ರುಜಲುಕ್ ಸು ಯಾರ್ಸು ತಾಯ್ ಗೊವ್ ಬಹಾನಿ ಆಂಥೆ ಆಂಥೆ, ಏಕ್ ದಮ್ ಓ ಪಾಷಾ ಥಾಯಿ ಗೊವ್ ಹಮ್ಲಾಯಿ ಆಂಥೆ ಆಂಥೆ
ಅವನು ಬಂದ ಮತ್ತು ಕಾರಣಗಳನ್ನು ಹೇಳಿ ಹೊರಟ, ನನ್ನನ್ನು ನೋಡಿದ ಮತ್ತೆ ದೂರ ಹೋದ
ಗೆಳೆಯ ಕಾರಣಗಳನ್ನು ಹೇಳಿ ಹೊರಟುಹೋದ, ನನ್ನನ್ನು ನೋಡಿದ ಮತ್ತೆ ದೂರ ಹೋದ



ರುಜಲುಕ್ ಸು ಯಾರ್ಸು ತಾಯ್ ಗೊವ್ ಬಹಾನಿ ಆಂಥೆ ಆಂಥೆ, ಏಕ್ ದಮ್ ಓ ಪಾಷಾ ಥಾಯಿ ಗೊವ್ ಹಮ್ಲಾಯಿ ಆಂಥೆ ಆಂಥೆ
ಅವನು ಬಂದ ಮತ್ತು ಕಾರಣಗಳನ್ನು ಹೇಳಿ ಹೊರಟ, ನನ್ನನ್ನು ನೋಡಿದ ಮತ್ತೆ ದೂರ ಹೋದ
ಗೆಳೆಯ ಕಾರಣಗಳನ್ನು ಹೇಳಿ ಹೊರಟುಹೋದ, ನನ್ನನ್ನು ನೋಡಿದ ಮತ್ತೆ ದೂರ ಹೋದ
ಜಮ್ಮು ಮತ್ತು ಕಾಶ್ಮೀರದ ದರ್ದ್-ಶಿನ್ ಸಮುದಾಯದ ಪ್ರಸಿದ್ಧ ಕವಿ ಗುಲಾಮ್ ರಸೂಲ್ ಮುಷ್ತಾಕ್ ಅವರ ಪದ್ಯವನ್ನು ಸಣ್ಣ ದನಿಯಲ್ಲಿ ಗುನುಗುತ್ತಿದ್ದ ಫರೀದ್ ಅಹ್ಮದ್ ಲೋನ್ ತಮ್ಮ ದೃಷ್ಟಿಯನ್ನು ಕಿಶನ್ಗಂಗಾ ನದಿಯತ್ತ ನೆಟ್ಟಿದ್ದರು.
ದಡದಲ್ಲಿ ಕುಳಿತಿದ್ದ ನಮಗೆ ಸಣ್ಣ ಮಂಜಿನ ಪದರ ನಿರ್ಮಾಣವಾಗುತ್ತಿರುವುದು ಕಾಣುತ್ತಿತ್ತು, ಆದರೆ ನದಿಯಿನ್ನೂ ಹೆಪ್ಪುಗಟ್ಟಿರಲಿಲ್ಲ, ಆದರೆ ಬದಲಾಗುತ್ತಿತ್ತು. ಹವಾಮಾನವೂ ಬದಲಾಗುತ್ತಿತ್ತು.
ಸ್ವಲ್ಪ ದೂರದಲ್ಲಿ, ಸ್ಥಳೀಯ ಮಹಿಳೆಯರು ಉರುವಲು ಮತ್ತು ಹುಲ್ಲಿನ ಕಟ್ಟುಗಳನ್ನು ಹೊತ್ತಿರರುವುದನ್ನು ಕಾಣಬಹುದು, ಕೆಲವರು 25-30 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಹೊತ್ತಿದ್ದಾರೆ. ಇನ್ನೊಬ್ಬ ಮಹಿಳೆ ಹಸುವಿನ ಸಗಣಿಯಿಂದ ತುಂಬಿದ ಟಬ್ ಒಂದನ್ನು ತಮ್ಮ ಸಾಂಪ್ರದಾಯಿಕ ಚಳಿಗಾಲದ ಒಲೆಯಾದ ದಾನಕ್ಕೆ ಇಂಧನವಾಗಿ ಬಳಸುವ ಸಲುವಾಗಿ ಸಂಗ್ರಹಿಸಡಲು ಸಾಗಿಸುತ್ತಿದ್ದರು. ಈ ನಡುವೆ, ಗುರೆಜ್ ಕಣಿವೆಗೆ ಭೇಟಿ ನೀಡಿದ ಪ್ರವಾಸಿಗರು ಕ್ರಮೇಣ ಮನೆಯತ್ತ ಹೊರಡುತ್ತಿದ್ದಾರೆ.
ಫರೀದ್ ಋತುಮಾನದಲ್ಲಿನ ಬದಲಾವಣೆಯ ಚಿಹ್ನೆಗಳನ್ನು ತೋರಿಸುತ್ತಿದ್ದರು. ಅದು ಕೇವಲ ನದಿಯಲ್ಲಿ ಮಾತ್ರ ಕಾಣುತ್ತಿರಲಿಲ್ಲ. ಗುರೇಜ್ ಚಳಿಗಾಲಕ್ಕೆ ತಯಾರಾಗುತ್ತಿದ್ದ ರೀತಿಯಲ್ಲೂ ಕಾಣುತ್ತಿತತು. ದರ್ದ್-ಶಿನ್ಸಮುದಾಯದ ಸದಸ್ಯರಾಗಿರುವಅವರು, ತಮ್ಮ ಸಮುದಾಯದ ಹೆಚ್ಚಿನ ಜನರು ಗುರೆಜ್ ಕಣಿವೆಯಲ್ಲಿವಾಸಿಸುತ್ತಿದ್ದಾರೆ ಎನ್ನುತ್ತಾರೆ. ಈ ಕಣಿವೆ 37,992 ದಾರ್ದಿಕ್ ಜನರಿಗೆನೆಲೆಯಾಗಿದೆ (ಜನಗಣತಿ 2011).

