“ಮಧ್ಯ ಕಾಶ್ಮೀರದ ಗಂದರ್ಬಲ್ ಜಿಲ್ಲೆಯ ನಾಗ್ಬಲ್ ಹಳ್ಳಿಯಲ್ಲಿನ ತನ್ನ ಪರಿವಾರದ ಹೊಲದಲ್ಲಿ ಅಂದು ಅಬ್ದುಲ್ ರೆಹಮಾನ್ ಅವರಿಗೆ ದಣಿವಿನ ದುಡಿಮೆ. ಪತ್ನಿ ಹಲೀಮ, ಸ್ಟೀಲ್ ಲೋಟಕ್ಕೆ ಸುರಿದ ನೀರನ್ನು ಕುಡಿಯುತ್ತ, ಅವರು ಹೀಗೆಂದರು: ಕೋವಿಡ್-19 ಕಣ್ಮರೆಯಾಗದಿದ್ದಲ್ಲಿ, ಇದು, ನನ್ನ ಹೊಲದಲ್ಲಿನ ಭತ್ತದ ಕೃಷಿಯ ಕೊನೆಯ ಋತುವಾಗಬಹುದು.
10 ವರ್ಷಗಳ ನಂತರ ಅವರು ತಮ್ಮ ಪರಿವಾರದ ಒಂದು ಎಕರೆಗಿಂತಲೂ ಚಿಕ್ಕ ಜಮೀನಿನ ಕೆಲಸದಲ್ಲಿ ತೊಡಗಿದ್ದರು. “ವಲಸೆ ಕಾರ್ಮಿಕರು (ಮುಖ್ಯವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ) ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ನಿರ್ವಹಿಸುವ ಕಾರಣ, ನನಗೆ ಹಣದ ಉಳಿತಾಯವಾಗುತ್ತಿತ್ತು. ಹೀಗಾಗಿ, ಇಲ್ಲಿ ನಾನು ಕೆಲಸಮಾಡುವುದನ್ನು ನಿಲ್ಲಿಸಿದ್ದೆ. ಆದರೆ ಈಗ, ʼಹೊರಗಿನʼ ಕಾರ್ಮಿಕರು ಬರದಿದ್ದಲ್ಲಿ, ಭತ್ತದ ಕೃಷಿಯನ್ನು ನಿಲ್ಲಿಸಬೇಕಾಗುತ್ತದೆ” ಎಂದರು ಮಾಜಿ ಸರ್ಕಾರಿ ನೌಕರ, 62 ವರ್ಷದ ರೆಹಮಾನ್.
“ಸುಮಾರು 15 ವರ್ಷಗಳ ನಂತರ ನಾನು ಕಟಾವಿನ ಋತುವಿನಲ್ಲಿ ನಮ್ಮ ಜಮೀನಿನಲ್ಲಿದ್ದೇನೆ. ಭತ್ತದ ಕಟಾವನ್ನು ಹೇಗೆ ಮಾಡಬೇಕೆಂಬುದೇ ನಮಗೆ ಮರೆತುಹೋಗಿದೆ” ಎಂದರು 60 ವರ್ಷದ ಹಲೀಮ. ಕಳೆದ ತಿಂಗಳ ಕಟಾವಿನಲ್ಲಿ ಇವರು ಎರಡು ಕಿ.ಮೀ. ದೂರದ ತಮ್ಮ ಮನೆಯಿಂದ ಪತಿ ಮತ್ತು 29 ವರ್ಷದ ಮಗ ಅಲಿ ಮಹಮ್ಮದ್ ಅವರಿಗೆ ಊಟವನ್ನು ತರುತ್ತಿದ್ದರು. ಇತರೆ ಸಮಯದಲ್ಲಿ ಇವರ ಮಗನಿಗೆ ಮರಳನ್ನು ತೆಗೆಯುವ ಮತ್ತು ನಿರ್ಮಾಣದ ಕಾಮಗಾರಿಗಳಲ್ಲಿ ದಿನಗೂಲಿ ಕಾರ್ಮಿಕರ ಕೆಲಸವು ದೊರೆಯುತ್ತಿತ್ತು.
