ಏ ಬೇರಾ ಬೇಟಿ ಇಯಾಮ್ ತಾನಿ ಮಾರ್ಚಿ ಬಾರಿ ತೆ, ಬೇರಾ ಬೇಟಿ ಇಯಾಮ್ ತಾನಿ
ಧಾನಿ ಸೇ ದಾದಾ ಜೋ ದೇನಾಮ್ ರೇ, ಬಿಹಾ ಗೋತೆ ನೀ
ಮನ್ ಮಜೂರ್ ದೇನಾ ಲಾ ರೇ, ಬಿನಾ ಗೋತೆ ನೀ,
ಮಾರ್ಚಿ ಬಾರಿ ತೆ, ಬೇರಾ ಬೇಟಿ ಇಯಾಮ್ ತಾನಿ
ಧಾನಿ ಸೇ ದಾದಾ ಜೋ ದೇನಾಮ್ ರೇ, ಬಿಹಾ ಗೋತೆ ನೀ
[ನಮ್ಮ ಮಗಳು ಹಸಿ ಮೆಣಸಿನ ಹೊಲದಲ್ಲಿ ಅಳುತ್ತಿದ್ದಾಳೆ
ಅಪ್ಪಾ ನನಗೆ ಮದುವೆ ಗೊತ್ತು ಮಾಡು, ಹೇಳುತ್ತಾಳೆ ನನಗೆ ಕರಿಮಣಿ ಕಟ್ಟಿಸು ಎಂದು
ನಾವಿಬ್ಬರೂ ಮೆಚ್ಚಿದ್ದೇವೆ ಒಬ್ಬರಿಗೊಬ್ಬರು, ಅಪ್ಪಾ, ನಮಗೆ ಮದುವೆ ಮಾಡಿಸು
ನಮ್ಮ ಮಗಳು ಹಸಿ ಮೆಣಸಿನ ಹೊಲದಲ್ಲಿ ಅಳುತ್ತಿದ್ದಾಳೆ
ಅಪ್ಪಾ ನನಗೆ ಮದುವೆ ಗೊತ್ತು ಮಾಡು, ಹೇಳುತ್ತಾಳೆ ನನಗೆ ಕರಿಮಣಿ ಕಟ್ಟಿಸು ಎಂದು.]
ಲಾಖೇಶ್ವರಿ ಬಾಯಿ ಖಾರಿಯಾ ತಾನೊಂದು ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿದ್ದರು, ಅವರು ತನ್ನ ಕಣ್ಣುಗಳನ್ನು ಕೆಳಗೆ ನೆಟ್ಟು ಮೈಕ್ರೊಫೋನ್ ಹಿಡಿದು ಹಾಡುತ್ತಿದ್ದರು. ಹಾಡು ಹಾಡತೊಡಗಿದಂತೆ ಅವರು ಇನ್ನೊಂದು ಜಗತ್ತಿಗೆ ಪಯಣಿಸಿದರು. ಲಾಖೇಶ್ವರಿಯವರ ನೆರೆಯವರಾದ ನಾವು ಅವರು ಹಾಡುವುದನ್ನು, ಮಾತನಾಡುವುದನ್ನು ಕೇಳಲು ಕುತೂಹಲಿಗಳಾಗಿದ್ದೆವು. ಅವರು ಒಂದೊಂದು ಪದವನ್ನು ಹಾಡುವಾಗಲೂ ಅವರ ಮನಸ್ಸು ಮಿಲಿಸೆಕೆಂಡುಗಳಲ್ಲಿ 160 ಕಿಲೋಮೀಟರ್ ಪ್ರಯಾಣಿಸಿ ರಾಯಗಢಕ್ಕೆ ಹೋಗಿ, ಅಲ್ಲಿ ತಾನು ಕಳೆದ ಬಾಲ್ಯದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿತ್ತು.