Muzamil Bhat

Muzamil Bhat

Muzamil Bhat

Muzamil Bhat
ಅಕ್ಟೋಬರ್ ತಿಂಗಳ ಚಳಿಯ ಆರಂಭದೊಂದಿಗೆ ಇಡೀ ಕಣಿವೆ ಹಿಮದಿಂದ ಮುಚ್ಚಿಹೋಗುತ್ತದೆ. “ವಯಸ್ಸಾದ ಹಿರಿಯರು ಮಾತ್ರ ಇಲ್ಲಿ ಉಳಿದುಕೊಳ್ಳುತ್ತಾರೆ” ಎಂದು 68 ವರ್ಷದ ಫರೀದ್ ಹೇಳುತ್ತಾರೆ. ಈ ಸಮಯದಲ್ಲಿ ಹಿಮದ ಕಾರಣ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ಸಾಧ್ಯವಾಗುವುದಿಲ್ಲ. “ಇಲ್ಲೇ ಉಳಿದವರು ಸಾಮಾನ್ಯವಾಗಿ ಮನೆಯ ನಾಲ್ಕು ಗೋಡೆಗಳ ನಡುವೆ ಉಳಿದುಬಿಡುತ್ತಾರೆ.”
ಕೆಲವೊಮ್ಮೆ ಕಣಿವೆಯ ಕೆಲವು ಭಾಗಗಳಲ್ಲಿ 15 ಅಡಿಯಷ್ಟು ಎತ್ತರಕ್ಕೆ ಹಿಮ ಬಿದ್ದಿರುತ್ತದೆ. ಇದರಿಂದಾಗಿ ಕಣಿವೆಯು ರಾಜ್ಯದ ಇತರ ಭಾಗಗಳೊಂದಿಗೆ ಕನಿಷ್ಠ ಆರು ತಿಂಗಳುಗಳ ಕಾಲ ಸಂಪರ್ಕ ಕಡಿದುಕೊಳ್ಳುತ್ತದೆ. ಇದೆಲ್ಲದರಿಂದಾಗಿ ಈ ಕಣಿವೆಯ ಹತ್ತಿರ ಹತ್ತಿರ 80 ಶೇಕಡಾದಷ್ಟು ಜನರು ಅನಿವಾರ್ಯವಾಗಿ ವಲಸೆ ಹೋಗಬೇಕಾಗುತ್ತದೆ. “ಕೆಲವರು ಕಾಶ್ಮೀರದ ಇತರ ಭಾಗಗಗಳಿಗೆ ವಲಸೆ ಹೋಗುತ್ತಾರೆ. ಇನ್ನುಳಿದವರು ಕೂಲಿ ಕೆಲಸ ಹುಡುಕಿಕೊಂಡು ಪಂಜಾಬ್, ಹಿಮಾಚಲದಂತಹ ರಾಜ್ಯಗಳಿಗೆ ವಲಸೆ ಹೋಗುತ್ತಾರೆ” ಎಂದು ಈ ತೋಟಗಾರಿಕೆಇಲಾಖೆಯ ನಿವೃತ್ತಹಿರಿಯ ತಂತ್ರಜ್ಞಹೇಳುತ್ತಾರೆ. ಕಾಶ್ಮೀರದಲ್ಲೇ ಉಳಿಯುವವರು ಸಾಮಾನ್ಯವಾಗಿ ಸಣ್ಣ ಹೋಟೆಲ್ಲುಗಳು ಅಥವಾ ಶ್ರೀನಗರದ ಹರಿಸ್ಸಾ ಅಂಗಡಿಗಳಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. (ಓದಿ: ಶ್ರೀನಗರ: ಬಿಸಿ ಹರಿಸ್ಸಾ ಬಿಸಿಯಾಗಿರುವಾಗಲೇ ರುಚಿ)
ಕಠಿಣ ಚಳಿಗಾಲ ಮತ್ತು ತೀವ್ರ ಹವಾಮಾನ ಪರಿಸ್ಥಿತಿಗಳು ಈ ಕಣಿವೆಯಲ್ಲಿ ನಿರಂತರ ಸವಾಲಾಗಿ ಉಳಿದಿವೆ. ಜನವರಿ 25, 2017ರಂದು, ಗುರೆಜ್ ಕಣಿವೆಯಲ್ಲಿ ನಾಲ್ಕು ಹಿಮಪಾತಗಳು ಸಂಭವಿಸಿದವು, ಇದರ ಪರಿಣಾಮವಾಗಿ ದಾವರ್ ಪ್ರದೇಶದಲ್ಲಿರುವ ಫರೀದ್ ಅವರ ನಿವಾಸದಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿರುವ ಮಜ್ಗುಂಡ್ ನೀರುವಿನಲ್ಲಿ 20 ಸೈನಿಕರು ಮತ್ತು ನಾಲ್ವರು ನಾಗರಿಕರು ಸಾವಿಗೀಡಾಗಿದ್ದರು.
ಒಂದು ಕಾಲದಲ್ಲಿ ಗುರೆಜ್ ಕಣಿವೆಯಲ್ಲಿ ಮೂಲಭೂತ ವೈದ್ಯಕೀಯ ಸಹಾಯವನ್ನು ಪಡೆಯುವುದು ಸಾಕಷ್ಟು ಸವಾಲಿನ ಕೆಲಸವಾಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. 1970ರ ದಶಕದ ಆರಂಭದಲ್ಲಿ, ಪಕ್ಕದ ಗ್ರಾಮವಾದ ಮಾರ್ಕೂಟ್ ಎನ್ನುವಲ್ಲಿ ಮೌಲ್ವಿ ಸಾಹೇಬ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಬೋಧಕರೊಬ್ಬರು ಚಳಿಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾದರು. ಹಿಮಪಾತದ ಅಳತೆ 12ರಿಂದ 15 ಅಡಿಗಳ ನಡುವೆಯಿತ್ತು. "ಲೋಗ್ ನ್ಕೋಚಾರ್ಪಾಯ್ ಪೆ ಲೆ ಗಯೇ [ಜನರು ಅವನನ್ನು ಮಂಚದ ಮೇಲೆ ಹೊತ್ತುಕೊಂಡು ಹೋದರು]." ಸುಮಾರು 86 ಕಿಲೋಮೀಟರ್ ದೂರದಲ್ಲಿರುವ ಬಂಡಿಪೋರದ ಆಸ್ಪತ್ರೆಗೆ ತಲುಪಲು ಎರಡು ದಿನಗಳು ಬೇಕಾಯಿತು.
ಮತ್ತೊಂದು ಪ್ರಕರಣದಲ್ಲಿ, ಉಸ್ತಾದ್ ಮೊಹತಾರಾಮ್ [ಗೌರವಾನ್ವಿತ ಶಿಕ್ಷಕ] ಮಗಳು ಹೆರಿಗೆಗೆ ಕಷ್ಟಪಡುತ್ತಿದ್ದಳು. ಆ ಸಮಯದಲ್ಲಿ ಸಿವಿಲ್ ಹೆಲಿಕಾಪ್ಟರುಗಳು ಇದ್ದಿರಲಿಲ್ಲ, ಮತ್ತು ಹೆರಿಗೆಗಾಗಿ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗುತ್ತು. ಆಗ ಭಾರತೀಯ ಸೇನೆ ಸಹಾಯಕ್ಕೆ ಧಾವಿಸಿತು. "ಸೇನೆಯು ಸದ್ಭಾವನಾ ಕೇ ಜರಿಯೆ ಮದದ್ ದೇನಾ ಶುರು ಕಿಯಾ [ಸೇನೆಯು ತಮ್ಮ ಆಪರೇಷನ್ ಸದ್ಭಾವನಾ ಭಾಗವಾಗಿ ಸಹಾಯ ಮಾಡಿತು]."
ಇಂದು, ಪರಿಸ್ಥಿತಿ ಸುಧಾರಿಸಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾದ ಈ ಸಮುದಾಯ ತುರ್ತು ಸಂದರ್ಭಗಳಲ್ಲಿ ಸ್ಥಳಾಂತರಕ್ಕೆ ಸೈನ್ಯವನ್ನೇ ಅವಲಂಬಿಸಿದೆ. ಮತ್ತು ಗರ್ಭಧಾರಣೆ ಮತ್ತು ಹೆರಿಗೆ ಒಂದು ಸಮಸ್ಯೆಯಾಗಿಯೇ ಉಳಿದಿದೆ.

