“ನಾವು ಇಲ್ಲಿಂದ ಹೋಗುವುದಿಲ್ಲ. ಹೋಗುವುದಾದರೂ ಎಲ್ಲಿಗೆ? ಮನೆಯಿಲ್ಲದ ಅನಾಥರಂತೆ ಅಲೆದಾಡಬೇಕಾಗುತ್ತದೆ” ಎಂದರು ರೈತರಾದ ಮುನ್ನಲಾಲ್ ಕುರ್ಮಿ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿರುವ ಭಾರತದ 54ನೇ ಹುಲಿ ಮೀಸಲು ಪ್ರದೇಶವಾದ ವೀರಾಂಗನಾ ದುರ್ಗಾವತಿ (ವಿಡಿಟಿಆರ್) ಇವರ ಊರಾದ ಸರ್ಸೇಲಾ ರೈತ್ ಅನ್ನು ತನ್ನ ವಶ ಮಾಡಿಕೊಳ್ಳಲಿದೆ. ಈ ರಕ್ಷಿತಾರಣ್ಯವು ಒಟ್ಟು 93 ಹಳ್ಳಿಗಳನ್ನು ತನ್ನ ಒಡಲೊಳಗೆ ಸೇರಿಸಿಕೊಳ್ಳಲಿದೆ. ಇನ್ನೂ ಕುತೂಹಲದ ಅಂಶವೆಂದರೆ ಇಲ್ಲಿಗೆ ಚೀತಾ ಕೂಡಾ ಬರಬಹುದು.
ವಿಡಿಟಿಆರ್ ಹುಲಿಗಳ ಆವಾಸಸ್ಥಾನಕ್ಕಾಗಿ ಮೀಸಲಿಡಲಾಗಿರುವ 58 ಉದ್ಯಾನಗಳಲ್ಲಿ ಒಂದು; ಇದನ್ನು ಇತ್ತೀಚೆಗಷ್ಟೇ ಹುಲಿ ಮೀಸಲು ಅರಣ್ಯವಾಗಿ ಘೋಷಿಸಲಾಯಿತು. ಚೀತಾ ಇವುಗಳಲ್ಲಿ ಮೂರರಲ್ಲಿ ಎರಡರಷ್ಟು ಭಾಗವನ್ನು ಹಂಚಿಕೊಳ್ಳಲಿದೆ. ಈ ಅರಣ್ಯಗಳು ಸಂರಕ್ಷಿತ ಅರಣ್ಯಗಳಾಗಿದ್ದು, ಇವುಗಳಿಗೆ ಹುಲಿ, ಚೀತಾಗಳಿಗಷ್ಟೇ ಪ್ರವೇಶ.
ಈ ಮೀಸಲು ಅರಣ್ಯ ಪ್ರದೇಶಗಳನ್ನು ಸ್ಥಾಪಿಸುವ ಸಲುವಾಗಿ – ಇವು ಪ್ರಸ್ತುತ ಸುಮಾರು 80,000 ಚದರ ಕಿಲೋಮೀಟರ್ಗಳಷ್ಟು ಅಥವಾ ಭಾರತದ ಒಟ್ಟು ಅರಣ್ಯ ಪ್ರದೇಶದ ಸರಿಸುಮಾರು ಶೇಕಡಾ 10ರಷ್ಟು ವ್ಯಾಪಿಸಿವೆ – ಒಟ್ಟು 257 ಗ್ರಾಮಗಳನ್ನು ಸ್ಥಳಾಂತರಿಸಲಾಗಿದ್ದು, ಇದರಿಂದ ಅಲ್ಲಿನ ನಿವಾಸಿಗಳು ನೆಲೆ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ದುರ್ಗಾದಾಸ್ ಉಯ್ಕೆ ಅವರು ಡಿಸೆಂಬರ್ 2025ರಲ್ಲಿ ಲೋಕಸಭೆಗೆ ತಿಳಿಸಿದರು. ಇದಲ್ಲದೆ, ಈ ಮೀಸಲು ಅರಣ್ಯಗಳ ವ್ಯಾಪ್ತಿಯಲ್ಲಿರುವ ಇನ್ನೂ 730 ಗ್ರಾಮಗಳನ್ನು ಮುಂದಿನ ಹಂತದಲ್ಲಿ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.
