“ಅಕ್ಕಾ ನಾವಿಲ್ಲಿ ನಿಜವಾಗಿಯೂ ನಮ್ಮ ಭಾಷೆಯಲ್ಲಿ ಓದಬಹುದೇ?” ಇದು ಕೈಯಲ್ಲಿ ಕುಡುಕ್ ಭಾಷೆಯ ಪುಸ್ತಕವೊಂದನ್ನು ಹಿಡಿದುಕೊಂಡಿದ್ದ 15 ವರ್ಷದ ಅನ್ಶ್ ಒರಾಂವ್ ಕೇಳಿದ ಪ್ರಶ್ನೆ.
ನಾವೀಗ ಪಶ್ಚಿಮ ಬಂಗಾಳದ ಜಲಪಾಯ್ಗುರಿ ಜಿಲ್ಲೆಯ ಟೀ ತೋಟದ ಕಾರ್ಮಿಕರ ಮಕ್ಕಳು ಓದುತ್ತಿರುವ ಶಾಲೆಯಲ್ಲಿದ್ದೇವೆ. ಅನ್ಶ್ ಮತ್ತು ನನ್ನ ಪೋಷಕರು ಕೆಲಸ ಮಾಡುವ ಟೀ ತೋಟವಿರುವುದು ಲೀಶ್ ನದಿಯ ಪಕ್ಕದಲ್ಲಿ
ಇಲ್ಲಿನ ಬಹುತೇಕ ಕಾರ್ಮಿಕರಂತೆ ನಮ್ಮ ಕುಟುಂಬವೂ ಒರಾಂವ್ ಬುಡಕಟ್ಟಿಗೆ ಸೇರಿದೆ. ನಮ್ಮಪೂರ್ವಜರು ನಾಲ್ಕು ತಲೆಮಾರುಗಳ ಹಿಂದೆ ಛೋಟಾನಾಗ್ಪುರ ಪ್ರಸ್ಥಭೂಮಿ ಪ್ರದೇಶದಿಂದ ಬಂದಿದ್ದರು - ರಾಂಚಿ, ಗುಮ್ಲಾ ಮತ್ತು ಸಿಮ್ದೇಗಾ ಜಿಲ್ಲೆಗಳು - ಇದು ಇಂದಿನ ಜಾರ್ಖಂಡ್ ರಾಜ್ಯದಲ್ಲಿದೆ. ಮನೆಯಲ್ಲಿ ನಾವು ಈಗಲೂ ನಮ್ಮ ಸಮುದಾಯದ ಭಾಷೆಯಾದ ಕುಡುಕ್ ಭಾಷೆಯನ್ನೇ ಮಾತನಾಡುತ್ತೇವೆ. ಆದರೆ ಹೊರಗೆ ಹಿಂದಿ ಹಾಗೂ ಬಂಗಾಳಿಯನ್ನು ಬಳಸುತ್ತೇವೆ. ಹೀಗಾಗಿ ಅನ್ಶ್ ನಮ್ಮ ಮಾತೃಭಾಷೆಯ ಪುಸ್ತಕವನ್ನು ನೋಡಿರಲಿಲ್ಲ.
ನಾನು ಓಡಾಡಿ ಬೆಳೆದಿದ್ದು ಲೀಶ್ ರಿವರ್ ಟೀ ಗಾರ್ಡನ್ ಒಳಗಿನ ಪಾಟಿಬಾರಿಯಲ್ಲಿ. ಜನಗಣತಿಯಲ್ಲಿ ಈ ನದಿಯನ್ನು ಲಿಶ್ (Lish) ಎಂದು ದಾಖಲಿಸಿದೆ. ಆದರೆ ಗ್ರಾಮಸ್ಥರು ಮತ್ತು ಸ್ಥಳೀಯ ಆಡಳಿತ ಲೀಶ್ (Leesh) ಎಂದೇ ಬಳಸುತ್ತದೆ.



