Muzamil Bhat

Muzamil Bhat
ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಹತ್ತಿರದಲ್ಲಿದೆ, ಹೀಗಾಗಿ ಹಂಗಾಮಿ ವಲಸೆಯಯಲ್ಲದೆ ಗಡಿಯಾಚೆಗಿನ ಶೆಲ್ ದಾಳಿಯೂ ಅವರ ಸಮುದಾಯವನ್ನು ಸಮುದಾಯವನ್ನು ಗಂಭೀರವಾಗಿ ಕಾಡುತ್ತದೆ.
ಕ್ಯಾಂಪ್ ಸೈಟ್ ಸುತ್ತ ನಡೆದಾಡುತ್ತಿದ್ದ ಫರೀದ್ ಇದ್ದಕ್ಕಿದ್ದಂತೆ ನಿಂತರು. “ಈ ಸೇತುವೆ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದು 2005ನೇ ಇಸವಿ, ಅಪ್ಪ ಮತ್ತು ಮಗ ನಮ್ಮ ಊರಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಅವರು ನಮ್ಮೂರನ್ನು ಪ್ರವೇಶಿಸಲು ಇದೇ ಸೇತುವೆಯನ್ನು ಬಳಸುತ್ತಿದ್ದರು” ಎಂದು ಅವರು ರಸ್ತೆಯ ಇನ್ನೊಂದು ತುದಿಗಿದ್ದ ಸೇತುವೆಯನ್ನು ತೋರಿಸಿದರು.
"ಬಾಪ್ ಪೀಚೆ ಪೀಚೆ ಬೇಟಾ ಆಗೆ ಆಗೆ [ತಂದೆ ಹಿಂದೆ ಮತ್ತು ಮಗ ಮುಂದಿದ್ದನು]" ಎಂದು ಅಂದು ಹತ್ತಿರದ ಮಸೀದಿಯಲ್ಲಿದ್ದ ಫರೀದ್ ನೆನಪಿಸಿಕೊಳ್ಳುತ್ತಾರೆ ಮತ್ತು ಅವರಿಬ್ಬರೂ ಫರೀದ್ ಅವರಿಗೆ ದೂರದಿಂದಲೇ ಕಾಣುತ್ತಿದ್ದರು. ಅವರಿಬ್ಬರ ಮೇಲೆ ಬಾಂಬ್ ಬೀಳುವುದನ್ನು ಫರೀದ್ ಅಂದು ನೋಡಿದ್ದರು. ಆದರೆ ಆ ಕುಟುಂಬದ ದುರಂತವು ಅಲ್ಲಿಗೆ ಕೊನೆಗೊಳ್ಳಲಿಲ್ಲ ಎಂದು ಅವರು ಹೇಳುತ್ತಾರೆ. ಅದೇ ದಿನ, ಸೇನಾ ಶಿಬಿರದ ಬಳಿ ಪರೀಕ್ಷೆ ಬರೆಯಲು ಮನೆಯಿಂದ ಹೊರಬಂದ ಕುಟುಂಬದ ಬಾಲಕಿಯ ಮೇಲೆಯೂ ವಿವೇಚನಾರಹಿತ ಶೆಲ್ ದಾಳಿ ನಡೆಸಲಾಯಿತು.
"ಏಕ್ ಹಿ ದಿನ್ ಮೇ ಘರ್ ಸೆ ಏಕ್ ಕಾ ಲಡ್ಕಾ ಗಯಾ ಏಕ್ ಕಿ ಲಡ್ಕಿ ಗಯಿ [ಅದೇ ದಿನ, ಒಬ್ಬರು ತಮ್ಮ ಮಗನನ್ನು ಕಳೆದುಕೊಂಡರು ಮತ್ತು ಇನ್ನೊಬ್ಬರು ತಮ್ಮ ಮಗಳನ್ನು ಕಳೆದುಕೊಂಡರು]" ಎಂದು ಅವರು ಪರಿಗೆ ಹೇಳುತ್ತಿದ್ದಂತೆ ಅವರ ಧ್ವನಿ ನಡುಗತೊಡಗಿತು. ಶೆಲ್ ದಾಳಿಯು 20-25 ಮಾನವ ಸಾವುನೋವುಗಳಿಗೆ ಕಾರಣವಾಯಿತು ಮತ್ತು ಹಲವಾರು ಜಾನುವಾರುಗಳು ಮತ್ತು ಜಾನುವಾರುಗಳು ಸಹ ಸಾವಿಗೀಡಾದವು.
ಮತ್ತೊಂದು ಘಟನೆಯಲ್ಲಿ, ಶೆಲ್ ದಾಳಿಯಿಂದಾಗಿ ಮಾರುಕಟ್ಟೆಯ ಬಳಿ ನಿಲ್ಲಿಸಿದ್ದ ಬಸ್ಸಿಗೆ ಬೆಂಕಿ ಹತ್ತಿಕೊಂಡು ಇಡೀ ತುಲೈಲ್ ಮಾರುಕಟ್ಟೆ ನಾಶವಾಯಿತು. ಬೆಂಕಿ ವೇಗವಾಗಿ ಹರಡಿತು ಎಂದು ಅವರು ಹೇಳುತ್ತಾರೆ. ಆ ದಿನಗಳಲ್ಲಿ, ಹೆಚ್ಚಿನ ಅಂಗಡಿ-ಮನೆಗಳನ್ನು ಮರದಿಂದ ಕಟ್ಟಲಾಗುತ್ತಿತ್ತು.
“ಯಾರಾದರೂ ಇಲ್ಲಿ ಏಕೆ ಉಳಿಯಲು ಬಯಸುತ್ತಾರೆ? ಸಾಯುವುದಕ್ಕಾ?” ಕೇಳುತ್ತಾರೆ ಫರೀದ್. ಅವರು ಈಗ ತಮ್ಮಪತ್ನಿ, ನಾಲ್ಕುಗಂಡು ಮಕ್ಕಳುಮತ್ತು ಮೂವರುಹೆಣ್ಣುಮಕ್ಕಳೊಂದಿಗೆ ಜನಪ್ರಿಯತುಲೈಲ್ ಕಣಿವೆಗೆಹೋಗುವ ದಾರಿಯಲ್ಲಿ ಸಿಗುವ ಕೊನೆಯ ಮಾರುಕಟ್ಟೆಯಿರುವ ದಾವರ್ ಎನ್ನುವಲ್ಲಿ ವಾಸಿಸುತ್ತಿದ್ದಾರೆ.

Muzamil Bhat

Muzamil Bhat
ಇದಕ್ಕೂ ಮೊದಲು ಸಹ, ಗುರೆಜ್ ಕಣಿವೆಯಲ್ಲಿ ಹೆಚ್ಚಿನ ಸಂಪಾದನೆ ಅವಕಾಶಗಳು ಇದ್ದಿರಲಿಲ್ಲ. "ಜನರು ಜಾನುವಾರುಗಳನ್ನು ಸಾಕುವ ಮೂಲಕ ಅಥವಾ ಸೈನ್ಯದಲ್ಲಿ ಕೂಲಿಗಳಾಗಿ ಕೆಲಸ ಮಾಡುವ ಮೂಲಕ ಬದುಕು ನಡೆಸುತ್ತಿದ್ದರು." ಪ್ರತಿಯೊಬ್ಬರ ಬಳಿಯೂ ಕುದುರೆಗಳಿದ್ದವು, ಮತ್ತು "ಮುಲಾಜಮತ್ ಬಿಲ್ಕುಲ್ ಕಮ್ಮ್ ಥೀ [ಉದ್ಯೋಗಾವಕಾಶಗಳು ಬಿಲ್ಕುಲ್ ಕಡಿಮೆಯಿದ್ದವು]" ಎಂದು ಅವರು ಹೇಳುತ್ತಾರೆ. ಅನೇಕರು ಸಮುದಾಯದ ಸಾಂಪ್ರದಾಯಿಕ ಕರಕುಶಲ ಕಲೆಯಾದ ಪಟ್ಟು ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದರು. ಓದಿರಿ: ಹರಿದು ಹೋಗುತ್ತಿರುವ ಪಟ್ಟು ನೇಯ್ಗೆಯ ಅಂಚು
ಜನರು ಕಣಿವೆಯ ಇತರ ಭಾಗಗಳಿಗೆ ಪ್ರಯಾಣಿಸಿದಂತೆ ಅಲ್ಲಿ ಉತ್ತಮ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಪಡೆದರು. ಹೀಗಾಗಿ, ಜನರು ಬಂಡಪೊರ್, ಕಂಗನ್, ಗಂಡೇರಬಾಲ್ ಮತ್ತು ಶ್ರೀನಗರದ ಡೌನ್ ಟೌನ್ ರೀತಿಯ ಸ್ಥಳಗಳಲ್ಲಿ ನೆಲೆಸಲು ಪ್ರಾರಂಭಿಸಿದರು ಎಂದು ಫರೀದ್ ವಿವರಿಸುತ್ತಾರೆ.
ಜನರು ಇಲ್ಲಿಂದ ಹೊರಹೋಗುವುದು ಹೆಚ್ಚಾದಂತೆ, ಅವರಿಗೆ ಮಾತೃಭಾಷೆಯಲ್ಲಿ ಮಾತನಾಡುವುದು ಕಷ್ಟವಾಗಿದೆ. ದರ್ದ್-ಶಿನ್ ಜನರು ದಿನಸಿ ಖರೀದಿಸಲು ಬಂಡಿಪೊರಕ್ಕೆ ಹೋದಾಗ, ಇತರ ಕಾಶ್ಮೀರಿಗಳ ಮುಂದೆ ಶಿನಾದಲ್ಲಿ ಮಾತನಾಡುವುದಿಲ್ಲ. "ಏಕ್ ಕಾಂಪ್ಲೆಕ್ಸ್ ಹೋತಾ ಹೈ. ಶಾಯದ್ ಹಮ್ ಅಲಗ್ ಹೈ [ನಾವು ಒಂದು ರೀತಿಯ ಸಂಕೀರ್ಣ ಭಾವನೆಯನ್ನು ಅನುಭವಿಸುತ್ತೇವೆ. ಬಹುಶಃ ನಾವು ಬೇರೆ ರೀತಿಯ ಜನರಿರಬಹುದು]."
ಮೊದಲು ಹೀಗಿರಲಿಲ್ಲ. "ನಾನು ಚಿಕ್ಕವನಿದ್ದಾಗ, ಎಲ್ಲರೂ ಶಿನಾದಲ್ಲಿ ಮಾತನಾಡುವುದನ್ನು ನಾನು ನೋಡಿದ್ದೆ" ಎಂದು ಫರೀದ್ ಹೇಳುತ್ತಾರೆ. "ಆದರೆ ಈಗ, ಮಾರುಕಟ್ಟೆಗೆ ಹೋದರೆ, ನಮ್ಮ ಸಮುದಾಯದ ಯುವಕರು ಉರ್ದು, ಹಿಂದಿ, ಕಾಶ್ಮೀರಿ ಮತ್ತು ಕೆಲವೊಮ್ಮೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದು ಕಾಣುತ್ತದೆ."
ಶಿನಾ ಇಂಡೋ-ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ದಾರ್ದಿಕ್ ಭಾಷೆ. ಯುನೆಸ್ಕೋ ಇದನ್ನು ಅಳಿವಿನಂಚಿನಲ್ಲಿರುವ ಎಂದು ಪಟ್ಟಿ ಮಾಡಿಲ್ಲದಿದ್ದರೂ, ಇದನ್ನು ಮಾತನಾಡುವವರ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ಇದನ್ನು ಈಗ ದುರ್ಬಲ ಭಾಷೆ ಎಂದು ವರ್ಗೀಕರಿಸಲಾಗಿದೆ.
ಕಳೆದ 40 ವರ್ಷಗಳಿಂದ, ಫರೀದ್ ಹಬ್ಬಾ ಖತೂನ್ ಸಾಂಸ್ಕೃತಿಕ ಗುಂಪಿನ ಸದಸ್ಯರಾಗಿ ತಮ್ಮ ಮಾತೃಭಾಷೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಗುರೆಜ್ ಕಣಿವೆಯ ಸ್ಥಳೀಯರಿಂದ ಧನಸಹಾಯ ಪಡೆದ ಮತ್ತು ಸಾಂದರ್ಭಿಕವಾಗಿ ತನ್ನ ಪ್ರದರ್ಶನಗಳಿಗೆ ಹಣ ಪಡೆಯುವ ಮೂಲಕ ಈ ಗುಂಪು ತಮ್ಮ ಸಮುದಾಯದ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

