ಏಪ್ರಿಲ್ 30, 2023ರಂದು, ಹಿಮಾಲಯದ ಧೌಲಾಧರ್ ಶ್ರೇಣಿಯ ಧರ್ಮಶಾಲಾ (ಧರಮ್ಶಾಲಾ ಎಂದೂ ಕರೆಯಲಾಗುತ್ತದೆ) ಪಟ್ಟಣವು ತನ್ನ ಮೊದಲ ಪ್ರೈಡ್ ಮೆರವಣಿಗೆಗೆ ಸಾಕ್ಷಿಯಾಯಿತು.
‘ಈ ಮನೆ ನಿನಗೆ, ನನಗೆ, ಅವನಿಗೆ, ಅವಳಿಗೆ, ಇವರಿಗೆ, ಅವರಿಗೆ ಹೀಗೆ ಎಲ್ಲರಿಗೂ ಸೇರಿದ್ದು’ ಎಂಬ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದುಕೊಂಡು ಜನರು ಮುಖ್ಯ ಮಾರುಕಟ್ಟೆಯಿಂದ ಧರ್ಮಶಾಲಾದ ಟಿಬೆಟಿಯನ್ ನೆಲೆಯಾದ ಮೆಕ್ಲಿಯೋಡ್ಗಂಜ್ನಲ್ಲಿರುವ ದಲೈಲಾಮಾ ದೇವಸ್ಥಾನದ ಕಡೆಗೆ ನಡೆದರು. ನಂತರ ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶವಾದ ಕೊತ್ವಾಲಿ ಬಜಾರ್ ಕಡೆಗೆ ಮೆರವಣಿಗೆ ಮುಂದುವರೆಯಿತು. ಇದು ಧರ್ಮಶಾಲಾದಲ್ಲಿ LGBTQIA+ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿ ನಡೆಸಲಾದ ಮೊದಲ ಸಾರ್ವಜನಿಕ ಸಭೆಯಾಗಿತ್ತು, ಮತ್ತು ಭಾಗವಹಿಸಿದವರಲ್ಲಿ ಹೆಚ್ಚಿನವರು ರಾಜ್ಯದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ಬಂದವರಾಗಿದ್ದರು.
"ನಾವು ಅಜೀಬ್ ಎಂಬ ಪದವನ್ನು ಹೆಮ್ಮೆಯಿಂದ ಬಳಸುತ್ತಿದ್ದೇವೆ" ಎಂದು ಸಂಘಟಕರಲ್ಲಿ ಒಬ್ಬರಾದ ಮತ್ತು ಹಿಮಾಚಲ್ ಕ್ವೀರ್ ಫೌಂಡೇಶನ್ ಇದರ ಸಹ-ಸಂಸ್ಥಾಪಕ ಡಾನ್ ಹಸರ್ ಹೇಳುತ್ತಾರೆ. ತಮ್ಮ ಆಯ್ಕೆಯನ್ನು ವಿವರಿಸುತ್ತಾ, 30 ವರ್ಷದ ಅವರು ಹೇಳುತ್ತಾರೆ, "ನಾವು ವಿಲಕ್ಷಣತೆಯನ್ನು (queerness) ವಿವರಿಸಲು ಇಂಗ್ಲಿಷ್ ಪದಗಳನ್ನು ಬಳಸುತ್ತೇವೆ, ಆದರೆ ಹಿಂದಿ ಮತ್ತು ಪ್ರಾದೇಶಿಕ ಉಪಭಾಷೆಗಳಲ್ಲಿ ಯಾವ ಪದ ಬಳಸುವುದು? ವಿಲಕ್ಷಣತೆ ಮತ್ತು ದ್ರವ್ಯಗುಣದ (fluidity) ಬಗ್ಗೆ ಮಾತನಾಡಲು ನಾವು ಪ್ರಾದೇಶಿಕ ಉಪಭಾಷೆಗಳಲ್ಲಿ ಹಾಡುಗಳು ಮತ್ತು ಕಥೆಗಳನ್ನು ಬಳಸುತ್ತಿದ್ದೇವೆ.
ದೆಹಲಿ, ಚಂಡೀಗಢ, ಕೋಲ್ಕತಾ, ಮುಂಬೈ ಮತ್ತು ರಾಜ್ಯದ ಸಣ್ಣ ಪಟ್ಟಣಗಳಿಂದ 300 ಜನರು ಈ ಮೆರವಣಿಗೆಯ ಭಾಗವಾಗಲು ಬಂದಿದ್ದರು. ಈ ಪ್ರೈಡ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಿಮ್ಲಾದ 20 ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಯುಷ್, "ಇಲ್ಲಿ [ಹಿಮಾಚಲ ಪ್ರದೇಶದಲ್ಲಿ] ಯಾರೂ ಇದರ ಬಗ್ಗೆ ಮಾತನಾಡುವುದಿಲ್ಲ" ಎಂದು ಹೇಳುತ್ತಾರೆ. ಶಾಲಾ ಸಮಯದಲ್ಲಿ ಶೌಚಾಲಯಕ್ಕೆ ಹೋಗುವುದು ಆಯುಷ್ ಪಾಲಿಗೆ ಕಷ್ಟಕರವಾಗಿತ್ತು. "ನನ್ನ ತರಗತಿಯಲ್ಲಿ ಹುಡುಗರು ನನ್ನನ್ನು ಗೇಲಿ ಮಾಡುತ್ತಿದ್ದರು ಮತ್ತು ಬೆದರಿಸುತ್ತಿದ್ದರು. ಆನ್ಲೈನ್ ಮೂಲಕ ಈ ಸಮುದಾಯದ ಸಂಪರ್ಕಕ್ಕೆ ಬಂದ ಮೇಲೆ ನನ್ನಲ್ಲಿ ಸುರಕ್ಷತೆಯ ಭಾವ ಮೂಡಿತು. ಇದು ನನ್ನನ್ನು ಅರ್ಥಮಾಡಿಕೊಳ್ಳುವ ಜನರೊಂದಿಗಿರಲು ನನಗೆ ಅವಕಾಶವನ್ನು ನೀಡಿತು.”
ಆಯುಷ್ ಅವರು ಸಲಹೆಗಾರರಾಗಿ ಪ್ರಾಧ್ಯಾಪಕರೊಂದಿಗೆ ಮುಕ್ತ ಸಂವಾದ ವಲಯಗಳನ್ನು ಆಯೋಜಿಸುವ ಮೂಲಕ ಈ ಚರ್ಚೆಗಳನ್ನು ಕಾಲೇಜಿನಲ್ಲಿಯೂ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಜನರು ಲಿಂಗ ಮತ್ತು ಲೈಂಗಿಕತೆಯ ಬಗ್ಗೆ ಇಲ್ಲಿ ಕಲಿಯುತ್ತಾರೆ ಮತ್ತು ಪ್ರಶ್ನೆಗಳನ್ನು ಹಂಚಿಕೊಳ್ಳುತ್ತಾರೆ.
























