ಮಚ್ಚಿವಾಲಾ ಗ್ರಾಮದ ಜನರು ಈ ವರದಿಗಾರರನ್ನು ಒಂದು ಲೋಟ ಚಹಾದೊಂದಿಗೆ ಸ್ವಾಗತಿಸಿದರು. ಆ ಚಹಾಕ್ಕೆ ಹಾಕಿದ ಎಲ್ಲ ಪದಾರ್ಥಗಳೂ ನೆರೆ ಸಂದರ್ಭದಲ್ಲಿ ಒದಗಿಸಲಾಗಿದ್ದ ಸಹಾಯದ ಭಾಗವಾಗಿ ಬಂದಿದ್ದವು. ರಾವಿ ನದಿಯ ದಡ ಒಡೆದು ಉಂಟಾದ ವ್ಯಾಪಕ ಪ್ರವಾಹವು ಊರಿನ ಮನೆಗಳನ್ನು ನಾಶಗೊಳಿಸಿತ್ತು, ಈ ನೆರೆ ಅವರ ಹೊಲಗಳಲ್ಲಿ ಹೂಳು ಮತ್ತು ನೀರನ್ನು ತಂದು ತುಂಬಿಸಿತ್ತು, ಮತ್ತು ಊರಿನ ಜನರನ್ನು, ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುವಂತೆ ಮಾಡಿತ್ತು.
ಆಗಸ್ಟ್ ತಿಂಗಳ ಪ್ರವಾಹ ಅವರಿಂದ ಎಲ್ಲವನ್ನೂ ಕಸಿದುಕೊಂಡಿತ್ತು.
ಸರಬ್ಜಿತ್ ಕೌರ್ ಅವರು ಈಗ ತಮ್ಮ ಹಳೆಯ ಮನೆಯಿದ್ದ ಸ್ಥಳದ ಸಮೀಪ, ರಾಮದಾಸ್ ಬ್ಲಾಕ್ನ ಮಚ್ಚಿವಾಲಾ ಗ್ರಾಮದ ಹೊರಗಿರುವ ಒಂದು ಝುಗ್ಗಿಯಲ್ಲಿ (ತಾತ್ಕಾಲಿಕ ಮನೆ) ಕುಳಿತಿದ್ದರು. ರಾವಿ ನದಿಯ ಪ್ರವಾಹವು ಅವರ ಮನೆಯನ್ನು ಕೊಚ್ಚಿಕೊಂಡು ಹೋಗಿದೆ. ತಮ್ಮ ಬದುಕಿನಲ್ಲಿ ಆಗಿ ಹೋದ ದುರಂತದ ಬಗ್ಗೆ ವಿವರಿಸುವಾಗಲೂ ಕೌರ್ ಅವರು ಮುಖದ ಮೇಲೆ ಕಷ್ಟದಿಂದ ಒಂದು ನಗುವನ್ನು ತಂದುಕೊಂಡರು.
"ನಾವು ರಾತ್ರಿಯಿಡೀ ‘ಬಂಧ್’ (ಕೃತಕ ಒಡ್ಡುಗಳನ್ನು) ಬಲಪಡಿಸಲು ಪ್ರಯತ್ನಿಸುತ್ತಿದ್ದೆವು" ಎಂದು 18 ವರ್ಷದ ಯುವಕನೊಬ್ಬ ಪರಿಗೆ ಹೇಳಿದರು. "ಆಗಸ್ಟ್ 27 [2025] ರಂದು ಬೆಳಿಗ್ಗೆ 6 ಗಂಟೆಗೆ ಗುರುದ್ವಾರದಲ್ಲಿ ಧ್ವನಿವರ್ಧಕದ ಮೂಲಕ ಇಡೀ ಊರಿಗೆ ಕೇಳುವಂತೆ ಒಂದು ಘೋಷಣೆ ಹೊರಡಿಸಲಾಯಿತು. ಘೋಷಣೆ ಪ್ರಕಾ ಆ ‘ಧುಸ್ಸಿ’ (ಮಣ್ಣಿನ ಒಡ್ಡು) ಒಡೆದಿತ್ತು. ನಾವೆಲ್ಲರೂ ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆಯಲು ಓಡಿದೆವು" ಎಂದು ಅವರು ಹೇಳಿದರು.
