ಕಿತಾಬುನ್ ನಿಸಾ ಶೇಖ್ ರಫೀಕ್ ನಗರದವರು. ಅವರು ತಮ್ಮ ಮನೆಯ ಬಳಿ ಹರಿಯುತ್ತಿರುವ ನಾಲೆಯೊಂದರ ಪಕ್ಕದಲ್ಲಿ ನಿಂತು ಅದರಲ್ಲಿ ತೇಲಿ ಬರುತ್ತಿದ್ದ ಪ್ಲಾಸ್ಟಿಕ್ ಕಸಗಳನ್ನು ಆಯ್ದುಕೊಳ್ಳುತ್ತಿದ್ದರು. ಈ ಕಸಗಳಲ್ಲಿ ಕೆಲವು ಹತ್ತಿರದ ದೇವನಾರ್ ಡಂಪಿಂಗ್ ಯಾರ್ಡಿನಿಂದ ತೇಲಿಬರುತ್ತಿದ್ದರೆ, ಇನ್ನೊಂದಷ್ಟನ್ನು ಜನರೇ ನೇರವಾಗಿ ಎಸೆದಿರುವಂತಹವು. ಒಂದು ಉದ್ದನೇ ಕೋಲನ್ನು ಎತ್ತಿಕೊಂಡ ಅವರು ಅದನ್ನು ಬಳಸಿ, ಬಹಳಷ್ಟು ಪ್ರಯತ್ನದ ನಂತರ ಅದೇ ನಾಲೆಯಲ್ಲಿ ತೇಲಿ ಬರುತ್ತಿದ್ದ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಬಾಟಲಿಯೊಂದನ್ನು ಎತ್ತಿಕೊಳ್ಳುವಲ್ಲಿ ಸಫಲರಾದರು. ಇದರ ನಂತರ ಅವರು ಮತ್ತೆ ತನ್ನ ಪಾಲಿಗೆ ಬೆಲೆಬಾಳುವ ವಸ್ತುಗಳನ್ನು ಹುಡುಕುತ್ತಾ ಮುಂದೆ ಸಾಗಿದರು.
ಅವರು ಈ ಕೆಲಸವನ್ನು ದಿನಕ್ಕೆ ಸುಮಾರು ಗಂಟೆಗಳ ಕಾಲ ಮಾಡುತ್ತಾರೆ. 75 ವರ್ಷದ ಅವರ ಬೆನ್ನು ಬಹಳ ಕಷ್ಟಪಟ್ಟು ಬಾಗುತ್ತಿತ್ತು. ಸೂರ್ಯನ ಬೆಳಕಿಗೆ ಅವರ ಕಿತ್ತಳೆ ಬಣ್ಣದ ಕೂದಲು ಹೊಳೆಯುತ್ತಿತ್ತು. ಗಾಜಿನ ಬಿಯರ್ ಬಾಟಲಿಗಳು ಮತ್ತು ಪ್ಲಾಸ್ಟಿಕ್ ನೀರಿನ ಬಾಟಲಿ ಅವರಿಗೆ ಹೆಚ್ಚಿನ ಬೆಲೆಯ ಆದಾಯ ತರುವ ವಸ್ತುಗಳು. ಪ್ರತಿ ದಿನ 12ರಿಂದ 15 ಕಿಲೋಗಳಷ್ಟು ಪ್ಲಾಸ್ಟಿಕ್ ಸಂಗ್ರವಾದ ನಂತರ ಅದನ್ನು ಅವರ ಸೊಸೆ ಜಾಹಿದಾ ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿಸಿ ತಲೆಯ ಮೇಲೆ ಹೊತ್ತುಕೊಂಡು 15 ನಿಮಿಷಗಳ ನಡಿಗೆ ದೂರದಲ್ಲಿರುವ ಗುಜರಿ ಅಂಗಡಿ ಮಾಲಿಕನಿಗೆ ತಲುಪಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಅಂಗಡಿಯವನು ಕುಟುಂಬಕ್ಕೆ 200-300 ರೂಪಾಯಿ ಕೊಡುತ್ತಾನೆ. ಇವರ ವಾರದ ಸರಿಸುಮಾರು ಸಂಪಾದನೆ 1,000 ರೂಪಾಯಿ ದಾಟುವುದಿಲ್ಲ. “ನಮಗೂ ಈ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ. ಆದರೆ ಹೊಟ್ಟೆಪಾಡಿಗೆ ಮಾಡಲೇಬೇಕು. ಬೇರೆ ದಾರಿಯಾದರೂ ಏನಿದೆ?” ಎಂದು ಕೇಳುತ್ತಾರೆ ಕಿತಾಬುನ್.
