2023ರ ಆಗಸ್ಟ್ ತಿಂಗಳಿನಲ್ಲಿ ಅಫಿಯಾ ಖಾತುನ್ ಅವರ ಹಾಡೊಂದು ವೈರಲ್ ಆಯಿತು.
ಅದು ನಡೆದಿದ್ದು ಆಕಸ್ಮಿಕವಾಗಿ: X (ಈ ಹಿಂದೆ ಟ್ವಿಟರ್) ವೇದಿಕೆಯಲ್ಲಿ ಬಳಕೆದಾರರೊಬ್ಬರು ಆಕೆಯ ವಿಡಿಯೋ ಒಂದನ್ನು ಹಂಚಿಕೊಂಡರು. ಆ ವಿಡಿಯೋದಲ್ಲಿ ಖಾತುನ್ ಅವರು ಅಸ್ಸಾಮಿನ ಬಂಗಾಳಿ ಮುಸ್ಲಿಮರು ಮಾತನಾಡುವ ಸ್ಥಳೀಯ ಉಪಭಾಷೆಯಲ್ಲಿ ಹಾಡಿದ್ದರು. ಅವರೊಂದಿಗೆ ಅವರ ಇಬ್ಬರು ಗಂಡು ಮಕ್ಕಳು ಸಹ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಒಬ್ಬ ದೋತಾರಾ (ಬಂಗಾಳಿ ಜಾನಪದ ಸಂಗೀತದಲ್ಲಿ ಬಳಸುವ ಎರಡು ತಂತಿಗಳ ವಾದ್ಯ), ಮತ್ತೊಬ್ಬ ಢೋಲ್ (ಡೋಲು) ನುಡಿಸುತ್ತಿದ್ದ.
ಹಾಡಿನ ಸಾಹಿತ್ಯ ಹೀಗಿತ್ತು:
ಜೊನೊತರೆ’ಯಿ ಶೋಬಾಯ್ ಮಿಲೇ ಥಾನಾ’ಎ ಥಾನಾ’ಎಜಾರ್ ದಿಲೇ, ಹಿಮಂತೊ ಸೊರ್ಕಾರ್ ಬುಲೆ ದೋಯಿಯೊಶಿ ರೆಹ್.
ಜೊನೊಟರೆ ಜಲಾಹಿಯಾ, ಹಿಮಂತೋರ್ ಈ ಜೊಂತ್ರೋನಾ, ಜೊನೊತಾ'ಇ ಶೋಯಿಟೆ ಅರ್ ಪರೆ ನಾ.
ಆರ್ ಕೊತೊ ಜಲಾಯಿ’ಬೆ ಬೋಲೊ ನಾ,
ಆರ್ ಕೊತೊ ಜಲಾಯಿ’ಬೆ ಬೋಲೊ ನಾ,
[ಜನರು ಒಟ್ಟಾಗಿ ಒಂದಾದ ಮೇಲೆ ಒಂದರಂತೆ ದೂರು ನೀಡುತ್ತಿದ್ದಾರೆ; ಹಿಮಂತ ಸರ್ಕಾರ ತಪ್ಪಿತಸ್ಥ ಎನ್ನುತ್ತಿದ್ದಾರೆ.
ಕಿರುಕುಳ ನೀಡಲಾಗುತ್ತಿದೆ ಜನರಿಗೆ, ಹಿಮಂತ ನೀಡುತ್ತಿರುವ ಹಿಂಸೆ ನೋಡಿ. ಜನರು ಇನ್ನು ಸಹಿಸಲಾರರು.
ದಯವಿಟ್ಟು ಹೇಳಿ ಇನ್ನೂ ಎಷ್ಟು ಕಿರುಕುಳ ನೀಡುತ್ತೀರಿ?
ದಯವಿಟ್ಟು ಹೇಳಿ ಇನ್ನೂ ಎಷ್ಟು ಕಿರುಕುಳ ನೀಡುತ್ತೀರಿ?]
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಬಾಲ್ಯ ವಿವಾಹವನ್ನು ತಡೆಯುವ ರಾಜ್ಯವ್ಯಾಪಿ ಅಭಿಯಾನದ ಅಡಿಯಲ್ಲಿ ತನ್ನ ಮುಸ್ಲಿಂ ಸಮುದಾಯದ ಜನರನ್ನು ಸಾಮೂಹಿಕವಾಗಿ ಬಂಧಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಹಾಡು ರಚಿಸಲಾಗಿದೆ ಎಂದು ಅವರು ನಮಗೆ ಹೇಳಿದರು.
“ಯಾರಾದರೂ ಇದರ ವಿರುದ್ಧ ದನಿಯೆತ್ತಲೇಬೇಕಿತ್ತು. ನನ್ನ ಸಮುದಾಯದ ಜನರ ತೀವ್ರ ಆತಂಕ ಮತ್ತು ಸಾಮೂಹಿಕ ಯಾತನೆಯನ್ನು ಈ ಹಾಡು ಪ್ರತಿಬಿಂಬಿಸಿತ್ತು” ಖಾತುನ್ ಹೇಳುತ್ತಾರೆ. 2023ರ ಫೆಬ್ರವರಿಯಲ್ಲಿ ಆರಂಭವಾದ ಬಾಲ್ಯ ವಿವಾಹಗಳ ವಿರುದ್ಧದ ದಾಳಿಯ ಮೊದಲ ಹಂತದಲ್ಲಿ ಅಸ್ಸಾಮಿನಲ್ಲಿ 3,900ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಅದರ ನಂತರವೂ ನೂರಾರು ಜನರನ್ನು ಬಂಧಿಸಲಾಗಿದೆ. ಗಮನಾರ್ಹವಾಗಿ ಅವರಲ್ಲಿ ಹೆಚ್ಚಿನವರು ಬಂಗಾಳಿ ಮುಸ್ಲಿಮರು.


![ʼನಾನು ಇನ್ನೆಂದಿಗೂ [ಮತ್ತೆ] ಅಸ್ಸಾಮಿಯಲ್ಲಿ ಹಾಡುವುದಿಲ್ಲʼ](/_next/image?url=https%3A%2F%2Fproduction.ruralindiaonline.org%2Fuploads%2FHP_COVER_IMAGEAA_I_will_never_again_sing_in_Assamese_a3a400799e.jpg&w=1080&q=75)







