರ್ಯಕ್ರಮಗಳನ್ನ ನೋಡೋದು ಅಂದ್ರೆ ಬೇರೇನೇ ಸಂಭ್ರಮ" ಎಂದರು. ಆದರೆ ಅವರು ನಿಜವಾಗಿ ಕಾಯುತ್ತಿರುವುದು ಆ ದಿನದ ಹಬ್ಬದ ಔತಣಕ್ಕಾಗಿ. "ಇಲ್ಲಿ ಊಟ ಬಹಳನೇ ರುಚಿಯಾಗಿರುತ್ತೆ. ಅಂಟು ಅಕ್ಕಿನ ಅನ್ನ, ಮಾಂಸ, ಚಟ್ನಿ ಮತ್ತೆ ಹಣ್ಣುಗಳೆಲ್ಲ ಇರುತ್ತದೆ" ಎಂದು ನಿಲೈ ಖುಷಿಯಿಂದ ಹೇಳಿದರು.
ಈ ಸಂಭ್ರಮಾಚರಣೆಯಲ್ಲಿ ಹಾಡು, ನೃತ್ಯ ಮತ್ತು ಸಾಂಪ್ರದಾಯಿಕ ಆಟಗಳಿರುತ್ತವೆ; ಜೊತೆಗೆ ಕೊಂಗ್-ಕೀ-ಹಾಮ್-ಅಜಾಕ್ ಮೆಕ್ (ಬಿದಿರಿನ ಕಡ್ಡಿಕಾಲು ನಡಿಗೆ ಸ್ಪರ್ಧೆ), ಖಾಮ್ ಟುಟ್ (ಮರದ ದಿಮ್ಮಿಯ ಡೋಲು ಬಾರಿಸುವುದು) ಮತ್ತು ವೆನ್ ಖೆನ್ ಮೆಕ್ (ಬೆಂಕಿ ಪೊಟ್ಟಣವಿಲ್ಲದೆ ಸಾಂಪ್ರದಾಯಿಕವಾಗಿ ಬೆಂಕಿ ಹೊತ್ತಿಸುವುದು) ತರಹದ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ.
ಕೊಂಯಾಕ್ ಬುಡಕಟ್ಟು ಜನಾಂಗದವರು ಆಚರಿಸುವ ಔಲಾಂಗ್ ಹಬ್ಬ ಒಟ್ಟು ಆರು ದಿನಗಳ ಕಾಲ ನಡೆಯುತ್ತದೆ. ಮಾರ್ಚ್-ಏಪ್ರಿಲ್ ತಿಂಗಳ ವಸಂತ ಕಾಲದಲ್ಲಿ ನಡೆಯುವ ಈ ಹಬ್ಬದಲ್ಲಿ, ಹೊಸ (ಝುಮ್) ಬೇಸಾಯದ ಸ್ಥಳದಲ್ಲಿ ಬಿತ್ತನೆ ಮಾಡಿ, ಇಡೀ ಸಮುದಾಯ ಒಂದಾಗಿ ಭಗವಂತನ ಬಳಿ ಉತ್ತಮ ಇಳುವರಿ ಕೊಡುವಂತೆ ಬೇಡುತ್ತದೆ. ಈ ಭಾಗದ ಪ್ರಮುಖ ಬೆಳೆ ಭತ್ತವಾಗಿದ್ದು, ಈಗಲೂ ಹೆಚ್ಚಿನ ಮಟ್ಟಿಗೆ ಸ್ಥಳಾಂತರ ಬೇಸಾಯ ಪದ್ಧತಿಯೇ ಇಲ್ಲಿ ರೂಢಿಯಲ್ಲಿದೆ.
ಕೊಂಯಾಕ್ ಜನರು ಈಗಲೂ ವಂಶಪಾರಂಪರ್ಯವಾಗಿ ಅಧಿಕಾರ ಹೊಂದುವ ಊರಿನ ಮುಖ್ಯಸ್ಥರು ಅಥವಾ ಅಂಘ್ ಮಾತಿಗೆ ಗೌರವ ಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಚುನಾಯಿತ ಸದಸ್ಯರಿರೋ ವಿಲೇಜ್ ಕೌನ್ಸಿಲ್ ಕೂಡ ಚಾಲ್ತಿಯಲ್ಲಿದೆ. ಊರಿನ ಅಂಘ್ ಅವರ ಮನೆಯ ಪಕ್ಕದಲ್ಲಿನ ಮೈದಾನದಲ್ಲೇ ಊರಿನ ಎಲ್ಲಾ ಕುಟುಂಬಗಳು ಸೇರಿ ಪ್ರತಿವರ್ಷ ನಡೆಯುವ ಔಲಾಂಗ್ ಹಬ್ಬವನ್ನು ಆಚರಿಸುತ್ತಾರೆ. ಸ್ಥಳೀಯರು ಈ ಹಬ್ಬವನ್ನು ಓಯಾ ಎಂದೂ ಕರೆಯುತ್ತಾರೆ.


