ದೇವತೆಗಳು ಕೆಲವೊಮ್ಮೆ ತಮ್ಮ ಭಕ್ತರೊಂದಿಗೆ ಸಂಚಾರ ಹೊರಡುತ್ತಾರೆ. ಮಾ ಅಂಗರಮೋತಿ ಕೂಡ.
ಸುಮಾರು 45 ವರ್ಷಗಳ ಹಿಂದೆ ಈ ದೇವಿ ಧಯ್-ಚನ್ವಾರ್ ಗ್ರಾಮದಲ್ಲಿ ನೆಲೆಸಿದ್ದಳು. "ಮಹಾನದಿ ಮತ್ತು ಸುಖ ನದಿ ಎಂಬ ಎರಡು ನದಿಗಳ ನಡುವೆ ಮಾ ಅಂಗರಮೋತಿ ನಲೆಸಿದ್ದಳು," ಎಂದು ಸುಮಾರು 50 ವರ್ಷ ಪ್ರಾಯದ, ಈ ಬುಡಕಟ್ಟು ದೇವತೆಯ ಮುಖ್ಯ ಅರ್ಚಕ ಅಥವಾ ಬೈಗಾ ಆಗಿರುವ ಗೊಂಡ ಸಮುದಾಯದ ಈಶ್ವರ್ ನೇತಮ್ ಹೇಳುತ್ತಾರೆ.
ಊರಿಗೆ ಊರೇ ಸ್ಥಳಾಂತರಗೊಂಡರೂ ಮಾ ಅಂಗರಮೋತಿಯ ಜನಪ್ರಿಯತೆಯೇನು ಕಮ್ಮಿಯಾಗಿಲ್ಲ. ಈಗಲೂ ಊರು -ಪರ ಊರುಗಳಿಂದ 500 ರಿಂದ 1,000 ಭಕ್ತರು ಪ್ರತಿದಿನ ದೇವಾಲಯಕ್ಕೆ ಬೇಟಿ ನೀಡುತ್ತಾರೆ. ಈ ಜಾತ್ರೆಗೆ ದೇವತೆಯ ಹೆಸರನ್ನೇ ಇಡಲಾಗಿದೆ. ಆದರೆ ಗಂಗ್ರೇಲ್ ಮಾದಾಯಿ ಎಂದೂ ಕರೆಯುತ್ತಾರೆ. ಇದು ಗ್ರಾಮದ ಹೆಸರೂ ಹೌದು. ಅಲ್ಲದೇ ಹತ್ತಿರದ ಅಣೆಕಟ್ಟನ್ನೂ ಹಾಗೆಯೇ ಕರೆಯುತ್ತಾರೆ. ದೇವಿ ತನ್ನ ಸ್ನೇಹಿತರನ್ನೇನು ಕಳೆದುಕೊಂಡಿಲ್ಲ. ವರ್ಷಂಪ್ರತಿ ದೀಪಾವಳಿಯ ನಂತರ ಬರುವ ಮೊದಲ ಶುಕ್ರವಾರದಂದು ಮಾ ಅಂಗರಮೋತಿ ತನ್ನ ವಾರ್ಷಿಕ ಜಾತ್ರೆಗೆ ನೆರೆಯ ಗ್ರಾಮಗಳ ದೇವತೆಗಳನ್ನು ಆಹ್ವಾನಿಸುತ್ತಾಳೆ.
"ನಮ್ಮ ಹಿರಿಯರ ಕಾಲದಿಂದಲೂ ನಮ್ಮ ಬುಡಕಟ್ಟು ಇರುವ ಪ್ರತಿಯೊಂದು ಹಳ್ಳಿಯಲ್ಲೂ ಈ ಮಾದಾಯಿಯನ್ನು ಪೂಜಿಸುತ್ತೇವೆ," ಎಂದು ಗೊಂಡ ಸಮುದಾಯದ ಬುಡಕಟ್ಟು ನಾಯಕ ಮತ್ತು ಗಂಗ್ರೇಲ್ನಲ್ಲಿ ಜಾತ್ರೆಯನ್ನು ಆಯೋಜಿಸುವ ಮಂಡಳಿಯ ಸದಸ್ಯ ವಿಷ್ಣು ನೇತಮ್ ಹೇಳುತ್ತಾರೆ.
"ಮಾದಾಯಿ ನಮ್ಮ ಬುಡಕಟ್ಟಿನ ಪಾರಂಪರಿಕ ಸಂಸ್ಕೃತಿಯ ಭಾಗ," ಎಂದು ಅವರು ಹೇಳುತ್ತಾರೆ. ಸ್ಥಳೀಯರು ಮತ್ತು ಬೇರೆ ಗ್ರಾಮದವರು ಜಾತ್ರೆಗೆ ಬರುತ್ತಾರೆ, ಉತ್ತಮ ಫಸಲು ಸಿಕ್ಕಿದ್ದಕ್ಕೆ ಕೃತಜ್ಞತೆ ಹೇಳಲು ದೇವಿಗೆ ಹೂವುಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ, ಮುಂಬರುವ ವರ್ಷದುದ್ದಕ್ಕೂ ತಮ್ಮನ್ನು ಆಶೀರ್ವದಿಸುವಂತೆ ಕೋರುತ್ತಾರೆ. ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ಸುಮಾರು 50 ಮಾದಾಯಿಗಳಲ್ಲಿ ಇದೂ ಒಂದು. ಇದು ಮಧ್ಯ ಭಾರತದ ರಾಜ್ಯವಾದ ಛತ್ತೀಸ್ಗಢದ ಈ ಜಿಲ್ಲೆಯಲ್ಲಿ ನಡೆಯುವ ಮೊದಲ ಮಾದಾಯಿ.










