ಸೋಮೇಶ್ವರ ಏಕನಾಥ್ ಸಲ್ಗರ್ ಅವರು ಸ್ನಾನ ಮುಗಿಸಿ ತಮ್ಮ ಡೇರೆಯ ಹೊರಗೆ ಕುಳಿತು ನವೆಂಬರ್ ತಿಂಗಳ ಹಿತವಾದ ಬಿಸಿಲಿನಲ್ಲಿ ತಮ್ಮ ಒದ್ದೆ ಕೂದಲನ್ನು ಬಾಚುತ್ತಿದ್ದರು. ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾಗಿ 12-13 ಗಂಟೆಗಳ ನಂತರ ಮುಗಿಯುವ ಅವರ ಕೆಸಲದ ಮಧ್ಯೆ ಇದು ಸಣ್ಣ ವಿರಾಮದ ಸಮಯ.
ಸೋಮೇಶ್ವರ ಓರ್ವ ಫಡ್ಕರಿ (ಕಬ್ಬು ಕಟಾವು ಮಾಡುವವರು). ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಹುಡುಕಿಕೊಂಡು ಕೊಲ್ಲಾಪುರಕ್ಕೆ ಕುಟುಂಬ ಸಮೇತ ಬಂದಿರುವ ನೂರಾರು ಕಾರ್ಮಿಕರಲ್ಲಿ ಇವರೂ ಒಬ್ಬರು. ಕೊಲ್ಲಾಪುರ ಜಿಲ್ಲೆಯ ಪರ್ಗಾಂವ್ ಭಡೋಲೆಯಲ್ಲಿರುವ ವಾರ್ನಾ ಸಕ್ಕರೆ ಕಾರ್ಖಾನೆಯಲ್ಲಿನ ಈ ಕಾರ್ಮಿಕರು ಮುಂದಿನ ನಾಲ್ಕೈದು ತಿಂಗಳುಗಳ ಕಾಲ ಇಲ್ಲೇ ಉಳಿದುಕೊಂಡು ಕಬ್ಬು ಕಟಾವಿನ ಕೆಲಸ ಮಾಡಲು ಟೆಂಟ್ಗಳನ್ನು ಕಟ್ಟಿಕೊಂಡಿದ್ದಾರೆ.
ಅವರಲ್ಲಿ ಹೆಚ್ಚಿನವರು ಮರಾಠವಾಡದ ಬೀಡ್ನಂತಹ ಬರ ಪೀಡಿತ ಪ್ರದೇಶಗಳಿಂದ ಬಂದವರು. ಸೋಮೇಶ್ವರ ಭಾವು ಬೀಡ್ ಜಿಲ್ಲೆಯ ಮುಂಗಿಯಿಂದ ತಮ್ಮ ಕುಟುಂಬ ಸಮೇತ ಬಂದಿದ್ದಾರೆ. 650 ಕಿಲೋಮೀಟರ್ ದೂರ ಪ್ರಯಾಣಿಸಿ ಕೊಲ್ಲಾಪುರ ಜಿಲ್ಲೆಯಲ್ಲಿರುವ ಅತ್ಯಧಿಕ ಕಬ್ಬು ಬೆಳೆಯುವ ಈ ಪ್ರದೇಶವನ್ನು ತಲುಪಲು ಮೂರು ದಿನಗಳನ್ನು ತೆಗೆದುಕೊಂಡರು.
"ನನ್ನ ಹೆಂಡತಿ ಪರಿಮಳ ಮತ್ತು ನನ್ನ ಮೂವರು ಗಂಡು ಮಕ್ಕಳಾದ ಪ್ರಮೋದ್, ವಿನೋದ್ ಮತ್ತು ದಶರಥ್ ನನ್ನೊಂದಿಗೆ ಬಂದಿದ್ದಾರೆ," ಎಂದು ಅವರು ಹೇಳುತ್ತಾರೆ. ಟ್ರ್ಯಾಕ್ಟರ್ ಟ್ರಾಲಿಯೊಂದರಲ್ಲಿ ಅಗತ್ಯ ವಸ್ತುಗಳ ಗಂಟುಮೂಟೆ ಕಟ್ಟಿಕೊಂಡು ಇಲ್ಲಿಗೆ ಬಂದಿದ್ದಾರೆ. ಅಡುಗೆ ಮಾಡಲು ಡೇರೆಯೊಳಗೆ ಧಾನ್ಯದ ಚೀಲಗಳು ಮತ್ತು ಗ್ಯಾಸ್ ಸಿಲಿಂಡರ್ ಇಟ್ಟು ಕೊಂಡಿದ್ದಾರೆ.
























