ಪ್ರತಿ ವರ್ಷ, ಯುವಜನರು ನಮ್ಮಲ್ಲಿ ತರಬೇತಿ ಕೋರಿ ಪರಿಗೆ ಬರೆಯುತ್ತಾರೆ. ಈ ವರ್ಷ ನಾವು ದಾಖಲೆ ಸಂಖ್ಯೆಯ ಇಂಟರ್ನಿಗಳನ್ನು ಹೊಂದಿದ್ದೇವೆ - ದೇಶಾದ್ಯಂತ ಮತ್ತು ವಿವಿಧ ವಿಭಾಗಗಳಲ್ಲಿನ ವಿದ್ಯಾರ್ಥಿಗಳು ಸ್ಥಾನ ಕೋರಿ ನಮ್ಮನ್ನು ತಲುಪಿದರು. ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್, ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸೋನೆಪತ್ನ ಅಶೋಕ ವಿಶ್ವವಿದ್ಯಾಲಯ, ಪುಣೆಯ ಫ್ಲೇಮ್ ವಿಶ್ವವಿದ್ಯಾಲಯ, ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಇನ್ನೂ ಅನೇಕ ವಿಶ್ವವಿದ್ಯಾಲಯಗಳಿಂದ ಅವರು ಬಂದಿದ್ದರು.
ನಮ್ಮ ಇಂಟರ್ನ್ಶಿಪ್ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ಹೊಸಬಗೆಯಲ್ಲಿ ರೂಪುಗೊಳ್ಳುತ್ತಾ ಬಂದಿದೆ. ಇದು ತನ್ನ ಗಾತ್ರ ಮತ್ತು ವ್ಯಾಪ್ತಿ ಎರಡರಲ್ಲೂ ಬೆಳೆಯುತ್ತಿದೆ. ಇದು ತನ್ನೊಳಗೆ ಹೊಸ ಪ್ರಶ್ನೆಗಳು ಮತ್ತು ಕಾರ್ಯಗಳನ್ನು ಸೇರಿಸಿಕೊಳ್ಳುತ್ತಿದೆ. ಇದೆಲ್ಲದರ ನಡುವೆಯೂ ನಮ್ಮ ಕಾಲದ ಸಮಸ್ಯೆಗಳನ್ನು ಅನ್ವೇಷಿಸುವ ಮತ್ತು ಯುವಕರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ – ಅಸಮಾನತೆ ಮತ್ತು ಅಂಚಿನಲ್ಲಿರುವ ಜನರ ಕುರಿತ ಕಾಳಜಿ ಮುಂತಾದ ವಿಷಯಗಳ ಕುರಿತಾದ ನಮ್ಮ ಉದ್ದೇಶವು ಬದಲಾಗದೆ ಉಳಿದಿವೆ.
ಪರಿ ಇಂಟರ್ನಿಗಳು ಈ ನಿಟ್ಟಿನಲ್ಲಿ ಸ್ವತಃ ಅವರೇ ಕ್ಷೇತ್ರಕ್ಕೆ ಇಳಿದು ಜನರನ್ನು ತಲುಪಬೇಕು. ಈ ನಿಟ್ಟಿನಲ್ಲಿ ಅವರು ಸಂಶೋಧನೆ, ಸಂದರ್ಶನ, ಬರವಣಿಗೆ, ಪರಿಶೀಲನೆ, ಛಾಯಾಗ್ರಹಣ, ಚಿತ್ರೀಕರಣ ಮತ್ತು ಗ್ರಾಮೀಣ ಮತ್ತು ಅಂಚಿನಲ್ಲಿರುವ ಸಮುದಾಯಗಳ ಕಥೆಗಳನ್ನು ಚಿತ್ರಿಸುವುದನ್ನು ಮಾಡಿದ್ದಾರೆ. ಮತ್ತು ಅವರು ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಅರುಣಾಚಲ ಪ್ರದೇಶ, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಕೇರಳ, ಜಮ್ಮು ಮತ್ತು ಕಾಶ್ಮೀರದಿಂದ ತಮ್ಮ ಕೆಲಸವನ್ನು ಕಳುಹಿಸಿದ್ದಾರೆ.
ಅವರು ಲೈಬ್ರರಿ ವರದಿಗಳು, ಚಲನಚಿತ್ರಗಳು ಮತ್ತು ವೀಡಿಯೊಗಳು, ಸಾಮಾಜಿಕ ಮಾಧ್ಯಮ ಪೋಸ್ಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲೂ ಕೆಲಸ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಅನುವಾದದಲ್ಲಿ ಕೂಡಾ ಸಹಾಯ ಮಾಡುತ್ತಾರೆ.
ಲಿಂಗ ತಾರತಮ್ಯವು ಅನೇಕ ವಿದ್ಯಾರ್ಥಿಗಳು ತಮ್ಮ ವರದಿಗಾರಿಕೆಯ ಮೂಲಕ ಸಂಶೋಧಿಸಲು ಮತ್ತು ಎತ್ತಿ ತೋರಿಸಲು ಬಯಸಿದ ಕ್ಷೇತ್ರವಾಗಿತ್ತು, ಮತ್ತು ಅವರು ಅದನ್ನು ಮಾಡಿದ್ದು ಹೀಗೆ:
ಇಂಟರ್ನ್ ಅಧ್ಯೆತಾ ಮಿಶ್ರಾ ಅವರು ಶೌಚಾಲಯ ವಿರಾಮವಿಲ್ಲದೆ ದುಡಿಯುವ ಪಶ್ಚಿಮ ಬಂಗಾಳದ ಚಹಾ ತೋಟಗಳ ಕೆಲಸಗಾರ ಮಹಿಳೆಯರ ಜೀವನದಲ್ಲಿ ಮತ್ತು ಅವರ ಲಿಂಗದಿಂದಾಗಿ ಅವರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ನೇರವಾಗಿ ಕಂಡು ಬರೆದರು. ಆಗ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅಧ್ಯೆತಾ, ಎಸ್ಟೇಟ್ ಮತ್ತು ಕಾರ್ಮಿಕರ ಗುರುತುಗಳ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಿತ್ತು, ಏಕೆಂದರೆ ಆ ಮಹಿಳೆಯರ ಗುರುತು ಬಹಿರಂಗವಾದರೆ ಅವರ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆಯಿತ್ತು.