ದಾಮೋಹ್ ಜಿಲ್ಲೆಯ ಇನ್ನೊಂದು ಗ್ರಾಮವಾದ ದಾಬಾ ಹೊಸ ಮೀಸಲು ಅರಣ್ಯ ಪ್ರದೇಶದ ವಿಸ್ತರಣೆಯೊಂದಿಗೆ ಇನ್ನಿಲ್ಲವಾಗಲಿದೆ. "ನಾವು ಎಲ್ಲಿ ಮನೆ ಕಟ್ಟಿಕೊಳ್ಳುವುದು? ಊಟಕ್ಕೆ ಏನು ಮಾಡುವುದು?" ಎನ್ನುವುದು ನೌರಾದೇಹಿ ಅಭಯಾರಣ್ಯದ ಅಂಚಿನಲ್ಲಿರುವ ಆ ಗ್ರಾಮದ ರಾಧಾ ರಾಣಿ ಗೋಂಡ್ ಎನ್ನುವವರ ಪ್ರಶ್ನೆ. ಚಳಿಗಾಲದ ಬಿಸಿಲಿನಲ್ಲಿ ತಮ್ಮ ಮನೆಯ ಅಂಗಳದಲ್ಲಿ ಕುಳಿತು, ಮನೆಗೆ ಬಂದಿರುವ ಗೋಧಿ ಬೆಳೆಯನ್ನು ಕೈಯಲ್ಲಿ ಹಿಡಿದಿರುವ 75 ವರ್ಷದ ಈ ವೃದ್ಧೆ, ತೀವ್ರ ಆತಂಕ ಮತ್ತು ಬೇಸರದಲ್ಲಿದ್ದರು.
ಮೀಸಲು ಅರಣ್ಯಗಳ ಮೂಲಾಧಾರವೆಂದರೆ ಅವುಗಳಿಗೆ ಸಿಗುವ ಭದ್ರ ಕೋಟೆಯಂತಹ ರಕ್ಷಣೆ - ಅಂದರೆ ವನ್ಯಜೀವಿಗಳಿಗಾಗಿ ಜನರನ್ನು ಹೊರಗಿಡುವ ಸಂರಕ್ಷಿತ ಪ್ರದೇಶಗಳು. ಹುಲಿಗಳು ಮತ್ತು ಮನುಷ್ಯರು ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲ ಎನ್ನುವ ಅತಿಯಾದ ಸರಳೀಕೃತ ನಿರೂಪಣೆಯನ್ನು ಇದು ಅನುಸರಿಸುತ್ತದೆ ಎನ್ನುವುದು ಪರಿಸರ ತಜ್ಞರ ಅಭಿಪ್ರಾಯ. ಆದರೆ ವಾಸ್ತವವೆಂದರೆ: ಭಾರತದ ಅರಣ್ಯವಾಸಿ ಸಮುದಾಯಗಳು ಮೊದಲಿನಿಂದಲೂ ಕಾಡು ಪ್ರಾಣಿಗಳೊಂದು ಬದುಕಿಕೊಂಡು ಬಂದಿವೆ. "ಕಾಡನ್ನು ನೋಡಿಕೊಳ್ಳುವವರೇ ನಾವು. ಈಗ ನಮ್ಮನ್ನು ಹೊರಹಾಕಿ ಪ್ರವಾಸಿಗರಿಗೆಂದು ಅತಿಥಿ ಗೃಹ ಕಟ್ಟಿಸಲು ಹೊರಟಿದ್ದಾರೆ" ಎನ್ನುತ್ತಾರೆ ಜನಕ ಬಾಯಿ. ಇವರ ಊರಾದ ಉಮ್ರವಾನ್ ಅನ್ನು 2015ರಲ್ಲಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶದ ವಿಸ್ತರಣೆಯ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು.
























