"ಭೋಗೋಲ್ ಸೊಬಾಯಿ ಬನೇರ್ ಪೈ, ಮೋನೊಸಾರ್ ಡ್ಯಾಲಾ ಸುದು ಆಮ್ರಾಯಿ ಬನಾಯಿ [ಶೋಲಾ ಬಳಸಿ ಕದಂ ಹೂವುಗಳನ್ನು ಯಾರು ಬೇಕಾದರೂ ಮಾಡಬಹುದು, ಆದರೆ ಮಾನಸ ದೇವಿಯ 'ಡ್ಯಾಲಾ' ಮಾಡಲು ನಮಗೆ ಮಾತ್ರ ಸಾಧ್ಯ]" ಎಂದು ಬಾಯಿಯಲ್ಲಿ ಅಡಿಕೆ ಎಲೆ ಮೆಲ್ಲುತ್ತಾ, ಅನೇಶ್ವರಿ ಬರ್ಮನ್ ಹೆಮ್ಮೆ ಬೆರೆತ ದನಿಯಲ್ಲಿ ನಗುತ್ತಾ ಹೇಳಿದರು.
ಸೀರೆಯನ್ನು ಮೊಣಕಾಲಿನವರೆಗೆ ಏರಿಸಿಕಟ್ಟಿ, ಕೂದಲನ್ನು ಬಿಗಿಯಾಗಿ ತುರುಬು ಕಟ್ಟಿಕೊಂಡಿದ್ದ 58 ವರ್ಷದ ಅನೇಶ್ವರಿ, ತಮ್ಮ ಸೀರೆಯ ಸೆರಗಿನಿಂದ ಕೈ-ಮುಖ ಒರೆಸಿಕೊಂಡು ತಾನೇ ಗುಡಿಸಿ ಶುಚಿಗೊಳಿಸಿದ ಅಂಗಳದ ಪಡಸಾಲೆಯ ಮೇಲೆ ಕುಳಿತುಕೊಂಡರು. ಇಲ್ಲಿಂದ ಅವರ ಈ ದಿನದ ಶೋಲಾ ಕಲೆಯ ಕೆಲಸ ಆರಂಭಗೊಳ್ಳಲಿತ್ತು. ಬಹಳ ನೈಪುಣ್ಯ ಬೇಡುವ ಈ ಕೆಲಸದ ಜೊತೆಗೆ ಅವರು ತಮ್ಮ ಮನೆಗೆಲಸಗಳನ್ನು ಸಂಭಾಳಿಸಕೊಳ್ಳಬೇಕಿದೆ.
ಜಲಮೂಲಗಳಲ್ಲಿ ಕಂಡುಬರುವ ಶೋಲಾ (ಎಸ್ಚಿನೊಮೆನೆ ಆಸ್ಪೆರಾ ಎಲ್) ಸಸ್ಯದ ಕಾಂಡದಿಂದ ಧಾರ್ಮಿಕ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗುತ್ತದೆ. ಈ ಕಲೆಯು ಪಶ್ಚಿಮ ಬಂಗಾಳದ ಅತ್ಯಂತ ಪ್ರಸಿದ್ಧ ಕರಕುಶಲ ಸಂಪ್ರದಾಯಗಳಲ್ಲಿ ಒಂದು. ಉತ್ತರ ಬಂಗಾಳದ ಕೋಚ್ ಬಿಹಾರ್ ಜಿಲ್ಲೆಯ ಸಿದ್ಧೇಶ್ವರಿ ಎಂಬ ಗ್ರಾಮವು (2011ರ ಜನಗಣತಿಯ ಪ್ರಕಾರ 4,467 ಜನಸಂಖ್ಯೆ ಹೊಂದಿದೆ) ತನ್ನ ಜೀವನೋಪಾಯಕ್ಕಾಗಿ ಈ ಶೋಲಾ ಕಲೆಯನ್ನು ನಂಬಿಕೊಂಡಿರುವ ಹಲವಾರು ಕುಟುಂಬಗಳನ್ನು ಹೊಂದಿದೆ. ಆದರೆ, ಕೂಚ್ ಬಿಹಾರ್-II ಬ್ಲಾಕ್ನ ಈ ಗ್ರಾಮದಲ್ಲಿ ಅನೇಶ್ವರಿ ಅವರ ಕುಟುಂಬದಂತಹ ಕೆಲವೇ ಕೆಲವು ಮಂದಿ ಮಾತ್ರ 'ಮಾನಸ ಡ್ಯಾಲಾ' ತಯಾರಿಸುವ ಕಲೆಯ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ. ಇದು ಶೋಲಾ ಕಾಂಡದ ಮೃದುವಾದ ಭಾಗದಿಂದ ತಯಾರಿಸಿದ ಒಂದು ವಿಶಿಷ್ಟ ರಚನೆಯಾಗಿದ್ದು, ಅದರ ಮೇಲೆ ಸರ್ಪದೇವತೆಯಾದ 'ಮಾನಸ' ದೇವಿಯ ಚಿತ್ರವನ್ನು ಬಿಡಿಸಲಾಗಿರುತ್ತದೆ.
"ಇದನ್ನು ವಂಶ ಪಾರಂಪರಿಕೆಯ ಉದ್ಯೋಗವಾಗಿ ಮಾಡಲಾಗುತ್ತದೆ. ನಿಮ್ಮ ಕುಟುಂಬದನ್ನು ಇದನ್ನು ತಯಾರಿಸುವ ಸಂಪ್ರದಾಯ ಇಲ್ಲವಾದಲ್ಲಿ ನೀವು ಈ ಉದ್ಯೋಗದಲ್ಲಿ ತೊಡಗುವಂತಿಲ್ಲ. ನಮ್ಮದು ಮೊದಲಿನಿಂದಲೂ ಈ ಕೆಲಸವನ್ನು ಮಾಡಿಕೊಂಡು ಬಂದಿರುವ ಕುಟುಂಬ. ಇದು ನಮ್ಮ ಮನೆತನದ ವಿದ್ಯೆ" ಎಂದು ಅವರು ಅಭಿಮಾನದಿಂದ ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿರುವ ರಾಜಬಂಶಿ ಸಮುದಾಯಕ್ಕೆ ಸೇರಿದ ಅವರ ಗಂಡನ ಕುಟುಂಬವು ತಲೆಮಾರುಗಳಿಂದ ಈ ಧಾರ್ಮಿಕ ಆಚರಣೆಯಲ್ಲಿ ತೊಡಗಿಕೊಂಡಿದೆ.

























