ಬಾಲೋ ಮಾಝಿ ಮತ್ತು ಇತರ ಒಂಬತ್ತು ಮಂದಿ ಕಟ್ಟಡ ಕಾರ್ಮಿಕರು ಎರಡು ವಾರಗಳ ಕಾಲ ಒಂದು ಅಸಾಮಾನ್ಯ ಕೆಲಸದಲ್ಲಿ ತೊಡಗಿದ್ದರು: ಹತ್ತಿರದ ಕಾಡುಗಳಿಂದ ಸೌದೆಯನ್ನು ಸಂಗ್ರಹಿಸಿ ಜೋಡಿಸುವುದು.
"ನಾವು ಪ್ರತಿ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ಮುಂಜಾನೆ ಐದು ಗಂಟೆಗೆಲ್ಲ ಎದ್ದು ಹೊರಡುತ್ತಿದ್ದೆವು. ಮಧ್ಯಾಹ್ನದ ಹೊತ್ತಿಗೆ ಪ್ರತಿಯೊಬ್ಬರೂ ತಲಾ 10-12 ಕಿಲೋ ಸೌದೆಯನ್ನು ಹೊತ್ತು ಮರಳುತ್ತಿದ್ದೆವು" ಎಂದು ಬಿಹಾರದ ನಲಂದಾ ಜಿಲ್ಲೆಯ ಅರ್ಪಾ ಪಂಚಾಯತ್ನಲ್ಲಿರುವ ತಮ್ಮ ಮನೆಯ ಬಳಿಯ ಮಂಚದ ಮೇಲೆ ಕುಳಿತು 55 ವರ್ಷದ ಬಾಲೋ ಹೇಳಿದರು.
"ಒಟ್ಟುಮಾಡಿದ ಸೌದೆಯನ್ನು ಬಳಸಿ 10 ಜನರಿಗೆ ಮೂರರಿಂದ ನಾಲ್ಕು ದಿನಗಳ ಕಾಲ ಅಡುಗೆ ಮಾಡಲು ಸಾಧ್ಯವಾಗುತ್ತಿತ್ತು," ಎಂದು ಬಾಲೋ ಹೇಳುತ್ತಾರೆ. "ಆದರೆ ನಾವು ಕೇವಲ ಅನ್ನ ಮತ್ತು ದಾಲ್ ಅಥವಾ ಪಲ್ಯಗಳನ್ನಷ್ಟೇ ಮಾಡುತ್ತಿದ್ದೆವು. ಏಕೆಂದರೆ ಮೂರು ಮೂರು ಪದಾರ್ಥಗಳನ್ನು ತಯಾರಿಸಿದರೆ ತಂದ ಸೌದೆ ಬೇಗನೆ ಖಾಲಿಯಾಗುವ ಅಪಾಯವಿತ್ತು."
ತಮಿಳುನಾಡಿನ ಚೆನ್ನೈಯ ಪ್ರಮುಖ ಉಪನಗರವಾದ ತಾಂಬರಂನಲ್ಲಿರುವ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ತಾವು ಕೆಲಸ ಮಾಡುತ್ತಿದ್ದ ದಿನಗಳ ಬಗ್ಗೆ ಅವರು ಮಾತನಾಡುತ್ತಿದ್ದರು.
ಬಾಲೋ ಮತ್ತು ಅವರ ಸಹವರ್ತಿ ವಲಸೆ ಕಾರ್ಮಿಕರು ಎದುರಿಸುತ್ತಿದ್ದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಬಿಕ್ಕಟ್ಟಿಗೆ ಕಂಡುಕೊಂಡ ಈ ತಾತ್ಕಾಲಿಕ ಪರಿಹಾರ ಎರಡು ವಾರಗಳ ಕಾಲ ನಡೆಯಿತು. "ಎಲ್ಲಾ ಸಮಯದಲ್ಲೂ ಸೌದೆ ಸಿಗುವುದು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.








