ರುಬೆಲ್ ಶೇಖ್ ಮತ್ತು ಅನಿಲ್ ಖಾನ್ ಗಾಡಿ ಓಡಿಸುತ್ತಿದ್ದಾರೆ... ಆದರೆ ಅವರು ಮತ್ತು ಅವರ ಕಾರು ನೆಲದ ಮೇಲಿಲ್ಲ. ನೆಲದಿಂದ 20 ಅಡಿ ಎತ್ತರದಲ್ಲಿ ಮತ್ತು ಅದು ಕೂಡ ಸುಮಾರು 80 ಡಿಗ್ರಿ ಕೋನದಲ್ಲಿ ಅವರ ಕಾರು ವೇಗವಾಗಿ ಚಲಿಸುತ್ತಿದೆ. ಮೇಲಿನಿಂದ, ಜನರು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸುತ್ತಾರೆ. ರುಬೆಲ್ ಮತ್ತು ಅನಿಲ್ ಸಹ ತಮ್ಮ ಕಾರಿನ ಕಿಟಕಿಯಿಂದ ಹೊರಗೆ ಇಣುಕಿ ಸಂದಣಿಯತ್ತ ಕೈ ಬೀಸುತ್ತಾರೆ.
ಅವರು ಮೌತ್ -ಕಾ – ಕುಂವಾ (ಸಾವಿನ ಬಾವಿ) ಪ್ರದರ್ಶನ ನೀಡುತ್ತಿದ್ದರು - ಈ ಬಾವಿಯ ಗೋಡೆಯ ಮೇಲೆ ಬೈಕ್ ಮತ್ತು ಕಾರುಗಳನ್ನು ಓಡಿಸುತ್ತಾ ಹಲವು ಬಗೆಯ ಸಾಹಸಗಳನ್ನು ಪ್ರದರ್ಶಿಸಲಾಗುತ್ತದೆ.
ಇಲ್ಲಿ ಪ್ರತಿ ಹತ್ತು ನಿಮಿಷಗಳ ಅವಧಿಯಂತೆ ಹಲವು ಗಂಟೆಗಳ ಕಾಲ ಹಲವು ಪ್ರದರ್ಶನಗಳನ್ನು ನೀಡಲಾಗುತ್ತದೆ. ಈ ಪ್ರದರ್ಶನಕ್ಕೆ ಬಳಸಲಾಗುವ ಬಾವಿಯನ್ನು ಮರ ಮತ್ತು ಕಬ್ಬಿಣ ಬಳಸಿ ಕಟ್ಟಲಾಗುತ್ತದೆ. ಈ ಬಾವಿಯನ್ನು ನೆಲಮಟ್ಟದಿಂದ ಕಟ್ಟಲಾಗುತ್ತದೆ. ಜಾತ್ರೆಯೊಂದರಲ್ಲಿ ಈ ಬಾವಿಯ ರಚನೆಯನ್ನು ಸಿದ್ಧಪಡಿಸಲು ಹಲವು ದಿನಗಳು ಬೇಕಾಗುತ್ತವೆ. ಈ ನಿರ್ಮಾಣದಲ್ಲಿ ಸಾಹಸಗಳನ್ನು ಪ್ರದರ್ಶಿಸುವ ಬೈಕ್ ಮತ್ತು ಕಾರು ಚಾಲಕರು ಸಹ ಪಾಲ್ಗೊಳ್ಳುತ್ತಾರೆ. ಈ ಪ್ರದರ್ಶನಕ್ಕೆ ವೇದಿಕೆಯಾಗುವ ಬಾವಿಯು ಅವರ ಸುರಕ್ಷತೆ ಮತ್ತು ಪ್ರದರ್ಶನದ ಗುಣಮಟ್ಟದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಮೌತ್ - ಕಾ – ಕುಂವಾ ಎನ್ನುವ ಅಶುಭವಾದ ಹೆಸರನ್ನು ಹೊತ್ತಿರುವ ಈ ಸಾಹಸ ಕ್ರೀಡೆಯು ತ್ರಿಪುರಾದ ಅಗರ್ತಲಾದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ದುರ್ಗಾ ಪೂಜಾ ಜಾತ್ರೆಯ ಪ್ರಮುಖ ಆಕರ್ಷಣೆಯ ಒಂದು ಭಾಗವೂ ಹೌದು. ಇದರೊಂದಿಗೆ ಇಲ್ಲಿ ಫೆರ್ರಿ ವ್ಹೀಲ್, ಮೆರ್ರಿ – ಗೋ – ರೌಂಡ್ ಹಾಗೂ ಆಟಿಕೆ ರೈಲಿನಂತಹ ಆಕರ್ಷಣೆಗಳೂ ಇರುತ್ತವೆ.