Muzamil Bhat

Muzamil Bhat
ಆದರೆ ದಿನ ಕಳೆದಂತೆ ಈ ಪ್ರಯತ್ನವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿ ಪರಿಣಮಿಸುತ್ತಿದೆ. ಈ ಪ್ರದೇಶದ ಬಹುತೇಕ ಮಕ್ಕಳು ಗುರೆಜ್ ಕಣಿವೆಯ ಹೊರಗೆ ತಮ್ಮ ಓದನ್ನು ಮುಂದುವರಿಸುತ್ತಾರೆ, ಅವರಿಗೆ ಸ್ಥಳೀಯ ಮಾರ್ಗದರ್ಶಕರಿಲ್ಲ. "ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ, ಪಾಠ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉರ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಸಲಾಗುತ್ತದೆ. ಶಾಲೆಗಳಲ್ಲಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಯದಲ್ಲಿ ನಾನು ಶಿನಾ ಭಾಷೆಯಲ್ಲಿ ಹಾಡುಗಳನ್ನು ಪ್ರದರ್ಶಿಸಿದರೆ, ಹೆಚ್ಚಿನ ವಿದ್ಯಾರ್ಥಿಗಳು ಹಾಡುಗಳ ಅರ್ಥವನ್ನು ಗ್ರಹಿಸಲು ಕಷ್ಟಪಡುತ್ತಾರೆ" ಎಂದು ಅವರು ಹೇಳುತ್ತಾರೆ.
ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂತಹ ಪ್ರಮುಖ ಕಾರ್ಯಕ್ರಮಗಳನ್ನು ಕಾಶ್ಮೀರಿ ಮತ್ತು ಉರ್ದುವಿನಲ್ಲಿ ನಡೆಸಲಾಗುತ್ತದೆ. "ಆದರೆ ಈಗ ನಮ್ಮ ಗುಂಪು ಆ ಮನಸ್ಥಿತಿಯನ್ನು ಬದಲಾಯಿಸಿದೆ ಮತ್ತು ಈ ಕಾರ್ಯಕ್ರಮಗಳನ್ನು ನಮ್ಮ ಮಾತೃಭಾಷೆಯಲ್ಲಿ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಜಾನಪದ ಹಾಡು, ಕವಿತೆಗಳನ್ನು ಕಾರ್ಯಕ್ರಮದಲ್ಲಿ ಬಳಸಲಾಗುತ್ತದೆ" ಎಂದು ಅವರು ಹೇಳುತ್ತಾರೆ.
*****
“ಚೌಕ್ ಅಂದ್ರೇನು ಗೊತ್ತಾ?” ವಾನ್ಪೋರಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ತಾರಿಕ್ಪರ್ವೇಜ್ ಲೋನ್ತನ್ನ 10 ನೇತರಗತಿಯ ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಅವರು ತಮ್ಮ ಶಿಕ್ಷಕರತ್ತ ಗೊಂದಲದಿಂದ ನೋಡತೊಡಗಿದರು. ನಂತರ, “ಹಾಗಂದ್ರೆ ಏನು ಸರ್? ಅದು ನೋಡೋದಕ್ಕೆ ಹೇಗಿರುತ್ತದೆ?” ಎಂದು ಕುತೂಹಲದಿಂದ ಕೇಳಿದರು. ಕೂಡಲೇ ಶಿಕ್ಷಕ ಆ ವಸ್ತುವನ್ನು ಬೋರ್ಡ್ ಮೇಲೆ ಬಿಡಿಸಲು ಆರಂಭಿಸುತ್ತಾ, “ಚೌಕ್ ಅಂದ್ರೆ ಮಗ್ಗ. ಇದನ್ನು ನಮ್ಮ ಹಿರಿಯರು ಉಣ್ಣೆಯ ಬಟ್ಟೆಗಳನ್ನು ತಯಾರಿಸಲು ಬಳಸುತ್ತಿದ್ದರು.”
ಪಾಠವನ್ನು ಮುಂದುವರೆಸಿದ ತಾರಿಕ್, ಬೋರ್ಡ್ ಮೇಲೆ ತಿರುಗಣಿಯ ಚಿತ್ರವನ್ನು ಮೂಡಿಸಿದರು. ನಂತರ "ಶಿನಾದಲ್ಲಿ ಇದನ್ನು ಏನೆಂದು ಕರೆಯುತ್ತೇವೆ?" ಎಂದು ಅವರು ತಮ್ಮ ವಿದ್ಯಾರ್ಥಿಗಳನ್ನು ಕೇಳಿದರು. ಒಂದು ಮಗು ಇದನ್ನು 'ಲಟ್ಟು' ಎಂದು ಹೇಳುತ್ತದೆ, ಅದು ಕಾಶ್ಮೀರಿ ಪದವಾಗಿದ್ದು, ನೂಲುವ ಉಪಕರಣದ ಮೇಲ್ಭಾಗವನ್ನು ಸೂಚಿಸುತ್ತದೆ. ತಾರೀಖ್ ಉತ್ತರಿಸುವವರೆಗೂ ಅಲ್ಲಿ ಮೌನ ಆವರಿಸಿತು, "ಇದನ್ನು ತುರ್ಕೈತಿ ಎಂದು ಕರೆಯಲಾಗುತ್ತದೆ."
ಮುಂದುವರೆದಂತೆ, 30 ವಿದ್ಯಾರ್ಥಿಗಳ ತರಗತಿಯಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ತನ್ನ ಮಾತೃಭಾಷೆಯಾದ ಶಿನಾ ಮೂಲಕ ವಸ್ತುಗಳನ್ನು ಅವುಗಳ ಹೆಸರಿನಿಂದ ಗುರುತಿಸಿದ. "ಈ ರೀತಿಯ ಅನೇಕ ಪದಗಳಿವೆ, ಅವು ನಮ್ಮ ದೈನಂದಿನ ಮಾತಿನಿಂದ ಕಣ್ಮರೆಯಾಗಿವೆ ಏಕೆಂದರೆ ನಾವು ಬೇರೆ ಭಾಷೆಗಳಿಗೆ ಹೊಂದಿಕೊಂಡಿದ್ದೇವೆ" ಎಂದು ತಾರಿಕ್ ಹೇಳುತ್ತಾರೆ.