ಮಧ್ಯ ಕಾಶ್ಮೀರದ ಭತ್ತದ ಜಮೀನುಗಳಲ್ಲಿ, ವಲಸೆ ಕಾರ್ಮಿಕರಿಗೆ ಒಂದು ಕನಲ್ (kanal) ಭತ್ತದ ಕೊಯ್ಲಿಗೆ 1000 ರೂ.ಗಳನ್ನು ಪಾವತಿಸಲಾಗುತ್ತದೆ (8 ಕನಲ್ಗಳು ಒಂದು ಎಕರೆಗೆ ಸಮ). 4-5 ಕಾರ್ಮಿಕರ ತಂಡವು ದಿನವೊಂದಕ್ಕೆ 4-5 ಕನಲ್ ಭತ್ತದ ಕೊಯ್ಲನ್ನು ನಿರ್ವಹಿಸುತ್ತಾರೆ. ಸ್ಥಳೀಯ ಕಾರ್ಮಿಕರು ಪ್ರತಿಯೊಬ್ಬ ಕಾರ್ಮಿಕನಿಗೆ 800 ರೂ.ಗಳ ದುಬಾರಿ ದಿನಗೂಲಿಯನ್ನು ಕೇಳುತ್ತಿದ್ದಾರೆ. ಸಾಮಾನ್ಯವಾಗಿ ನಾಲ್ಕು ಜನ ಕಾರ್ಮಿಕರು ದಿನವೊಂದಕ್ಕೆ ಒಂದು ಕನಲ್ ಕಟಾವನ್ನು ನಿರ್ವಹಿಸುತ್ತಾರೆ. (ಅಪರೂಪವೆಂಬಂತೆ 1.5 ಅಥವಾ 2 ಕನಲ್ಗಳನ್ನು ನಿರ್ವಹಿಸುವುದುಂಟು). ಅಂದರೆ, ಪ್ರತಿ ಕನಲ್ಗೆ ಒಟ್ಟು 3200 ರೂ.ಗಳು.
2019ರ ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಿದ ಹಲವು ತಿಂಗಳ ನಿರಶನದ ನಂತರ ಅತಿ ಶೀಘ್ರದಲ್ಲೇ ಜಾರಿಗೊಳಿಸಲಾದ ಮಾರ್ಚ್ ತಿಂಗಳ ಲಾಕ್ಡೌನ್ ಸಂದರ್ಭದಲ್ಲಿ, ಸ್ಥಳೀಯರಲ್ಲದ ಎಲ್ಲರೂ 24 ಗಂಟೆಗಳ ಒಳಗೆ ಕಾಶ್ಮೀರವನ್ನು ತೊರೆಯಬೇಕೆಂದು ತಿಳಿಸಲಾಯಿತು. ಹೀಗಾಗಿ ಜಮೀನಿನ ಕೆಲಸಕ್ಕೆ ಯಾವುದೇ ವಲಸೆ ಕಾರ್ಮಿಕರು ಲಭ್ಯವಾಗಲಿಲ್ಲ. ಉಳಿದುಕೊಂಡ ಕೆಲವರು ಏಪ್ರಿಲ್-ಮೇ ತಿಂಗಳ ಭತ್ತದ ಬಿತ್ತನೆಯ ಋತುವಿನಲ್ಲಿ ಜಮೀನಿನ ಕೆಲಸದಲ್ಲಿ ತೊಡಗಿದರು. ಇಲ್ಲಿನ ರೈತರು ತಿಳಿಸುವಂತೆ, ಆಗಸ್ಟ್-ಸೆಪ್ಟೆಂಬರ್ ತಿಂಗಳ ಕಟಾವಿನ ಕೆಲಸವು ಹೆಚ್ಚು ಶ್ರಮದಾಯಕವಾಯದುದು.
3200 ರೂ.ಗಳನ್ನು ನಾವು ಭರಿಸಲಾರೆವು. ಈಗ ಭತ್ತದ ಕಟಾವಿನಲ್ಲಿ ಅನುಭವವಿಲ್ಲದ ದಿನಗೂಲಿ ಕಾರ್ಮಿಕರು ಮಾತ್ರವೇ ನಮಗೆ ದೊರೆಯುತ್ತಿದ್ದಾರೆ. ಆದರೆ ನಾವು ಅಸಹಾಯಕರು. ಮುಂದಿನ ವರ್ಷದ ಬಿತ್ತನೆಗೆ ಜಮೀನನ್ನು ಅಣಿಗೊಳಿಸಲು ಫಸಲನ್ನು ಕಟಾವು ಮಾಡಲೇಬೇಕು. ಇದೇ ಕೆಲಸಕ್ಕೆ ವಲಸೆ ಕಾರ್ಮಿಕರು ಕೇವಲ 1000 ರೂ.ಗಳನ್ನಷ್ಟೇ ಪಡೆಯುತ್ತಿದ್ದರು.