ಮಚ್ಚಿವಾಲಾ, ಅಮೃತಸರ ಜಿಲ್ಲೆಯಲ್ಲಿನ ಒಂದು ಸಣ್ಣ ಗ್ರಾಮ. 2011ರ ಜನಗಣತಿಯ ಪ್ರಕಾರ, ಇಲ್ಲಿ ಸುಮಾರು 1,186 ಜನರು ವಾಸಿಸುತ್ತಿದ್ದಾರೆ. ಇಲ್ಲಿನ ಹೆಚ್ಚಿನ ಜನರು ಜಾಟ್ ಸಿಖ್ ಮತ್ತು ರಾಯ್ ಸಿಖ್ ಸಮುದಾಯಗಳಿಗೆ ಸೇರಿದವರಾಗಿದ್ದು, ರಾಯ್ ಸಿಖ್ ಸಮುದಾಯವನ್ನು ಪಂಜಾಬ್ನಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ. ದಲಿತ ಕುಟುಂಬಗಳು ಮುಖ್ಯವಾಗಿ ಸಣ್ಣ ಜಮೀನುಗಳಲ್ಲಿ ಕೃಷಿ ಮಾಡಿ ಜೀವನ ನಡೆಸುತ್ತಾರೆ, ಮತ್ತು ಇತರರ ಹೊಲಗಳಲ್ಲಿ ಕೃಷಿ ಕೆಲಸಗಳನ್ನು ಸಹ ಮಾಡುತ್ತಾರೆ.
ಸರಬ್ಜಿತ್ ಕುಟುಂಬವು ರಾಯ್ ಸಿಖ್ ಸಮುದಾಯಕ್ಕೆ ಸೇರಿದ್ದು, ಇವರ ಬಳಿ ಯಾವುದೇ ಭೂಮಿಯ ಮಾಲಿಕತ್ವವಿಲ್ಲ. ಕೃಷಿ ಕಾರ್ಮಿಕರಾಗಿ ದುಡಿದು ಜೀವನ ನಡೆಸುತ್ತಾರೆ. ಅವರ ತಾಯಿ, ಕೂಡ ಒಬ್ಬ ಕೃಷಿ ಕಾರ್ಮಿಕರಾಗಿದ್ದರು. ಅವರು ಆರು ತಿಂಗಳ ಹಿಂದೆ ಮರಣ ಹೊಂದಿದ್ದಾರೆ. ತಂದೆ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಕೆಲಸ ಮಾಡಲು ಸಾಧ್ಯವಿಲ್ಲ. ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯಿರುವ ಈ ಕುಟುಂಬದಲ್ಲಿ ಎಲ್ಲರೂ ತಮ್ಮ ಮನೆ ನಡೆಸಲು ಕೂಲಿ ಕೆಲಸ ಮಾಡುತ್ತಾರೆ.
ಪ್ರವಾಹವು ಊರನ್ನು ಮೂರರಿಂದ ನಾಲ್ಕು ದಿನಗಳವರೆಗೆ ಮುಳುಗಿಸಿತ್ತು, ನೀರಿನ ಮಟ್ಟವು ಎಂಟು ಅಡಿಗಳವರೆಗೆ ಏರಿತ್ತು. ಇದು ಕೃಷಿ ಕಾರ್ಮಿಕರ ಸಾಧಾರಣ ಮನೆಗಳನ್ನು ನಾಶಪಡಿಸಿ, ಕಟಾವಿಗೆ ಸಿದ್ಧವಾಗಿದ್ದ ಖಾರಿಫ್ ಭತ್ತದ ಬೆಳೆಗಳನ್ನು ಸಂಪೂರ್ಣವಾಗಿ ಹಾಳುಮಾಡಿತು. ಹೊಲಗಳಲ್ಲಿ ಹೂಳು ತುಂಬಿತು. ದೊಡ್ಡ ದೊಡ್ಡ ನೀಲಗಿರಿ ಮರಗಳು ಬೇರುಸಹಿತ ಕಿತ್ತು ಬಿದ್ದವು.
















