“ಅಕ್ಟೋಬರ್ 29ರಂದು ಗಲ್ ಸಿಂಗ್ ಭೂದಾನ ಯೋಜನೆಯಡಿ ನಮಗೆ, ಭಿಲಾಲರಿಗೆ, ನಿಗದಿಸಿ ಇಟ್ಟ 33 ಎಕರೆ ಕೃಷಿ ಜಮೀನನ್ನ ಅಕ್ರಮವಾಗಿ ಒತ್ತುವರಿ ಮಾಡಿದ್ದಕ್ಕಾಗಿ ಹಳ್ಳಿಯ ಬಂಜಾರರ ವಿರುದ್ಧ ದೂರು ಕೊಟ್ಟರು. ಅವರು ಅಲ್ಲಿ ಗುಡಿಸಲುಗಳನ್ನ ಎಬ್ಬಿಸಿ ಒತ್ತುವರಿ ಮಾಡುತಿದ್ದರು. ಆ ದೂರು ಕೊಟ್ಟಿದ್ದು ಬಂಜಾರರರನ್ನ ಕೋಪಗೊಳಿಸಿತು, ಮತ್ತು ಎರಡು ದಿನಗಳ ನಂತರ ಅವರು ಗಲ್ ಸಿಂಗ್ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರು. ತೀವ್ರವಾದ ಗಾಯಗಳಾಗಿ ಅವರನ್ನ ಇಂದೋರಿನ ಒಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು – ಅಲ್ಲಿಯೇ ಅವರು ಒಂದು ತಿಂಗಳ ತರುವಾಯ ತೀರಿ ಹೋದರು. ನಾವು ಆಡಳಿತಕ್ಕೆ ಎಷ್ಟೋ ಸಲ ದೂರು ಕೊಟ್ಟೆವು, ಆದರೇ ಪ್ರಬಲ ವ್ಯಕ್ತಿಗಳ ಪ್ರಭಾವದಿಂದಾಗಿ, ರಾಜಕೀಯ ಒತ್ತಡದಿಂದಾಗಿ ಏನೂ ಆಗಲಿಲ್ಲ,” ಎಂದು ಕಲ್ಲು ಭಿಲಾಲ 2024ರಲ್ಲಿ ಎರಡೂ ಸಮುದಾಯಗಳ ನಡುವೆ ಗುನಾದ ಪನ್ಹೆಟೀ ಎಂಬ ಹಳ್ಳಿಯಲ್ಲಿ ಇಬ್ಬರಿಗೂ ಸೇರದ ಒಂದು ತುಂಡು ಜಮೀನಿನ ಸಲುವಾಗಿ ನಡೆದ ಹಿಂಸಾತ್ಮಕ ಘರ್ಷಣೆಯನ್ನ ನೆನಪಿಸಿಕೊಂಡರು. ಆ ಘಟನೆಯೊಳಗೆ ಗಾಯಗೊಂಡವರಲ್ಲಿ ಅವರೂ ಒಬ್ಬರು.
ಗಲ್ ಸಿಂಗ್ ಸಾವಿನ ಸುದ್ದಿಯ ಹಿಂದೆಯೇ, ಭಿಲಾಲ ಆದಿವಾಸಿಗಳ ಹಾಗೂ ಬಂಜಾರ ಸಮುದಾಯದವರ ನಡುವೆ ಭೀಕರ ಜಗಳ ಹುಟ್ಟಿಕೊಂಡಿತು. ಇದರ ಪರಿಣಾಮ 10 ಬಂಜಾರ ಮನೆಗಳಿಗೆ ಬೆಂಕಿ ಇಡಲಾಯಿತು. ಎರಡೂ ಸಮುದಾಯದ ಹಲವು ಕುಟುಂಬಗಳಿಗೆ ಮನೆಯಿಲ್ಲದಂತಾಯಿತು. ಎಷ್ಟೋ ಜನರು ಭಯದಲ್ಲಿ ಹಳ್ಳಿಯಿಂದ ಓಡಿ ಹೋದರು, ಅದೆಷ್ಟೋ ರಾತ್ರಿಗಳು ಆಕಾಶದಡಿಯಲ್ಲಿ ಛಳಿಯಲ್ಲಿಯೇ ಕಳೆದರು.
“ನಮ್ಮ ಪೂರ್ವಜರಿಗೆ ಭೂದಾನ ಪಟ್ಟಗಳನ್ನು ನೀಡಲಾಗಿತ್ತು,” ಗಲ್ ಸಿಂಗ್, 46, 2024ರ ಶುರುವಿನಲ್ಲಿ ಈ ವರದಿಗಾರರನ್ನ ಭೇಟಿಯಾದಾಗ ತಿಳಿಸಿದ್ದರು. “ಅವರು ಇಲ್ಲಿ ಸುಮಾರು 50-55 ವರ್ಷಗಳ ಹಿಂದೆ ನೆಲೆಯೂರಿದವರು. ಇವತ್ತು ಈ ಪಟ್ಟಗಳಿಗೆ ಭೂ ಸ್ವಾಮಿತ್ವ ಪಟ್ಟವೆಂದು ಹೇಳತಾರೆ. ಆದರೇ ಎಷ್ಟೋ ವರ್ಷಗಳೇ ಕಳೆದರೂ, ನಾವು ನಿಜವಾದ ಭೂ ಸ್ವಾಮಿತ್ವವನ್ನ ಪಡೆಯೋದರಲ್ಲಿ ಸೋತಿದ್ದೇವೆ. ಎಲ್ಲಾ ಭೀಲ, ಭಿಲಾಲ (ಭೀಲರ ಒಂದು ಒಳಸಮುದಾಯ) ಮತ್ತು ಸಹರಿಯ ಆದಿವಾಸಿಗಳಿಗೆ ಇದೊಂದು ತೀವ್ರ ಸಮಸ್ಯೆಯಾಗಿದೆ. ದಬಂಗ್ (ಪ್ರಬಲ ಸಮುದಾಯದ ಜಮೀನುದಾರರು) ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನ ಹೊಂದಿರುವ ಏಷ್ಟೋ ಆದಿವಾಸಿಗಳು ಬಾಮೋರಿ ತಹಶೀಲೀನಲ್ಲಿದ್ದಾರೆ.”
