ಅದು 2023ರ ಫೆಬ್ರವರಿ ತಿಂಗಳ ಸಂಜೆ ಆರು ಗಂಟೆಯ ಸಮಯ. ಅತ್ತ ಪಶ್ಚಿಮದಲ್ಲಿ ಆಕಾಶವನ್ನು ಕೆಂಪಾಗಿಸಿ ಸೂರ್ಯ ಮುಳುಗುತ್ತಿದ್ದರೆ ಇತ್ತ ಖೊಲ್ದೋಡಾ ಗ್ರಾಮದ ರೈತ ರಾಮಚಂದ್ರ ದೊಡಕೆಯವರು (35) ಮುಂದಿನ ದೀರ್ಘ ರಾತ್ರಿಗಾಗಿ ಸಿದ್ಧವಾಗುತ್ತಿದ್ದರು. ಅವರು ಅವರೊಡನೆ ಬಹಳ ದೂರದವರೆಗೆ ಬೆಳಕು ಬೀರುವ ʼಕಮಾಂಡರ್ʼ ಟಾರ್ಚನ್ನೂ ತಮ್ಮೊಂದಿಗೆ ಇರಿಸಿಕೊಂಡಿದ್ದರು.
ಅವರ ಮನೆಯಲ್ಲಿ ಅವರ ಪತ್ನಿಯಾದ ಜಯಶ್ರೀಯವರು ರಾತ್ರಿಯ ಊಟಕ್ಕಾಗಿ ದಾಲ್ ಮತ್ತು ತರಕಾರಿ ಪಲ್ಯವನ್ನು ತಯಾರಿಸುತ್ತಿದ್ದರು. ಅವರ ಚಿಕ್ಕಪ್ಪ 70 ವರ್ಷದ ದಾದಾಜಿ ದೊಡಕೆ ಕೂಡ ರಾತ್ರಿಯ ತಯಾರಿಯಲ್ಲಿ ನಿರತರಾಗಿದ್ದರು. ಅವರ ಪತ್ನಿ ಶಕುಬಾಯಿ ಅವರು ತಮ್ಮ ಜಮೀನಿನಲ್ಲಿ ಬೆಳೆಯುವ ಪರಿಮಳಯುಕ್ತ ಅಕ್ಕಿಯಿಂದ ಅನ್ನ ಮಾಡುತ್ತಿದ್ದರು ಮತ್ತು ಜೊತೆಗೆ ಚಪಾತಿಗಳನ್ನು ಸಹ ತಯಾರಿಸುತ್ತಿದ್ದರು.
“ನಾವು ತಯಾರಿದ್ದೇವೆ. ಊಟ ತಯಾರಾದ ತಕ್ಷಣ ಹೊರಡುವುದೇ” ಜಯಶ್ರೀ ಮತ್ತು ಸಕ್ಕುಬಾಯಿ ನಮಗೆ ಊಟ ಕಟ್ಟಿ ಕೊಡುತ್ತಾರೆ ಎಂದು 35 ವರ್ಷದ ರೈತ ನನ್ನ ಬಳಿ ಹೇಳಿದರು.
ದಾದಾಜಿ ಮತ್ತು ರಾಮಚಂದ್ರ ಇಬ್ಬರೂ ಮನಾ ಸಮುದಾಯಕ್ಕೆ ಸೇರಿದವರಾಗಿದ್ದು. ರಾಜ್ಯದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ) ಈ ಎರಡು ತಲೆಮಾರಿನ ಸಂಬಂಧಿಗಳು ಇಂದು ನನ್ನ ಅತಿಥೇಯರಾಗಿದ್ದರು. ಈ ರೈತ ಕೀರ್ತನಕಾರರಾಗಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿಷ್ಠಾವಂತ ಅನುಯಾಯಿಯೂ ಹೌದು. ರೈತರಾಗಿರುವ ಅವರು ತನ್ನ ತಂದೆ, ದಾದಾಜಿಯವರ ಅಣ್ಣನೂ ಆದ ಬಿಕಾಜಿಯವರು ದುಡಿಯಲು ಅಸಮರ್ಥರಾದ ನಂತರ 5 ಎಕರೆ ಜಮೀನನ್ನು ಪೂರ್ತಿಯಾಗಿ ವಹಿಸಿಕೊಂಡು ದುಡಿಯುತ್ತಿದ್ದಾರೆ. ಭಿಕಾಜಿ ಒಂದು ಕಾಲದಲ್ಲಿ ಗ್ರಾಮದ 'ಪೊಲೀಸ್ ಪಾಟೀಲ್' ಆಗಿದ್ದರು, ಇದು ಗ್ರಾಮ ಮತ್ತು ಪೊಲೀಸರ ನಡುವಿನ ಸಂಪರ್ಕವಾಗಿ ಕಾರ್ಯನಿರ್ವಹಿಸುವ ಪ್ರಮುಖ ಹುದ್ದೆಯಾಗಿದೆ.
ಅಂದು ನಾಗಪುರ ಜಿಲ್ಲೆಯ ಭಿವಾಪುರ್ ತಹಸಿಲ್ಗೆ ಸೇರಿದ ಒಂದೆರಡು ಮೈಲಿ ದೂರದಲ್ಲಿರುವ ಹೊಲಕ್ಕೆ ರಾತ್ರಿ ಕಾವಲಿಗೆಂದು ನಾವೆಲ್ಲ ಹೊರಟಿದ್ದೆವು. ಅಲ್ಲಿರುವ ರಾಮಚಂದ್ರ ಅವರ ಜಮೀನನಲ್ಲಿನ ಬೆಳೆಗಳಿಗೆ ಕಾಡುಪ್ರಾಣಿಗಳು ದಾಳಿ ಮಾಡದಂತೆ ಕಾಯುವ ಜಗ್ಲಿ ಅಥವಾ ರಾತ್ರಿ ಕಾವಲಿಗೆ ಹೊರಟಿದ್ದ ಗುಂಪಿನಲ್ಲಿ ರಾಮಚಂದ್ರರ ಹಿರಿಯ ಮಗ ಒಂಬತ್ತು ವರ್ಷದ ಅಶುತೋಷ್ ಸೇರಿದಂತೆ ಏಳು ಜನರಿದ್ದೆವು.


























