ಗೋಪಾಲನಗರದಲ್ಲಿರುವ ಸಂತಾಲಿ ಸಮುದಾಯದ ಸಣ್ಣ ಮನೆಯೊಂದರ ಮಣ್ಣಿನ ಗೋಡೆಗಳ ತುಂಬಾ ಕಾಡನ್ನು ಚಿತ್ರಿಸಲಾಗಿತ್ತು. ಅದರಲ್ಲಿ, ಛಾವಣಿಯ ಮೂಲಕ ಹಾದುಹೋಗುವ ಮರಗಳು ಪಕ್ಕದಲ್ಲೇ ಬೆಳೆಯುತ್ತಿರುವ ಬೇವಿನ ಮರದ ಕೊಂಬೆಗಳನ್ನು ಅಪ್ಪಿಕೊಂಡಿದ್ದವು. ಗಂಡು ಜಿಂಕೆಯೊಂದು ತನ್ನ ಮರಿಗಳೊಂದಿಗೆ ಓಡಾಡುತ್ತಿರುವ ಹಾದಿಯ ತುಂಬಾ ಪುಟ್ಟ ಪುಟ್ಟ ಹೂವುಗಳು ಅರಳಿ ನಿಂತಿದ್ದವು. ಅವುಗಳ ಸುತ್ತ ದೊಡ್ಡ ದೊಡ್ಡ ಚಿಟ್ಟೆಗಳು ಹಾರಾಡುತ್ತಿದ್ದವು. ಆ ಕಾಡಿನಲ್ಲಿರುವ ಬುಲ್ ಬುಲ್ ಹಕ್ಕಿಗಳು, ಅಡವಿ ಹರಟೆಮಲ್ಲ ಹಕ್ಕಿಗಳು, ಕುಟ್ರ ಹಕ್ಕಿಗಳು ಮತ್ತು ಗಿಳಿಗಳು ಜೀವಂತ ಹಕ್ಕಿಗಳಿಗಿಂತ ದೊಡ್ಡದಾಗಿದ್ದವು. ಅವುಗಳ ರೆಕ್ಕೆಗಳಿಗೆ ಹೊಳೆಯುವ ಬಣ್ಣಗಳನ್ನು ತುಂಬಲಾಗಿತ್ತು. ಹತ್ತಿರದ ಇಲಾಂಬಜಾರ್ ಕಾಡಿನಲ್ಲಿ ಕಾಣಸಿಗುವ ಈ ಹಕ್ಕಿಗಳು ಮಂದ ಬಿಳಿಬಣ್ಣದ ಗೋಡೆಯಲ್ಲಿ ಹಾರಾಡುತ್ತಿದ್ದವು.
ಗೋಡೆಯ ಮೇಲಿರುವ ಈ ಜೀವಿಗಳ ಓಡಾಟವಾಗಿರಲೀ, ಅವುಗಳು ಸೃಷ್ಟಿಸುವ ಭ್ರಮೆಯಾಗಲೀ 75 ವರ್ಷ ಪ್ರಾಯದ ಚುರ್ಕಿ ಟುಡು ಅವರ ನಿದ್ರೆಗೆ ಭಂಗವನ್ನುಂಟು ಮಾಡುತ್ತಿರಲಿಲ್ಲ. ಮೇ ತಿಂಗಳ ಆ ಮಧ್ಯಾಹ್ನ ಮಳೆ ಸುರಿಯಲು ಆರಂಭಿಸಿತ್ತು. ಮಳೆಯ ಹನಿಗಳು ತಗಡಿನ ಛಾವಣಿಯ ಮೇಲೆ ಬಿದ್ದಾಗ ಹೊಮ್ಮುವ ಸಂಗೀತವೂ ಅವರನ್ನು ಎಚ್ಚರಿಸಲಿಲ್ಲ. ಮಣ್ಣಿನ ಕಾಂಥಾ ಕಲೆಯಂತೆ ಕಾಣುವ ಈ ವರ್ಣಚಿತ್ರಗಳನ್ನು ಹೊಂದಿರುವ ಮನೆಯ ಹೊರಗಿನ ಗೋಡೆಗಳನ್ನು ನೋಡುತ್ತಾ ನಾವು ನಡೆಯುವಾಗ ನಮ್ಮ ಹೆಜ್ಜೆ ಸಪ್ಪಳ ಕೇಳಿ ಅವರು ಎಚ್ಚರಗೊಂಡರು.
ಇಲಾಂಬಜಾರ್ ಬ್ಲಾಕ್ನ ಈ ಗ್ರಾಮಕ್ಕೆ ಅಡ್ಡಲಾಗಿ ಹಾದುಹೋಗುವ ಮಣ್ಣಿನ ರಸ್ತೆಯ ಎರಡೂ ಬದಿಗಳಲ್ಲಿ ಇಂತಹ ಅನೇಕ ಸಂತಾಲಿ ಗುಡಿಸಲು ಮನೆಗಳನ್ನು ನೋಡಬಹುದು. ಅವುಗಳ ಗೋಡೆಗಳ ಮೇಲಿರುವ ವರ್ಣರಂಜಿತ ಭಿತ್ತಿಚಿತ್ರಗಳು ನಮ್ಮ ಗಮನ ಸೆಳೆಯುತ್ತವೆ.
