ಈ ಕತೆ ಪುಲಿಟ್ಜರ್ ಸೆಂಟರ್ ಬೆಂಬಲದೊಂದಿಗೆ ಪಾರ್ಥ್ ಎಮ್ ಎನ್ ವರದಿ ಮಾಡುತ್ತಿರುವ ಸರಣಿಯ ಭಾಗ
ಅಸ್ಮಾ ಖಾನ್, 75, ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಗಳಿಗೆ ಚಿಕಿತ್ಸೆ ಕೊಡಿಸಲು ಒಂದು ಮಾಂತ್ರಿಕ ಪರಿಹಾರವೊಂದನ್ನು ಹುಡುಕಿಕೊಂಡು 100 ಕಿಲೋಮೀಟರುಗಳಿಗೂ ಹೆಚ್ಚು ದೂರ ಪ್ರಯಾಣಿಸಿದ್ದಾರೆ. ಇದಾಗಿ 12 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ, ಆದರೆ ತಾಯಿ ಮತ್ತು ಮಗಳು ಇಬ್ಬರೂ ಇನ್ನೂ ಮನೆಗೆ ಹಿಂದಿರುಗಿಲ್ಲ.
ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ಸಂಭಾಜಿ ನಗರ (ಹಿಂದಿನ ಔರಂಗಾಬಾದ್) ಜಿಲ್ಲೆಯ ಒಂದು ಹಳ್ಳಿಯಲ್ಲಿ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಫಾತಿಮಾ ಅವರ ಯೌವನ ಸಮಸ್ಯೆಗಳಿಂದ ಕೂಡಿತ್ತು. ಅವರು ತೀವ್ರವಾದ ತಲೆ ಸುತ್ತುವಿಕೆಯಿಂದ ಬಳಲುತ್ತಿದ್ದರು, ಇದರಿಂದಾಗಿ ಆಗಾಗ್ಗೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು. ಪರಿಸ್ಥಿತಿ ಕ್ರಮೇಣ ಹದಗೆಟ್ಟು ಹಿಂಸಾತ್ಮಕ ಘಟನೆಗಳಿಗೂ ಪ್ರಚೋದಿಸಿತು.
"ವರ್ಷಗಟ್ಟಲೆ ಅವಳನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ತಿರುಗಾಡಿದೆವು" ಎಂದು ಅಸ್ಮಾ ಹೇಳುತ್ತಾರೆ. "ಅವಳಿಗೆ ಚಿಕಿತ್ಸೆ ಕೊಡಿಸಲು ನಮ್ಮ ಜಾನುವಾರುಗಳನ್ನು ಸಹ ಮಾರಿದೆವು, ಆದರೆ ಯಾವುದೂ ಕೆಲಸ ಮಾಡಲಿಲ್ಲ. ಅವಳ ಸ್ಥಿತಿ ಹದಗೆಡುತ್ತಲೇ ಹೋಯಿತು. ಅವಳು ಸ್ಥಿಮಿತ ಕಳೆದುಕೊಳ್ಳುತ್ತಿದ್ದಾಳೆ ಎನ್ನುವುದು ನಮಗೆ ತಿಳಿಯುತ್ತಿತ್ತು."
ಒಂದು ದಿನ, ಫಾತಿಮಾ ಯಾರ ಗುರುತು ಸಿಗದವರಂತೆ ವರ್ತಿಸಲು ಶುರುಮಾಡಿದರು ಮತ್ತು ತೀವ್ರ ಖಿನ್ನತೆಗೆ ಜಾರಿದರು. ಆ ಸಮಯದಲ್ಲಿ ಅವರಿಗೆ ಮೂವತ್ತರ ಆಸುಪಾಸಿನ ವಯಸ್ಸು. ಈ ಸಮಯದಲ್ಲಿ ಅವರ ಪೋಷಕರು ದಿಕ್ಕು ತೋಚದಂತಾದರು. ಹದಗೆಡುತ್ತಿರುವ ಮಾನಸಿಕ ಆರೋಗ್ಯವು ಅವರ ತಂದೆ-ತಾಯಿಯನ್ನು ಕಂಗೆಡಿಸಿತು, ಅವರು ಕುಟುಂಬವು ಆ ಸಂದರ್ಭದಲ್ಲಿ ಮುಂದಿನ ಊಟದ ಬಗ್ಗೆಯೂ ಚಿಂತಿಸುವ ಸ್ಥಿತಿಯಿತ್ತು.
“ಅವಳು ತನ್ನ ಬಟ್ಟೆಗಳನ್ನು ಹರಿದುಕೊಳ್ಳುತ್ತಿದ್ದಳು, ಮತ್ತು ಅವಳನ್ನು ನಿಯಂತ್ರಿಸುವುದು ಹೇಗೆಂದು ನಮಗೆ ತಿಳಿಯುತ್ತಿರಲಿಲ್ಲ” ಎಂದು ಅಸ್ಮಾ ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ, ಒಬ್ಬ ನೆರೆಹೊರೆಯವರು ಒಂದು ಅನಿರೀಕ್ಷಿತ ಸಲಹೆಯನ್ನು ನೀಡಿದರು.
“ಅವರ ಊರಿನಿಂದ 100 ಕಿಲೋಮೀಟರುಗಳಿಗಿಂತಲೂ ಹೆಚ್ಚು ದೂರದಲ್ಲಿ ಮತ್ತೊಂದು ಊರಿದೆ, ಅಲ್ಲಿ ಸುಮಾರು 117 ವರ್ಷಗಳಷ್ಟು ಹಳೆಯದಾದ ಒಂದು ದರ್ಗಾ ಇದೆ. ದಂತಕಥೆಯ ಪ್ರಕಾರ, ಹಜರತ್ ಹಾಜಿ ಅಬ್ದುರ್ ರೆಹಮಾನ್ ಷಾ ಅಲಿಯಾಸ್ ಸೈಲಾನಿ ಷಾ ಬಾಬಾ 19ನೇ ಶತಮಾನದ ಅಂತ್ಯದ ವೇಳೆಗೆ ಪಿಂಪಲ್ಗಾಂವ್ ಸರಾಯಿಗೆ ಬಂದರು. ಈ ಗ್ರಾಮವು ವಿದರ್ಭ ಪ್ರದೇಶದ ಬುಲ್ಧಾನಾ ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ‘ದುಷ್ಟ ಶಕ್ತಿಗಳಿಂದ ಪ್ರಭಾವಿಸಲ್ಪಟ್ಟ’ ಜನರನ್ನು ಮುಕ್ತಗೊಳಿಸುವ ಕೀರ್ತಿಯನ್ನು ಸೈಲಾನಿ ಬಾಬಾ ಹೊಂದಿದ್ದರು. ಮತ್ತು ಅವರ ನೆನಪಿಗಾಗಿ ಇಲ್ಲಿ ನಿರ್ಮಿಸಲಾದ ದರ್ಗಾ ಅವರು ನಿಧನರಾದ ವರ್ಷವಾದ 1908ರಲ್ಲಿ ಪ್ರಾರಂಭವಾಯಿತು.”
ಅಂದಿನಿಂದ ಇಲ್ಲಿ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಉರುಸ್ ಉತ್ಸವವನ್ನು ಆಚರಿಸಲಾಗುತ್ತದೆ, ಇದಕ್ಕೆ ಲಕ್ಷಾಂತರ ಭಕ್ತರು ಹಾಜರಾಗುತ್ತಾರೆ.