“ಈಗ ನಾನು ಯಾರ ಜೊತೆ ಈ ಭಾಷೆ ಮಾತನಾಡಬೇಕು? ಅತ್ತೆ, ಮಾವಂದಿರು ಈಗಿಲ್ಲ. ಮಕ್ಕಳಿಗೆ ʼನೀವು ನಮ್ಮ ತಾಯ್ನುಡಿಯಲ್ಲಿ ಮಾತನಾಡಿ, ನಾನು ನಿಮಗೆ ಈ ಭಾಷೆ ಕಲಿಸುತ್ತೇನೆ ಎನ್ನುತ್ತೇನೆʼ ಆದರೆ ಅವರೆಲ್ಲಿ ಕೇಳುತ್ತಾರೆ? ಇನ್ನು ಮೊಮ್ಮಕ್ಕಳ ಕತೆಯಂತೂ ಬಿಡಿ, ಹೇಳಿ ಪ್ರಯೋಜನವಿಲ್ಲ. ಈಗ ಈ ಇಡೀ ಊರಿನಲ್ಲಿ ಖಾಡಿಯಾ ಭಾಷೆ ತಿಳಿದಿರುವ ವ್ಯಕ್ತಿಯೆಂದರೆ ನಾನೊಬ್ಬಳೇ” ಎಂದು ಪಾಟನ್ ದಾದರ್ ಗ್ರಾಮದ ಈ 55 ವರ್ಷದ ಆದಿವಾಸಿ ಮಹಿಳೆ ನೋವಿನ ಧ್ವನಿಯಲ್ಲಿ ಹೇಳುತ್ತಾರೆ.
ಮಹಾಸಮುಂದ್ ಜಿಲ್ಲೆಯ ಈ ಹಳ್ಳಿಯಲ್ಲಿ ʼಜೂನಾʼ ಎನ್ನುವ ಹೆಸರಿನಿಂದ ಕರೆಯಲ್ಪಡುವ ಲಾಖೇಶ್ವರಿ ಬಾಯಿ ಈ ಹಿಂದೆ ಊರಿಗೆ ಸೊಸೆಯಾಗಿ ಬಂದವರು. ಅವರ ಪತಿ ಬುಧುವಾ ಖಾರಿಯಾ ಅವರಿಗೆ ಈಗ ಅರವತ್ತು ವರ್ಷ. ರಾಜ್ಯ ಸರ್ಕಾರ ಇವರಿಗೆ ಒಂದೆರಡು ಎಕರೆ ಭೂಮಿಯನ್ನು ನೀಡಿದೆಯಾದರೂ ಅದರಿಂದ ಬರುವ ಉತ್ಪತ್ತಿ ಅವರ ಬದುಕು ನಡೆಸಲು ಸಾಕಾಗುವುದಿಲ್ಲ. ಹೀಗಾಗಿ ಪತಿ, ಪತ್ನಿ ಇಬ್ಬರೂ ಕೃಷಿ ಕೂಲಿಗಳಾಗಿ ದುಡಿಯುತ್ತಾರೆ. “ನಾನು ರಾಯಗಢದಿಂದ ಬಂದ ಆರಂಭದಲ್ಲಿ ನನ್ನ ಅತ್ತೆ ಮಾವಂದಿರ ಜೊತೆ ಖಡಿಯಾ ಭಾಷೆ ಮಾತನಾಡುತ್ತಿದ್ದೆ. ಅವರು ತೀರಿಕೊಂಡ ನಂತರ ಆ ಭಾಷೆ ಮಾತನಾಡಬಲ್ಲವರು ಇಲ್ಲಿ ಯಾರೂ ಇಲ್ಲದಂತಾಯಿತು” ಎನ್ನುತ್ತಾರೆ ಲಾಖೇಶ್ವರಿ. “ಈಗೀಗ ನನಗೆ ಪದಗಳನ್ನು ಸರಿಯಾಗಿ ಉಚ್ಚರಿಸಲು ಬರುವುದಿಲ್ಲ, ಹೀಗಾಗಿ ಅದನ್ನು ಮಾತನಾಡುವುದನ್ನೇ ನಿಲ್ಲಿಸಿದ್ದೇನೆ” ಎಂದು ಅವರ ಪತಿ ಬುದುವಾ ಹೇಳುತ್ತಾರೆ. “ಇಲ್ಲಿ ಛತ್ತೀಸಗಡಿ ಆಡಳಿತ ನಡೆಸುತ್ತಿರುವಾಗ ಈ ಭಾಷೆ ಯಾರಿಗೆ ಅರ್ಥವಾಗುತ್ತದೆ?”