“ಈಗೆಲ್ಲಾ ಮಕ್ಕಳು ಮೊಬೈಲ್ ನೋಡಿಕೊಂಡು, ಪತ್ರಿಕೆ ನೋಡಿಕೊಂಡು ಹೊಸ ಹೊಸ ಡಿಸೈನ್ಗಳನ್ನು ಮಾಡುತ್ತಾರೆ. ನಮ್ಮ ಕಾಲದಲ್ಲಿ ಹೀಗೆ ಬೇರೆ ಬೇರೆ ಡಿಸೈನ್ಗಳು ಎಲ್ಲಿದ್ದವು? ನಾವು ಹೊಲದಿಂದ ಮಣ್ಣು ತಂದು ಗೋಡೆಗಳಿಗೆ ಬಣ್ಣ ಬಳಿಯುತ್ತಿದ್ದೆವು,” ಎಂದು ತಮ್ಮ ಕೋಣೆಯಿಂದ ಎದ್ದು ಬಂದು ಮನೆಯ ಬಾಗಿಲಿನ ಬಳಿ ನಿಂತುಕೊಂಡು ಚುರ್ಕಿ ಟುಡು ನಮಗೆ ಹೇಳಿದರು. ಅವರು ಆರಾಮವಾಗಿ ನಮ್ಮೊಂದಿಗೆ ಮಾತನಾಡುತ್ತಿದ್ದ ರೀತಿ, ಈ ಹಳ್ಳಿಯ ಗೋಡೆಗಳಲ್ಲಿರುವ ವರ್ಣಚಿತ್ರಗಳ ಫೋಟೋ ತೆಗೆಯಲು ಆಗಾಗ ಬರುವವರೊಂದಿಗೆ ಅವರು ಸುಲಭವಾಗಿ ಒಗ್ಗಿ ಹೋಗಿರುವುದನ್ನು ತೋರಿಸುತ್ತಿತ್ತು.
ನಮ್ಮ ಮಾತುಗಳನ್ನು ಆಲಿಸಲು ಅವರು ಕಾಯಲಿಲ್ಲ. ನಾವು ಕೂಡ ಉಳಿದವರಂತೆ ತಿಳಿದುಕೊಳ್ಳುವ ಆಸಕ್ತಿಯಿಂದ ಇಲ್ಲಿಗೆ ಬಂದಿದ್ದೇವೆ ಎಂದು ಭಾವಿಸಿ ನೇರವಾಗಿ ಮಾಹಿತಿ ನೀಡಲು ಮುಂದಾದರು. “ಬಿಳಿ ಮಣ್ಣು, ಕೆಂಪು ಮಣ್ಣು ಮತ್ತು ಹ್ನಾರೀರ್ ತೇಲ್ [ಪಾತ್ರೆಯ ತಳದ ಮಸಿ] ನಿಂದ ತಯಾರಿಸಿದ ಕರಿ ಮಣ್ಣು [ಬಣ್ಣ] – ಇವು ನಾವು ಬಳಸುವ ಬಣ್ಣಗಳು,” ಎಂದು ವಿವರಿಸಲಾರಂಭಿಸಿದರು. ಒಂದು ಕ್ಷಣ ಸುಮ್ಮನಾಗಿ, “ಮೊದಲು ಗೋಡೆಯ ಮೇಲಿರುವ ಹಳೆಯ ಮಣ್ಣನ್ನು ಕೆರೆದು ತೆಗೆಯುತ್ತೇವೆ. ನಂತರ ಹೊಸ ಮಣ್ಣನ್ನು ಬಳಿಯುತ್ತೇವೆ. ಅದರ ಮೇಲೆ ಮತ್ತೊಂದು ಕೋಟ್ ಮಣ್ಣನ್ನು ಬಳಿಯುತ್ತೇವೆ. ಕೊನೆಯಲ್ಲಿ ಖಾರಿಮಾಟಿಯಿಂದ [ಸೀಮೆಸುಣ್ಣ ಅಥವಾ ಚಾಕ್] ಚಿತ್ರ ಬರೆದು ಬಣ್ಣ ಹಚ್ಚುತ್ತೇವೆ,” ಎಂದು ಅವರು ಮಾತು ಮುಂದುವರಿಸಿದರು.
ಚುರ್ಕಿಯವರು ಪುರ್ಬಾ ಬರ್ಧಮಾನ್ನ ಅಕುಲಿಯಾ ಗ್ರಾಮದಲ್ಲಿರುವ ತಾವು ಹುಟ್ಟಿದ ಮನೆಯಲ್ಲಿ ಕಳೆದ ಬಾಲ್ಯದ ನೆನಪುಗಳನ್ನು ಮೆಲುಕುಹಾಕಿಕೊಂಡರು. ಸಂತಾಲಿ ಸಮುದಾಯದಲ್ಲಿ ವೇಗವಾಗಿ ಘಟಿಸುತ್ತಿರುವ ಬದಲಾವಣೆಗಳು ಮತ್ತು ಆ ಬದಲಾವಣೆಗಳಿಗೆ ಯುವ ಪೀಳಿಗೆ ಹೊಂದಿಕೊಳ್ಳುತ್ತಿರುವ ರೀತಿಯ ಬಗ್ಗೆ ಇವರಿಗೆ ಚೆನ್ನಾಗಿ ತಿಳಿದಿದೆ. ಸದ್ಯ ಇವರು ತಮ್ಮ ಮಗಳೊಂದಿಗೆ ಗೋಪಾಲನಗರದಲ್ಲಿ ವಾಸವಾಗಿದ್ದಾರೆ. ಬೋಲ್ಪುರದಿಂದ ಇಲಾಂಬಜಾರ್ ಕಾಡಿಗೆ ಹೋಗುವ ದಾರಿಯಲ್ಲಿ ಸಿಗುವ ಶ್ರೀನಿಕೇತನ ರಸ್ತೆಯ ಎಡಭಾಗದಲ್ಲಿರುವ ಈ ಊರಿನ 304 ಮನೆಗಳಲ್ಲಿ ಇವರ ಮನೆಯೂ ಒಂದು.


