Muzamil Bhat
ಗುರೆಜ್ ಕಣಿವೆಯ ಮಕ್ಕಳು ತಮ್ಮ ಮನೆಗಳಿಂದ ಹೊರಗೆ ಎಂದರೆ ಶಾಲೆಗಳಲ್ಲಿ ದೈನಂದಿನ ಮಾತುಕತೆಗೆ ಉರ್ದು ಮತ್ತು ಕಾಶ್ಮೀರಿಯಂತಹ ಭಾಷೆಗಳನ್ನು ಬಳಸುತ್ತಾರೆ. ಇದಲ್ಲದೆ, ಹೆಚ್ಚಿನ ಮಕ್ಕಳು ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾರೆ.
ತಾರಿಕ್ ಹೇಳುತ್ತಾರೆ, "ವರ್ಷದ 12 ತಿಂಗಳನ್ನು ಗುರೆಜ್ ಕಣಿವೆಯಲ್ಲು ಕಳೆಯುವ ಮಗು, ಈ ಭಾಷೆಯನ್ನು ಮಾತನಾಡುವಾಗ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ." ಆದರೆ ಕೆಲಸ, ಓದು, ಅಥವಾ ಆರೋಗ್ಯ ಸಮಸ್ಯೆಗಳು ಮತ್ತು ಹವಾಮಾನ ಸಮಸ್ಯೆಗಳಿಂದಾಗಿ ವಲಸೆ ಹೋಗುವ ಇತರರು ತಮ್ಮ ಮಾತೃಭಾಷೆಯನ್ನು ನಿರರ್ಗಳವಾಗಿ ಮಾತನಾಡುವಾಗ ಸಮಸ್ಯೆಯನ್ನು ಎದುರಿಸುತ್ತಾರೆ.
ತಾರೀಖ್ ಅವರ ಮಾತನ್ನು ಕೇಳುತ್ತಿದ್ದ ಅವರ ಸಹ ಶಿಕ್ಷಕಿ ನಮ್ಮೊಂದಿಗೆ ಮಾತಿಗೆ ಕುಳಿತು, "ನನ್ನ ಕಿರಿಯ ಮಗಳು ತಾನಾಗಿಯೇ ಉರ್ದು ಕಲಿತಳು, ಫೋನ್ ದೇಖ್ ದೇಖ್ ಕರ್ [ಫೋನಿನಲ್ಲಿ (ವೀಡಿಯೊಗಳನ್ನು) ನೋಡುವ ಮೂಲಕ]." ಅವರು ಮಗಳಿಗೆ ಭಾಷೆಯನ್ನು ಕಲಿಸಲಿಲ್ಲ. ಆದರೆ ಶಿನಾ ಭಾಷೆಯನ್ನು ಕಲಿಸಲು ಪ್ರಯತ್ನಿಸಿದಾಗ, ಕಿರಿಯ ಮಗಳು ಹೆಚ್ಚು ಆಸಕ್ತಿ ತೋರಿಸಲಿಲ್ಲ. ಈಗ ಭಾಷೆಯನ್ನು ಕಲಿಯಲು ಪ್ರಾರಂಭಿಸಿ ಕೇವಲ ಒಂದು ವರ್ಷವಾಗಿದೆ. ಅದೂ ಬಹಳ ನಿಧಾನವಾಗಿ. ಅವರ ಹಿರಿಯ ಮಗಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗಿನಿಂದ ಶಿನಾ ಮಾತನಾಡಲು ಆರಂಭಿಸಿದ್ದಾಳೆ, ಶಾಲೆಯಲ್ಲಿ ಅವರಿಗೆ ಅವರ ಮಾತೃಭಾಷೆಯಲ್ಲಿ ಪಾಠಗಳನ್ನು ಕಲಿಸಲಾಗುತ್ತದೆ.
ಭಾಷೆಯನ್ನು ಜೀವಂತವಾಗಿಡಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಮನೆಯಲ್ಲಿ ಮತ್ತು ಮಾರುಕಟ್ಟೆಯಲ್ಲಿ ಮಾತನಾಡುವುದು ಎನ್ನುವುದು ತಾರಿಕ್ ಅವರ ಅಭಿಪ್ರಾಯ. ಕಾಶ್ಮೀರಿ ಮತ್ತು ಉರ್ದು ಕಲಿಯಲು ತಮ್ಮ ವಿರೋಧವಿಲ್ಲ ಎಂದು ಅವರು ಹೇಳುತ್ತಾರೆ, ಏಕೆಂದರೆ ಮಕ್ಕಳು ಗುರೆಜ್ ಕಣಿವೆಯಿಂದ ಹೊರಗೆ ಹೋದಾಗ ಮತ್ತು ಕಾಶ್ಮೀರದ ಇತರ ಭಾಗಗಳ ಮಕ್ಕಳೊಂದಿಗೆ ಸಂಪರ್ಕ ಸಾಧಿಸಲು ಇದು ಸಹಾಯ ಮಾಡುತ್ತದೆ, ಆದರೆ ನಮ್ಮ ಭಾಷೆಯನ್ನು ಮರೆಯುವುದೆಂದರೆ ನಮ್ಮ ಗುರುತನ್ನು ಮರೆತಂತೆ" ಎಂದು ಅವರು ಹೇಳುತ್ತಾರೆ.
ಆದರೆ ಸಮುದಾಯದ ಅನೇಕ ವಿದ್ಯಾರ್ಥಿಗಳು ತಮ್ಮ ದಾರ್ದಿಕ್ ಗುರುತನ್ನು ಬಹಿರಂಗಪಡಿಸುವ ವಿಷಯದಲ್ಲಿ ಹಿಂಜರಿಕೆ ವ್ಯಕ್ತಪಡಿಸುತ್ತಾರೆ, ಏಕೆಂದರೆ ಅವರನ್ನು "ದರ್ದೇ" ಎಂದು ಅಣಕಿಸಲಾಗುತ್ತದೆ (ಈ ಪದವನ್ನು ಕೆಲವೊಮ್ಮೆ ಸಮುದಾಯವನ್ನು ಅವಹೇಳನ ಮಾಡಲು ಬಳಸಲಾಗುತ್ತದೆ).