“ಹಲವಾರು ಭೂದಾನ ಪಟ್ಟಗಳು ಗ್ರಾಮದ ಸರ್ವೇ ಸಂಖ್ಯೆಯಡಿಯಲ್ಲಿದೆ,” ಎಂದು ಆಗ ಅವರು ವಿವರಿಸಿದ್ದರು, “ಅವುಗಳನ್ನ ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಪಟ್ವಾರಿ, ತಹಶೀಲದಾರ, ಯಾರಿಂದಲೂ ಸಹ ಇವತ್ತಿನವೆರಗೂ ನಮಗಾಗಿ ಪೋಡಿ ಮತ್ತು ಆಕರಬಂದ ಮಾಡಿಸಿಕೊಡಲು ಆಗಿಲ್ಲ.” ಪ್ರಕ್ರಿಯೆಯನ್ನ ಮುಗಿಸಲು ಬೇಕಾದ ಕಂದಾಯ ಅಧಿಕಾರಿಗಳ ಗೈರುಹಾಜರಿಯಿಂದಾಗಿ ಸಮುದಾಯಗಳು ಸದಾ ಜಗಳಗಳಲ್ಲಿ ತೊಡಗಿರತಾರೆ. ಗಲ್ ಸಿಂಗ್ ತನ್ನ ಜೀವವನ್ನೇ ಕಳೆದುಕೊಳ್ಳುವ ಹಲವು ತಿಂಗಳ ಹಿಂದೆಯೇ ಈ ಕುರಿತು ಮಾತನಾಡಿದ್ದರು.
ಇಂತಹ ಎಲ್ಲ ಘರ್ಷಣೆಗಳಲ್ಲಿ ಮುಖ್ಯವಾದ ಸಮಸ್ಯೆ ಏನೆಂದರೆ ಮೆಲ್ಲಗೆ ಹತ್ತಿ ಉರಿಯುತ್ತಿರುವ, ಅತ್ಯಂತ ಸಂಕೀರ್ಣವಾದ, ಜಾಗದ ಕಿತ್ತಾಟ ಹಾಗೂ ಒಂದು ಬಹುಪದರಗಳಿರುವ ಗೊಂದಲ. ಇದು ಆ ಪ್ರದೇಶದ ಆದಿವಾಸಿಗಳನ್ನ ಇತರೆ ಆದಿವಾಸಿಗಳ ವಿರುದ್ಧ ಎತ್ತಿಕಟ್ಟಿರುವುದಲ್ಲದೆ, ಅವರನ್ನ ಅಂಥದ್ದೇನು ಸುಸ್ಥಿತಿಯಲ್ಲಿ ಇರದ ಇತರೆ ಹಿಂದುಳಿದ ವರ್ಗಗಳೊಂದಿಗೆ, ಪ್ರಬಲ ಸಮುದಾಯದ ಜಮೀನುದಾರರೊಟ್ಟಿಗೆ, ಅರಣ್ಯ ಅಧಿಕಾರಿಗಳೊಟ್ಟಿಗೆ, ಹಾಗೂ ರಾಜಕಾರಣಿಗಳೊಟ್ಟಿಗೆ ಕದನಗಳು ಉಂಟು ಮಾಡಿದೆ.
ಈ ವರದಿಗಾರರು 2022ರಿಂದ ಆದಿವಾಸಿಗಳ ಭೂಮಿಯ ಸುತ್ತ ನಡೆಯುವ ಘರ್ಷಣೆಗಳನ್ನ ದಾಖಲೆ ಮಾಡತಾ ಬಂದಿರುವ ನಿಟ್ಟಿನಲ್ಲಿ ಇಂತಹ ಹಲವಾರು ಘರ್ಷಣೆಗಳನ್ನ ನೋಡಿದ್ದಾರೆ. ಮಧ್ಯಪ್ರದೇಶದ ಗುನಾದಲ್ಲಿನ ಒಂದು ಹಳ್ಳಿಯಯಾದ ಧಾನೋರಿಯದ ರಾಂಪ್ಯಾರಿಯನ್ನ ಪ್ರಬಲ ಸಮುದಾಯಕ್ಕೆ ಸೇರಿದ ಅವರ ಜಮೀನದಾರರು ಜೀವಂತವಾಗಿ ಸುಟ್ಟು ಹಾಕಿದ್ದರು. ಅದರಲ್ಲೂ ಆಕೆ 20-ವರ್ಷಗಳ ದೀರ್ಘಕಾಲ ತನ್ನ ಭೂಮಿಯ ಹಕ್ಕಿಗಾಗಿ ಕಾನೂನು ಹೋರಾಟ ಮಾಡಿ ಗೆದ್ದ ತರುವಾಯ. ಭೂಸ್ವಾಧೀನಕ್ಕಾಗಿ ಈ ರೀತಿಯ ಹಿಂಸಾತ್ಮಕ ಘರ್ಷಣೆಗಳು ಆಕೆಯ ಸಾವಿಗೂ ಹಿಂದಿನಿಂದ ನಡೆದಿರುವಂಥದ್ದು ಹಾಗೂ ಇವತ್ತಿಗೂ ತೀವ್ರವಾಗಿ ನಡೆಯುತ್ತಿರುವಂಥದ್ದು.















