ಸುಡುತ್ತಿರುವ ನನ್ನ ದೇಹ
ʼದುರ್ಗಾ ದುರ್ಗಾʼ ಎನ್ನುತ್ತಿದೆ,
ನಿನ್ನದೊಂದು ಸಾಂತ್ವನಕ್ಕಾಗಿ
ಎರಗಿ ಬೇಡುತ್ತಿರುವೆ ತಾಯೇ…
ದುರ್ಗಾದೇವಿಯ ಗುಣಗಾನ ಮಾಡುತ್ತಿದ್ದ ವಿಜಯ್ ಚಿತ್ರಕಾರ್ ಅವರ ದನಿ ತಾರಕಕ್ಕೆ ಏರುತ್ತಿತ್ತು. ಇಂತಹ ಕಲಾವಿದರು ಮೊದಲು ಹಾಡನ್ನು ಬರೆಯುತ್ತಾರೆ ನಂತರ ಚಿತ್ರ ಬಿಡಿಸುತ್ತಾರೆ – ಸುಮಾರು 14 ಅಡಿಗಳ ತನಕ ಇರುತ್ತದೆ – ಇದನ್ನು ಸಂಗೀತ ಮತ್ತು ಕತೆಯೊಂದಿಗೆ ನೋಡುಗರೆದುರು ಪ್ರಸ್ತುತಪಡಿಸಲಾಗುತ್ತದೆ.
41 ವರ್ಷದ ವಿಜಯ್ ಜಾರ್ಖಂಡ್ ರಾಜ್ಯಸ ಪುರ್ಬಿ ಸಿಂಗ್ಭುಮ್ ಜಿಲ್ಲೆಯ ಅಮಾದೊಬಿ ಗ್ರಾಮದ ನಿವಾಸಿ. ಪೈಟ್ಕರ್ ವರ್ಣಚಿತ್ರಗಳು ಸ್ಥಳೀಯ ಸಂತಾಲಿ ಕಥೆಗಳು, ಗ್ರಾಮೀಣ ಜೀವನಶೈಲಿ, ಪ್ರಕೃತಿ ಮತ್ತು ಪುರಾಣಗಳನ್ನು ಆಧರಿಸಿವೆ ಎಂದು ಅವರು ಹೇಳುತ್ತಾರೆ. "ನಮ್ಮ ಕಲೆಯ ಮುಖ್ಯ ವಿಷಯ ಗ್ರಾಮೀಣ ಸಂಸ್ಕೃತಿ; ನಮ್ಮ ಸುತ್ತಲೂ ಕಾಣುವ ವಸ್ತುಗಳನ್ನು ನಾವು ನಮ್ಮ ಕಲೆಯಲ್ಲಿ ಚಿತ್ರಿಸುತ್ತೇವೆ" ಎಂದು 10 ವರ್ಷದವರಿದ್ದಾಗಿನಿಂದ ಪೈಟ್ಕರ್ ವರ್ಣಚಿತ್ರಗಳನ್ನು ರಚಿಸುತ್ತಿರುವ ವಿಜಯ್ ಹೇಳುತ್ತಾರೆ. "ಕರ್ಮ ನೃತ್ಯ, ಬಹಾ ನೃತ್ಯ, ಅಥವಾ ರಾಮಾಯಣ, ಮಹಾಭಾರತದ ಚಿತ್ರಕಲೆ, ಹಳ್ಳಿಯ ದೃಶ್ಯ..." ಎಂದು ಸಂತಾಲಿ ಚಿತ್ರಕಲೆಯ ವಿವಿಧ ಭಾಗಗಳನ್ನು ಅವರು ವಿವರಿಸುತ್ತಾ, "ಇದು ಮಹಿಳೆಯರು ಮನೆಕೆಲಸಗಳನ್ನು ಮಾಡುವುದನ್ನು, ಗಂಡಸರು ಎತ್ತುಗಳೊಂದಿಗೆ ಹೊಲದಲ್ಲಿ ದುಡಿಯುವುದು ಮತ್ತು ಆಕಾಶದಲ್ಲಿನ ಪಕ್ಷಿಗಳನ್ನು ತೋರಿಸುತ್ತದೆ" ಎಂದು ನಮಗೆ ಹೇಳಿದರು.
"ನಾನು ಈ ಕಲೆಯನ್ನು ನನ್ನ ಅಜ್ಜನಿಂದ ಕಲಿತಿದ್ದು. ಅವರು ಬಹಳ ಪ್ರಸಿದ್ಧ ಕಲಾವಿದರಾಗಿದ್ದರು, ಮತ್ತು ಆಗ ಜನರು ಕಲ್ಕತ್ತಾದಿಂದ [ಕೋಲ್ಕತ್ತಾ] ಅವರ ಸಂಗೀತವನ್ನು ಕೇಳಲು [ಅವರ ಚಿತ್ರಕಲೆಯನ್ನು ನೋಡಲು] ಬರುತ್ತಿದ್ದರು." ವಿಜಯ್ ಅವರ ಕುಟುಂಬದ ಅನೇಕ ತಲೆಮಾರುಗಳು ಪೈಟ್ಕರ್ ವರ್ಣಚಿತ್ರಕಾರರಾಗಿದ್ದು, "ಪಾಟ್ ಯುಕ್ತ್ ಆಕಾರ್, ಮಾನೆ ಪೈಟಿಕರ್, ಇಸಿಲಿಯೇ ಪೈಟ್ಕರ್ ಪೇಂಟಿಂಗ್ ಅಯಾ [ಇದರ ಆಕಾರವು ಸುರುಳಿಯಂತೆ ಇರುತ್ತಿತ್ತು, ಆದ್ದರಿಂದ ಇದಕ್ಕೆ ಪೈಟ್ಕರ್ ಚಿತ್ರಕಲೆ ಎಂಬ ಹೆಸರು ಬಂದಿತು] ಎಂದು ಅವರು ಹೇಳುತ್ತಾರೆ.
