Muzamil Bhat

Muzamil Bhat
*****
ಬಂಡಿಪೋರಾದಿಂದ ಗುರೆಜ್ ಮೂಲಕ ಗಿಲ್ಗಿಟ್ ಕಡೆಗೆ ವ್ಯಾಪಾರ ಮತ್ತು ತೀರ್ಥಯಾತ್ರೆಗಾಗಿ ಪ್ರಯಾಣಿಸುವ ಕಾಶ್ಮೀರದ ಜನರಿಗೆ ಗುರೆಜ್ ಕಣಿವೆ ರೇಷ್ಮೆ ಮಾರ್ಗವಾಗಿತ್ತು. ಇದು ಹಜ್ ಯಾತ್ರಿಕರು ಬಳಸುವ ಮಾರ್ಗವೂ ಆಗಿತ್ತು.
ಗುರೆಜ್ ಮತ್ತು ಡ್ರಾಸ್ ಪ್ರದೇಶಗಳಲ್ಲಿ ನೆಲೆಯಾಗಿರುವ ದರ್ದ್-ಶಿನ್ ಬುಡಕಟ್ಟು ಜನಾಂಗವು ವಿಭಿನ್ನ ಸಾಂಸ್ಕೃತಿಕ ಮತ್ತು ಭಾಷಾ ಬೇರುಗಳನ್ನು ಹೊಂದಿದೆ, ಇದು ಒಂದು ಕಾಲದಲ್ಲಿ ಕಾಶ್ಮೀರ ಕಣಿವೆಯಿಂದ ಗಿಲ್ಗಿಟ್ ಮತ್ತು ಅಫ್ಘಾನಿಸ್ತಾನದವರೆಗೆ ವಿಸ್ತರಿಸಿದ ಐತಿಹಾಸಿಕ ಪ್ರದೇಶವಾದ ದಾರ್ದಿಸ್ತಾನ್ ಪ್ರಾಂತ್ಯಕ್ಕೆ ಸೇರಿದೆ. ಕಾಶ್ಮೀರಿಗಳು ಮತ್ತು ದರ್ದ್ ಸಮುದಾಯದ ನಡುವಿನ ಸಂಬಂಧವು 1947ರ ವಿಭಜನೆಗಿಂತಲೂ ಹೆಚ್ಚು ಆಳ ಎಂದು ಮಸೂದ್ ಅಲ್ ಹಸನ್ ಸಮೂನ್ ಹೇಳುತ್ತಾರೆ. "ಪಾರ್ಟಿಷನ್ ತೋ ಕಲ್ ಕಿ ಬಾತ್ ಹೈ [ವಿಭಜನೆ ನಿನ್ನೆ ಮೊನ್ನೆಯ ಕಥೆ]. ದರ್ದ್ ಜನರು ಶತಮಾನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಯಾಗಿದ್ದಾರೆ" ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ 73 ವರ್ಷದ ಮಾಜಿ ಶಿಕ್ಷಣ ಇಲಾಖೆಯ ನಿರ್ದೇಶಕ ಹೇಳುತ್ತಾರೆ.
12ನೇ ಶತಮಾನದ ಕಾಶ್ಮೀರಿ ಇತಿಹಾಸಕಾರ ಕಲ್ಹಣ, ಕಾಶ್ಮೀರದ ರಾಜರ ಕುರಿತ ಸಂಸ್ಕೃತ ಕಾವ್ಯ ಚರಿತ್ರೆ ರಾಜತರಂಗಿಣಿಯಲ್ಲಿ ಗುರೆಜ್ ಕಣವೆಯ ದರ್ದ್ ಜನರನ್ನು ಉಲ್ಲೇಖಿಸುತ್ತಾನೆ. ಗುರೆಜ್ ಪ್ರಾಂತ್ಯದ ರಾಜರು ಆಗಾಗ ಕಣಿವೆಯ ಆಡಳಿತಗಾರರೊಂದಿಗೆ ಯುದ್ಧ ಮಾಡುತ್ತಿದ್ದರು, ಮತ್ತು ದರ್ದ್ ಜನರು ಮತ್ತು ರಾಜ ಹರ್ಷನ ನಡುವೆ ದುದ್ಕತ್ ಪರ್ವತದಲ್ಲಿ ಒಂದು ಗಮನಾರ್ಹ ಯುದ್ಧ ನಡೆಯಿತು (ಇವನು ಭಾರತದ ಹರ್ಷವರ್ಧನ ಅಲ್ಲ).
ತನ್ನದೇ ಆದ ವಿಶಿಷ್ಟ ಲಿಪಿಯಿಲ್ಲದ ಈ ಭಾಷೆ ಮೌಖಿಕ ಸಂಪ್ರದಾಯ, ಜಾನಪದ ಕಥೆ ಮತ್ತು ಜಾನಪದ ಹಾಡುಗಳ ಮೂಲಕ ಉಳಿದುಕೊಂಡಿದೆ. ಆದರೆ ದಶಕಗಳ ಹಂಗಾಮಿ ವಲಸೆ, ಗಡಿಯಾಚೆಗಿನ ಶೆಲ್ ದಾಳಿ ಮತ್ತು ಈ ಪ್ರದೇಶದಲ್ಲಿನ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಕ್ಷುಬ್ಧತೆಯು ಸಮುದಾಯವನ್ನು ಅವರ ಮಾತೃಭಾಷೆಯಿಂದ ಮತ್ತಷ್ಟು ದೂರ ತಳ್ಳುತ್ತಿದೆ.
"ಶ್ರೀನಗರದಲ್ಲಿನ 50 ಮನೆಗಳಲ್ಲಿ ಕೇವಲ ಒಂದು ಮನೆ ಮಾತ್ರ ಶಿನಾ ಮಾತನಾಡಿದರೆ, ಭಾಷೆ ಹೇಗೆ ಉಳಿಯಲು ಸಾಧ್ಯ?" ಅವರ ಸಮುದಾಯದ ಮಕ್ಕಳು ಇತರ ಮಕ್ಕಳೊಂದಿಗೆ ಕಾಶ್ಮೀರಿ ಅಥವಾ ಇತರ ಸಾಮಾನ್ಯ ಭಾಷೆಗಳಲ್ಲಿ ಮಾತನಾಡುತ್ತಾರೆ. ಹೀಗಾದಾಗ ಬಹುಶಃ ಒಂದು ಪೀಳಿಗೆ ಮಾತೃಭಾಷೆಯನ್ನು ಮಾತನಾಡುವುದನ್ನು ಮುಂದುವರಿಸುತ್ತದೆ, ಆದರೆ ಎರಡನೇ ಪೀಳಿಗೆಗೆ ಅದು ಸತ್ತುಹೋಗುತ್ತದೆ ಎಂದು ಅವರು ಹೇಳುತ್ತಾರೆ.
ಪ್ರಸ್ತುತ ಮಸೂದ್ ಪ್ರಸ್ತುತ ಏಕೀಕೃತ ಶಿನಾ ಲಿಪಿಯನ್ನು ರೂಪಿಸುವ ಕೆಲಸ ಮಾಡುತ್ತಿದ್ದು, ಉತ್ತರ ಕಾಶ್ಮೀರದ ಬಂಡಿಪರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. "ಇಲ್ಲಿಯವರೆಗೆ ಶಿನಾ ಭಾಷೆಗಾಗಿ ಎರಡು ಪಠ್ಯ ಲಿಪಿಗಳನ್ನು ಸಿದ್ಧಪಡಿಸಲಾಗಿತ್ತು, ಒಂದು ಜಾರ್ಜ್ ಅಬ್ರಹಾಂ ಗ್ರಿಯರ್ಸನ್ ಅವರಿಂದ ಬರೆಯಲ್ಪಟ್ಟಿದ್ದು, ಅದು ರೋಮನ್ ಲಿಪಿಯಲ್ಲಿದೆ ಮತ್ತು ಇನ್ನೊಂದು ಪಾಕಿಸ್ತಾನದ ಗಿಲ್ಗಿಟ್ ಪ್ರದೇಶದ ಜಿಲ್ಲಾ ಶಿಕ್ಷಣ ಅಧಿಕಾರಿ ಡಾ. ಶುಜಾ ನಮಸ್ ಅವರು ನಸ್ತಾಲಿಕ್ ಲಿಪಿಯನ್ನು ಬಳಸಿಕೊಂಡು ಅದಕ್ಕೆ ಉರ್ದುವಿನಲ್ಲಿ ಗಿಲ್ಗಿಟ್ ಔರ್ ಶಿನಾ ಜಬಾನ್ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದರು."
ಎರಡೂ ಸಂದರ್ಭಗಳಲ್ಲಿ, ದಾಖಲೀಕರಣವಷ್ಟೇ ಅವರ ಸಂಶೋಧನೆಗೆ ಸೀಮಿತವಾಗಿತ್ತು. ಗ್ರಿಯರ್ಸನ್ ಅಥವಾ ಡಾ. ನಾಮಸ್ ಸ್ಥಳೀಯ ಭಾಷಿಕರಾಗಿರಲಿಲ್ಲ. ಹೀಗಾಗಿ ಅವರಿಂದ ಧ್ವನಿವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನು ನಿಖರವಾಗಿ ಸೆರೆಹಿಡಿಯಲು ಸಾಧ್ಯವಾಗಲಿಲ್ಲ.
ಶಿನಾ ನಾಲ್ಕು ವಿಶಿಷ್ಟ ವ್ಯಂಜನಾತ್ಮಕ ಶಬ್ದಗಳನ್ನು ಹೊಂದಿದೆ ಎಂದು ಮಸೂದ್ ಹೇಳುತ್ತಾರೆ, "ಜೋ ಡಾಯೇಂ-ಬಾಯೇಂ ಕಿ ಕಿಸೀ ಲಾಂಗ್ವೇಜ್ ಮೇ ನಹೀನ್ ಹೈ [ಇದು ನೆರೆಯ ಭಾಷೆಗಳಲ್ಲಿ ಇಲ್ಲ], ಉರ್ದು ಅಥವಾ ಫಾರ್ಸಿಯನ್ನು ಮರೆತುಬಿಡಿ, ಇದು ಕಾಶ್ಮೀರಿ ಭಾಷೆಯೆಂತೆಯೂ ಅಲ್ಲ." ಹೀಗಾಗಿ, ಇದಕ್ಕೆ ಅನನ್ಯ ಉಚ್ಛಾರ ಸೂಚಕಗಳನ್ನು ಹೊಂದುವ ಅಗತ್ಯವಿತ್ತು, ಆದರೆ ಅದರಲ್ಲಿ ಯಾರೂ ಯಶಸ್ವಿಯಾಗಲಿಲ್ಲ. ನಂತರ ಪಾಕಿಸ್ತಾನದ ಕಾರಕೋರಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮ್ಮದ್ ಅಮೀನ್ ಜಿಯಾ ಅವರು ಕಂಪ್ಯೂಟರ್ ಬಂದ ಸಮಯದಲ್ಲಿ ವ್ಯಾಕರಣ ಮತ್ತು ಅದರ ನಿಯಮಗಳನ್ನು ಬರೆದರು ಎಂದು ಅವರು ಹೇಳುತ್ತಾರೆ. ಆದರೆ ಅದೂ ಕೂಡ ಲಿಪಿ ಮೇಲೆ ಕೇಂದ್ರೀಕೃತವಾಗಿಲ್ಲ.
ತಾರೀಖ್ ಮಸೂದ್ ಅವರ ಮಾತನ್ನು ಒಪ್ಪುತ್ತಾರೆ ಮತ್ತು ಹೇಳುತ್ತಾರೆ, "ಲಿಪಿ ಇಲ್ಲದೆ ಭಾಷೆಯನ್ನು ಬರೆಯುವುದು ಹೇಗೆ ಮತ್ತು ಕಲಿಸುವುದು ಹೇಗೆ? ಶಿನಾ ವ್ಯಾಕರಣ ಪುಸ್ತಕ ಪ್ರಕಟವಾದ ನಂತರ, ಇದಕ್ಕೆ ಸಂಬಂಧಿಸಿದಂತೆ ಅನೇಕ ಸಮುದಾಯದ ಸದಸ್ಯರು ವಾಟ್ಸಾಪ್ ಗುಂಪನ್ನು ರಚಿಸಿದ್ದರು, ಆದರೆ ಅದು ಕೆಲಸ ಮಾಡಲಿಲ್ಲ" ಎಂದು ಅವರು ಹೇಳುತ್ತಾರೆ.
"ಶಿನಾ ಸಾಹಿತ್ಯದ ಹೆಚ್ಚಿನ ಭಾಗ ಈಗಲೂ ಉರ್ದುವಿನಲ್ಲಿರುವುದರಿಂದ ಸರಿಯಾದ ಲಿಪಿಯಷ್ಟೇ ನಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡಬಲ್ಲದು" ಎಂದು ಫರೀದ್ ಹೇಳುತ್ತಾರೆ. ಹೊಸ ಲಿಪಿಯನ್ನು ಪರಿಚಯಿಸಿದರೆ ಮಕ್ಕಳು ತಮ್ಮ ಮಾತೃಭಾಷೆಗೆ ಹತ್ತಿರವಾಗುತ್ತಾರೆ. "ನಮ್ಮ ಮಕ್ಕಳು ಕಾಶ್ಮೀರದಿಂದ ಹಿಡಿದು ರಷ್ಯಾ ಮತ್ತು ಜರ್ಮನಿಯಂತಹ ಇತರ ದೇಶಗಳಿಗೆ ಹೋದಾಗ, ನಾವು ಅವರಿಗೆ ಆ ವಿದೇಶಿ ಭಾಷೆಗಳನ್ನು ಮೊದಲೇ ಕಲಿಸಿರುವುದಿಲ್ಲ, ಅಲ್ಲವೇ? ಅವರು ಅದನ್ನು ಅಲ್ಲಿ ಕಲಿಯುತ್ತಾರೆ."