ಕಿತಾಬುನ್ ಅವರ ಗುಡಿಸಲು 324 ಎಕರೆ ವಿಸ್ತೀರ್ಣದ ದೇವನಾರ್ ಡಂಪಿಂಗ್ ಯಾರ್ಡಿನ ಹೊರವಲಯದಲ್ಲಿದೆ. ಮುಂಬಯಿ ನಗರದಲ್ಲಿ ಮೂರು ಇಂತಹ ದೊಡ್ಡ ಡಂಪಿಂಗ್ ಯಾರ್ಡುಗಳಿದ್ದು, ಅವುಗಳಲ್ಲಿ ಇದು ದೊಡ್ಡದು. (ಇತರ ಎರಡು ಮುಲುಂಡ್ ಮತ್ತು ಕಂಜೂರ್ ಮಾರ್ಗ್ ಎನ್ನುವಲ್ಲಿವೆ). ನಗರವು ಪ್ರತಿದಿನ ಉತ್ಪಾದಿಸುವ ಸರಿಸುಮಾರು 9,500 ಮೆಟ್ರಿಕ್ ಟನ್ ಕಸದಲ್ಲಿ ಸುಮಾರು 35 ಪ್ರತಿಶತದಷ್ಟನ್ನು ಈ ಯಾರ್ಡಿನಲ್ಲಿ ತಂದು ಸುರಿಯಲಾಗುತ್ತದೆ.ದೇವನಾರ್ ಸೈಟ್ 2016ರಲ್ಲೇ ತನ್ನ ಮಿತಿಯನ್ನು ಮೀರಿತ್ತು, ಆದರೆ ಅದನ್ನು ಈಗಲೂ ಬಳಸಲಾಗುತ್ತಿದೆ. ಈ ಯಾರ್ಡಿನಲ್ಲಿ ಘನತ್ಯಾಜ್ಯವನ್ನು ತಂದು ಸುರಿಯಲು 2019ರ ಡಿಸೆಂಬರ್ 31ರ ತನಕ “ಕೊನೆಯ ವಿಸ್ತರಣೆಯಾಗಿ” ಬಾಂಬೆ ಹೈಕೋರ್ಟ್ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆಗೆ ಅವಕಾಶ ನೀಡಿದೆ.
ಮೈದಾನದ ಸುತ್ತಲೂ ರಫೀಕ್ ನಗರದಂತಹ ಹಲವಾರು ಕೊಳೆಗೇರಿ ಕಾಲೋನಿಗಳಿವೆ. ಇವು ನಗರದ ಎಂ-ಈಸ್ಟ್ ವಾರ್ಡ್ನ ಭಾಗವಾಗಿದ್ದು, ಇದು 807,720 ಜನಸಂಖ್ಯೆಯನ್ನು ಹೊಂದಿದೆ (ಜನಗಣತಿ 2011). ರಫೀಕ್ ನಗರದ ಕಿರಿದಾದ ರಸ್ತೆಗಳು ಮುಚ್ಚಿಹೋಗಿರುವ ಚರಂಡಿಗಳು ಮತ್ತು ಕಸದ ರಾಶಿಗಳಿಂದ ತುಂಬಿವೆ. ಡಂಪಿಂಗ್ ಮೈದಾನದಿಂದ ಬರುವ ವಾಸನೆ ಗಾಳಿಯಲ್ಲಿ ತುಂಬಿಕೊಂಡಿರುತ್ತದೆ. ನೊಣಗಳು ಮತ್ತು ಸೊಳ್ಳೆಗಳ ಹಿಂಡುಗಳು ಎಲ್ಲೆಡೆ ಸುಳಿದಾಡುತ್ತವೆ.
ಕಿತಾಬುನ್ ಅವರ ಗುಡಿಸಲು ಒಂದು ರಸ್ತೆಯ ಕೊನೆಯಲ್ಲಿ, ಆ ನಾಲೆಯ ತುದಿಯಲ್ಲಿದೆ. ಇದು 100 ಚದರ ಅಡಿ ವಿಸ್ತೀರ್ಣದ ಕೋಣೆಯಾಗಿದ್ದು, ಕಿತಾಬುನ್ ಅವರ ಮೂವರು ಪುತ್ರರು, ಜಹಿದಾ ಮತ್ತು 11 ಮೊಮ್ಮಕ್ಕಳು ಸೇರಿದಂತೆ 16 ಜನರಿಗೆ ಆಶ್ರಯ ನೀಡಿದೆ. "ಭಾರೀ ಮಳೆಯ ಸಮಯದಲ್ಲಿ, ಗಟಾರದಿಂದ ನೀರು ನಮ್ಮ ಮನೆಗೆ ನುಗ್ಗುತ್ತದೆ" ಎಂದು ಅವರು ಹೇಳುತ್ತಾರೆ. "ನಾವು ಬೇಳೆ, ಅಕ್ಕಿ ಮತ್ತು ಕೆಲವು ಬಟ್ಟೆಗಳಂತಹ ನಮ್ಮ ಪ್ರಮುಖ ವಸ್ತುಗಳನ್ನು ಮೇಲಿನ ಕಪಾಟಿಗೆ ಸ್ಥಳಾಂತರಿಸುತ್ತೇವೆ. ಹೆಚ್ಚಿನ ವಸ್ತುಗಳು ಒದ್ದೆಯಾಗುತ್ತವೆ. ನೀರು ಕಡಿಮೆಯಾಗುವವರೆಗೆ ನಾವು ನೆರೆಹೊರೆಯವರ ಮನೆಗಳಲ್ಲಿ [ರಸ್ತೆಯ ಮೇಲ್ಭಾಗದಲ್ಲಿ] ಆಶ್ರಯ ಪಡೆಯುತ್ತೇವೆ."







