2021ರ ಫೆಬ್ರವರಿ 7ರಂದು ಬೆಳಿಗ್ಗೆ 10.30ಕ್ಕೆ ರೆಹ್ನಾ ಬೀಬಿ, ತನ್ನ ಪತಿ, ಅನಸ್ ಶೇಖ್ ಅವರೊಂದಿಗಿನ ದೂರವಾಣಿ ಸಂಪರ್ಕವು ಸಾಧ್ಯವಾಗದಿದ್ದಾಗ, ಹೆಚ್ಚೇನೂ ಯೋಚಿಸಲಿಲ್ಲ. ಕೇವಲ ಎರಡು ಗಂಟೆಗಳ ಮೊದಲು ಅವರು ಮಾತನಾಡಿದ್ದರು. ಅವರಿಗೆ 9 ಗಂಟೆಗೆ ಕರೆ ಮಾಡಿದ್ದ ರೆಹ್ನಾ ಹೀಗೆಂದರು: “ಅಂದು ಬೆಳಿಗ್ಗೆ ಅವರ ಅಜ್ಜಿ ತೀರಿಕೊಂಡಿದ್ದರು.”
ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯ ಭಗಬನ್ಪುರ್ ಗ್ರಾಮದ ಒಂದು ಕೋಣೆಯ ಗುಡಿಸಲಿನ ಹೊರಗೆ ಕುಳಿತಿದ್ದ 33ರ ರೆಹ್ನಾ, “ಅವರಿಗೆ ಶವಸಂಸ್ಕಾರಕ್ಕೆ ಬರಲು ಸಾಧ್ಯವಿರಲಿಲ್ಲವಾಗಿ, ಅಂತ್ಯಕ್ರಿಯೆಯ ಸಮಯಕ್ಕೆ ವಿಡಿಯೋ ಕಾಲ್ ಮಾಡುವಂತೆ ನನಗೆ ತಿಳಿಸಿದ್ದರು” ಎಂದರು. ಅನಸ್, ಉತ್ತರಾಖಂಡದ ಗರ್ವಾಲ್ ಪರ್ವತಗಳಲ್ಲಿ 1700 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿದ್ದರು. ಅವರಿಗೆ ರೆಹ್ನಾ, ಎರಡನೇ ಬಾರಿ ಕರೆಮಾಡಿದಾಗ ಸಂಪರ್ಕವು ಸಾಧ್ಯವಾಗಲಿಲ್ಲ.
ಬೆಳಿಗ್ಗೆ, ರೆಹ್ನಾ ಅವರ ಎರಡು ದೂರವಾಣಿ ಕರೆಗಳ ನಡುವೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದಾದೇವಿ ಹಿಮನದಿಯ ಒಂದು ಭಾಗವು ಒಡೆದು ಅಲಕನಂದಾ, ಧೌಲಿ ಗಂಗಾ ಮತ್ತು ರಿಷಿ ಗಂಗಾ ನದಿಗಳಲ್ಲಿ ಜಲಪ್ರಳಯವಾಯಿತು. ಭಾರೀ ಪ್ರವಾಹದ ಕಾರಣದಿಂದಾಗಿ ನದಿ ದಡಗಳ ಮನೆಗಳು ಕೊಚ್ಚಿಹೋದವು. ಆ ಪ್ರದೇಶದ ಜಲವಿದ್ಯುತ್ ಸ್ಥಾವರಗಳಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರನ್ನೊಳಗೊಂಡಂತೆ ಅನೇಕರು ಇದರಲ್ಲಿ ಸಿಲುಕಿದರು.
ಇವರಲ್ಲಿ ಅನಸ್ನೂ ಒಬ್ಬರು. ಆದರೆ ರೆಹ್ನಾಳಿಗೆ ಇದು ತಿಳಿದಿರಲಿಲ್ಲ. ಆಕೆ ಮತ್ತಷ್ಟು ಬಾರಿ ದೂರವಾಣಿಯಲ್ಲಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆಕೆಗೆ ಚಿಂತೆಯು ಪ್ರಾರಂಭವಾಯಿತು. ಶೀಘ್ರದಲ್ಲೇ ಭಯವೂ ಆವರಿಸಿತು. ಕಣ್ಣೀರು ಸುರಿಸುತ್ತಿದ್ದ ಆಕೆ “ನಾನು ಕರೆಮಾಡುತ್ತಲೇ ಇದ್ದೆ. ಮತ್ತೇನು ಮಾಡಬೇಕೆಂದು ನನಗೆ ತೋಚಲಿಲ್ಲ” ಎಂದರು.