Muzamil Bhat

Muzamil Bhat
ಭಾಷೆಗಳನ್ನು ಜೀವಂತವಾಗಿಡುವ ಒಂದು ಮೂಲಭೂತ ಅಂಶವೆಂದರೆ ಸಾಹಿತ್ಯ ಎನ್ನುವುದು ಮಸೂದ್ ಪ್ರತಿಪಾದನೆ. ಅವರು ಕಾಶ್ಮೀರಿ ಸಾಹಿತ್ಯ, ಲಾಲ್ ದೇದ್, ಶೇಖ್-ಉಲ್-ಆಲಂ (ನನ್ ರಿಷಿ ಎಂದೂ ಕರೆಯುತ್ತಾರೆ) ಮತ್ತು ಮಧ್ಯಕಾಲೀನ ಮತ್ತು ಆಧುನಿಕ ಯುಗದ ಹಲವಾರು ಕವಿಗಳನ್ನು ಉಲ್ಲೇಖಿಸುತ್ತಾರೆ. ಇಂದಿಗೂ ಕಾಶ್ಮೀರಿ ಭಾಷೆಯಲ್ಲಿ ಸಾಕಷ್ಟು ಗದ್ಯ ಮತ್ತು ಕವಿತೆಗಳು ಸೃಷ್ಟಿಯಾಗುತ್ತವೆ, ಇದು ಮುಂದಿನ ದಿನಗಳಲ್ಲಿ ಭಾಷೆಯ ಉಳಿವಿನ ಸಾಧನವಾಗಲಿದೆ, "ಆದರೆ ನಾವು ಶಿನಾ ವಿಷಯದಲ್ಲಿ ಹೀಗೆ ಹೇಳಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.
1975ರಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಉರ್ದು ಮತ್ತು ಪರ್ಷಿಯನ್ ಭಾಷೆಗಳನ್ನು ಕಲಿಸುವ ಪೂರ್ಣ ಸಮಯದ ಕೆಲಸ ಸಿಕ್ಕ ನಂತರ ಶಿನಾ ಭಾಷೆಗೆ ವಿಶಿಷ್ಟವಾದ ಲಿಪಿಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಮಸೂದ್ ಅವರ ಪ್ರಯಾಣ ಪ್ರಾರಂಭವಾಯಿತು. "ನಾನು ಜನಪದ ಕತೆಗಳು ಮತ್ತು ಹಾಡುಗಳನ್ನು ಸಂಗ್ರಹಿಸುತ್ತಿದ್ದೆ" ಆದರೆ ಆ ಸಂದರ್ಭದಲ್ಲಿ ಅವರು ಎದುರಿಸುತ್ತಿದ್ದ ಪ್ರಶ್ನೆಯೆಂದರೆ, "ಇದನ್ನು ಹೇಗೆ ಬರೆಯುವುದು!" ಎನ್ನುವುದು.
ನಂತರ ಅವರು ಶಿಕ್ಷಣ ಇಲಾಖೆಯ ನಿರ್ದೇಶಕರಾದಾಗ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಾಲ್ಕನೇ ತರಗತಿಯಿಂದ ಮಾತೃಭಾಷೆಯಲ್ಲಿ ಕಲಿಸಲು ಹೊಸ ಭಾಷಾ ನೀತಿಯನ್ನು ಘೋಷಿಸಲಾಯಿತು. ಅವರು ಹೇಳುತ್ತಾರೆ, "ಲಿಪಿ ಹೊಂದಲು ಅದು ಅತ್ಯುತ್ತಮ ಸಮಯವಾಗಿತ್ತು" ಮತ್ತು ಅದನ್ನು ಕಂಪ್ಯೂಟರಿಗೆ ಹೊಂದಿಕೆಯಾಗುವಂತೆ ಮಾಡಿದರು.
ಅವರು ಲಿಪಿಯನ್ನು ರೂಪಿಸಲು ಪ್ರಯತ್ನಿಸಿದರು ಮತ್ತು ಅದಕ್ಕೆ ಪ್ರೈಮರ್ ಸಹ ಬರೆದರು. ಆದರೆ ನಂತರ ಅವರು ತಮ್ಮ ಕೆಲಸವನ್ನು ತೊರೆದರು, "ಬದುಕಿನಲ್ಲಿ ಕೆಲವು ಸಮಸ್ಯೆಗಳು ಎದುರಾದವು", ಮತ್ತು ಅವರಿಗೆ ಮತ್ತೆ ಅದನ್ನು ಎಂದಿಗೂ ಪ್ರಕಟಿಸಲು ಸಾಧ್ಯವಾಗಲಿಲ್ಲ. ನಿವೃತ್ತಿಯ ನಂತರ ಅವರು ತಮ್ಮ ಪ್ರಯತ್ನಗಳನ್ನು ಪುನರಾರಂಭಿಸಿರುವುದಾಗಿ ಅವರು ಹೇಳುತ್ತಾರೆ.

Muzamil Bhat

Muzamil Bhat
ಲಿಪಿಯನ್ನು ಪ್ರಮಾಣೀಕರಿಸಲು ಅನೇಕ ಪ್ರಯತ್ನಗಳನ್ನು ನಡೆಸಿದ ನಂತರ, ಅವರ ಪಠ್ಯಪುಸ್ತಕ ಪುಮಿಕಿ ಶಿನಾ ಕಿತಾಬ್ ನಾಲ್ಕನೇ ತರಗತಿಯ ಮಕ್ಕಳಿಗೆಂದು ಮುದ್ರಿತಗೊಂಡಿತು. ಆದರೆ, ಆ ಸಮಯದಲ್ಲಿಯೂ, ಶಿನಾ ಇನ್ನೂ ಐಚ್ಛಿಕ ವಿಷಯವಾಗಿತ್ತು. "ನಾನು ಭಾಷಾ ಕಾರ್ಯಕರ್ತನಾದೆ ಮತ್ತು ಕನಿಷ್ಠ ನನ್ನ ಪ್ರದೇಶದಲ್ಲಿ ಲಿಪಿಯನ್ನು ಪ್ರಮಾಣೀಕರಿಸಲಾಗಿದೆ" ಎಂದು ಅವರು ಹೇಳುತ್ತಾರೆ. ಇತ್ತೀಚೆಗೆ, ಮಾತೃಭಾಷೆಯನ್ನು ದಾಖಲಿಸಲು ಇತರ ಪ್ರಯತ್ನಗಳು ನಡೆದಿವೆ. ಶ್ರೀನಗರದ ಕಾಶ್ಮೀರ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗವು ಶಿನಾ ವ್ಯಾಕರಣದ ಬಗ್ಗೆ ಪುಸ್ತಕವನ್ನು ಪ್ರಕಟಿಸಿದೆ.
ಲಿಪಿಯನ್ನು ಪ್ರಮಾಣೀಕರಿಸುವವರೆಗೆ, ಪ್ರಾಥಮಿಕ ಮಟ್ಟದಲ್ಲಿ, ಕನಿಷ್ಠ ಹತ್ತನೇ ತರಗತಿಯವರೆಗೆ ಶಿನಾ ಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡುವುದರಿಂದ ಅದನ್ನು ಹೆಚ್ಚು ಕಾಲ ಉಳಿಸಲು ಸಹಾಯವಾಗುತ್ತದೆ ಎಂದು ಮಸೂದ್ ಹೇಳುತ್ತಾರೆ. ಶಿನಾ ಭಾಷೆಯನ್ನು ಈ ಹಂತದಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರದಂತಹ ಉನ್ನತ ಅಥವಾ ತಾಂತ್ರಿಕ ಅಧ್ಯಯನಗಳಿಗೆ ಬೋಧನಾ ಮಾಧ್ಯಮವಾಗಿ ಬಳಸಲು ಸಾಧ್ಯವಾಗದಿದ್ದರೂ, “ಭಾಷೆ ಸಾಯಬಾರದು” ಎನ್ನುವ ಕಾರಣಕ್ಕಾದರೂ ಸಾಧ್ಯವಿರುವ ಮಟ್ಟಿಗೆ ಭೋದಿಸಬೇಕು ಎಂದು ಅವರು ಹೇಳುತ್ತಾರೆ.
ಅವರು ತಾನು ಸೇವೆಯಲ್ಲಿದ್ದ ಸಮಯದಲ್ಲಿ ಗುರೆಜ್ ಕಣಿವೆಯಲ್ಲಿ ಕರ್ತವ್ಯದಲ್ಲಿದ್ದ ದಿನಗಳ ಅನುಭವಗಳನ್ನು ಹಂಚಿಕೊಂಡರು. ಅವರ ಸಮುದಾಯದ ಯಾರಾದರೂ ಕಚೇರಿಯಲ್ಲಿ ಕಾಶ್ಮೀರಿ ಅಥವಾ ಉರ್ದುವಿನಲ್ಲಿ ಮಾತನಾಡಿದರೆ, "ನಾನು ಶಿನಾದಲ್ಲಿ ಮಾತನಾಡುತ್ತಿದ್ದೇನೆ ನೀವೂ ಅದರಲ್ಲೇ ಮಾತನಾಡಿ ಎಂದು ಬಯ್ಯುತ್ತಿದ್ದೆ!"
“ನೀವು ನಿಮ್ಮ ಕುಟುಂಬದೊಂದಿಗೆ ಮಾತನಾಡುವಾಗಲೂ ಇಂಗ್ಲಿಷ್ ಬಾಷೆಯಲ್ಲಿ ಮಾತನಾಡುತ್ತೀರ? ಫ್ರೆಂಚ್ ಮಾತನಾಡುವ ಜನರು ಅವರ ಮನೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದಿಲ್ಲ. ಅವರ ಭಾಷೆಯಲ್ಲೇ ಮಾತನಾಡುತ್ತಾರೆ. ಆದರೆ ನಾವು ಭಾರತೀಯರು ಮಾತ್ರ ಇಂಗ್ಲಿಷ್ ಭಾಷೆಯ ಮೇಲಿನ ಗುಲಾಮಿ ಮನಸ್ಥಿತಿಯನ್ನು ತೋರಿಸುತ್ತೇವೆ.
ಇಂದು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾರೆ, ಮತ್ತು ಅವರ ಮಾನಸಿಕ ಸಾಮರ್ಥ್ಯವೆಲ್ಲ ವಿದೇಶಿ ಭಾಷೆಗಳನ್ನು ಮಾತನಾಡುವುದರಲ್ಲೇ ಮುಗಿದುಹೋಗುತ್ತದೆ ಎಂದು ಅವರು ಹೇಳುತ್ತಾರೆ. "ಕೇವಲ ಇಂಗ್ಲಿಷರು ಮಾತ್ರ ಬುದ್ಧಿವಂತರೇ. ನಾವು ಹಿಂದೂಸ್ತಾನಿಗಳು ಮೂರ್ಖರೇ? ಇಲ್ಲ, ಆದರೆ ನಾವು ವಿದೇಶಿ ಭಾಷೆಗಳನ್ನು ಕಲಿಯಲು ನಮ್ಮ ಸಮಯವನ್ನು ಕಳೆಯುವುದರಿಂದ ನಮ್ಮ [ಭಾರತೀಯ] ಭಾಷೆಗಳು ಬೆಳವಣಿಗೆ ಕಾಣುತ್ತಿಲ್ಲ" ಎಂದು ಅವರು ಹೇಳುತ್ತಾರೆ.

Muzamil Bhat

Muzamil Bhat

Muzamil Bhat

Muzamil Bhat
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಪ್ರಕಾರ, ಐದನೇ ತರಗತಿಯವರೆಗೆ ಬೋಧನಾ ಮಾಧ್ಯಮವು ಮಗುವಿನ ಮಾತೃಭಾಷೆಯಲ್ಲಿರಬೇಕು. "ಇದು ಬಹುಶಃ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ತರಲಾದ ಅತ್ಯಂತ ಸಂವೇದನಾಶೀಲ ಬದಲಾವಣೆ, ಆದರೆ ಇದನ್ನು ಕಾರ್ಯರೂಪಕ್ಕೆ ತುರುವುದೇ ಸವಾಲು" ಎಂದು ಮಸೂದ್ ಹೇಳುತ್ತಾರೆ.
ಶಿಕ್ಷಣ ಮಂಡಳಿಯು ಕಾಶ್ಮೀರಿ ಮತ್ತು ಡೋಗ್ರಿಯಲ್ಲಿ ಒಂದನೇ ತರಗತಿಯ ಪಠ್ಯಪುಸ್ತಕಗಳಿಗೆ ಇದನ್ನು ಜಾರಿಗೆ ತಂದಿದೆ. ಅವರು ತಾನು ಸುಮಾರು ಒಂದು ವರ್ಷದ ಹಿಂದೆ ಕಳುಹಿಸಿರುವ ಶಿನಾ ಭಾಷೆಯ ಪಠ್ಯಪುಸ್ತಕ ಪ್ರಕಟವಾಗುವುದನ್ನೇ ಕಾಯುತ್ತಿರುವುದಾಗಿ ಹೇಳುತ್ತಾರೆ.
ಈ ನಡುವೆ, ಮಸೂದ್ ತನ್ನ ಸಹ ಕಾರ್ಯಕರ್ತರೊಂದಿಗೆ ಸೇರಿಕೊಂಡು ಶಿನಾ ಲಿಪಿಯನ್ನು ಪ್ರಮಾಣೀಕರಿಸಲು ಪ್ರಯತ್ನಿಸುತ್ತಿದ್ದಾರೆ, "ಆದರೆ ಅದು ಬೇಗನೆ ಮುಗಿಯಲಿದೆ ಎಂದು ನಾನು ನಿಮಗೆ ಭರವಸೆ ನೀಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಅಗತ್ಯ, ಆದರೆ ನನಗೆ ವಯಸ್ಸಾಗುತ್ತಿದೆಯೆನ್ನುವ ಭಯ ಕಾಡುತ್ತಿದೆ" ಎಂದು ಅವರು ಹೇಳುತ್ತಾರೆ.
ಈ ವರದಿಗಾರಿಕೆಗೆ ಸಹಾಯ ಮಾಡಿದ ಮಸೂದ್ ಅಲ್ ಹಸನ್ ಸಮಮೂನ್, ಬಶೀರ್ ಅಹ್ಮದ್ ತೇರೂ, ಫರೀದ್ ಅಹ್ಮದ್ ಲೋನ್ ಮತ್ತು ಅಬ್ರಾರ್-ಉಲ್-ಆಲಂ ಅವರಿಗೆ ವರದಿಗಾರ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಗುಲಾಮ್ ರಸೂಲ್ ಮುಷ್ತಾಕ್ ಅವರ ಶಿನಾ ಕಾವ್ಯವನ್ನು ಫರೀದ್ ವ್ಯಾಖ್ಯಾನಿಸಿದ್ದು, ಅದನ್ನು ಪ್ರತಿಷ್ಠಾ ಪಾಂಡ್ಯ ಸಂಪಾದಿಸಿದ್ದಾರೆ. ಮಸೂದ್ ಅಲ್ ಹಸನ್ ಸಮೂನ್ ಅವರ ಕವಿತೆಗಳನ್ನು ಮುಜಾಮಿಲ್ ಮತ್ತು ಪ್ರತಿಷ್ಠಾ ಪಾಂಡ್ಯ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ.
ಪರಿ ಅಳಿವಿನಂಚಿನಲ್ಲಿರುವ ಭಾಷೆಗಳ ಯೋಜನೆ (ಇಎಲ್ಪಿ), ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಿಂದ ಬೆಂಬಲಿತ ಉಪಕ್ರಮದ ಭಾಗ. ಇದು ಭಾರತದ ದುರ್ಬಲ ಭಾಷೆಗಳನ್ನು ಅವುಗಳನ್ನು ಮಾತನಾಡುವ ಜನರ ಧ್ವನಿಗಳು ಮತ್ತು ಜೀವನಾನುಭವಗಳ ಮೂಲಕ ದಾಖಲಿಸುವ ಗುರಿಯನ್ನು ಹೊಂದಿದೆ.
ಈಸ್ಟೋರಿಯನ್ನು 2025ರ ಪಾರಿ ಸೀನಿಯರ್ ಫೆಲೋಷಿಪ್ ಅಡಿಯಲ್ಲಿ ವರದಿ ಮಾಡಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು
Want to republish this article? Please write to [email protected] with a cc to [email protected]
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/in-gurez-home-is-not-where-the-word-is-kn