ಕೃಷ್ಣಾ ರಾಣಿಯವರ ಪಾಲಿಗೆ ಏಪ್ರಿಲ್ ತಿಂಗಳು ಯಾವಾಗಲೂ ಕರುಣಾಮಯಿಯಾಗಿರುತ್ತಿತ್ತು. ಈ ಸಮಯದಲ್ಲಿ ಪಂಜಾಬಿನಲ್ಲಿ ಗೋಧಿ ಕೊಯ್ಲು ಮುಗಿದಿರುತ್ತದೆಯಾದ್ದರಿಂದ ಕೃಷ್ಣ ರಾಣಿ ಹೆಣೆದ ಮೊರಗಳಿಗೆ - ಪಂಜಾಬಿ ಭಾಷೆಯಲ್ಲಿ ‘ಛಜ್’ - ಮತ್ತೆ ಬೇಡಿಕೆ ಬರುತ್ತದೆ. ಈ ಸಂಕ್ಷಿಪ್ತ ಅವಧಿಯಲ್ಲಿ ಸಿಗುವ ಗಳಿಕೆಯು ಅವರಲ್ಲಿ, ಆತ್ಮವಿಶ್ವಾಸ ಮತ್ತು ಸ್ವಾವಲಂಬಿತನದ ಭಾವವನ್ನು ಹೆಚ್ಚಿಸುತ್ತದೆ.
ಕೃಷ್ಣಾ ರಾಣಿಯವರ ಮಟ್ಟಿಗೆ ಕಳೆದ 17 ವರ್ಷಗಳಿಂದ ಏಪ್ರಿಲ್ ಎನ್ನುವುದು ಒಂದು ಪರಿಚಿತ ದಿನಚರಿಯ ತಿಂಗಳು. ಫಾಜಿಲ್ಕಾ ಜಿಲ್ಲೆಯ ತಾಹ್ಲಿ ವಾಲಾ ಬೋಡ್ಲಾ ಎಂಬ ಹಳ್ಳಿಯಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹತ್ತುವ ಸಲುವಾಗಿ ದಿನಾಲೂ ಬೆಳಗ್ಗೆ 5 ಗಂಟೆಗೆ ಏಳುತ್ತಿದ್ದರು. ತಲೆಯ ಮೇಲೆ ಮೊರದ ಕಟ್ಟನ್ನು ಹೊತ್ತು, ಇಡೀ ದಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಯಾಣಿಸಿ ಮಾರುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಹಿರಿಯ ಮಹಿಳೆಯರಷ್ಟೇ ಅವರ ಪಾಲಿನ ಗ್ರಾಹಕರು, ಇವರು ರಾಣಿಯವರನ್ನು ಪರಿಚಿತ ಮಾತುಗಳಿಂದ ಸ್ವಾಗತಿಸುತ್ತಿದ್ದರು: “ಬೇಬೆ, ಕಿಥೆ ಛಜ್ ಚಾಕಿ ಫಿರ್ದಿ ಹೈ? ಅಜ್ಕಲ್ ದಿ ಕುಡಿಯಾ ನು ಛಜ್ ಫಡಾನ್ ವಿ ನಹಿ ಆಂದೆ [ಹಂಗಸೇ, ಈ ಛಜ್ ಅನ್ನು ಎಲ್ಲಿಗೆ ಹೊತ್ತುಕೊಂಡು ಹೋಗ್ತಿದ್ದೀಯಾ? ಇಂದಿನ ಹುಡುಗಿಯರಿಗೆ ಅದನ್ನು ಹಿಡಿಯುವುದಕ್ಕೂ ಬರುವುದಿಲ್ಲ].”
ಆ ಮಹಿಳೆಯ ಮಾತುಗಳಿಗೆ ಅಥವಾ 'ಛಜ್' ಕೊಳ್ಳುವ ಗ್ರಾಹಕರ ಸಂಖ್ಯೆಯಲ್ಲಿನ ಕುಸಿತಕ್ಕೆ ಅವರ ಉತ್ಸಾಹವನ್ನು ತಣಿಸಲು ಸಾಧ್ಯವಾಗಿಲ್ಲ. ಸುಮಾರು ನಾಲ್ಕು ದಶಕಗಳಲ್ಲಿ ಕೃಷ್ಣಾ ರಾಣಿ ಅವರು ತಮ್ಮ ಪಾರಂಪರಿಕ ಕರಕುಶಲ ಕಲೆಯನ್ನು ಬಿಡುವ ಬಗ್ಗೆ ಒಮ್ಮೆಯೂ ಯೋಚಿಸಿಲ್ಲ. "ನಾನು ಅದನ್ನು ಏಕೆ ಬಿಡಬೇಕು? ಜಿಥೆ ಕೊಯಿ ಕರಣ ವಾಲಾ ನಹಿ ಸಿ, ಛಡ್ನಾ ಕಡೆ ವಾಸ್ತೆ ಸಿ? ಎದೆ ತೆ ಸಿ ರೊಟಿ [ನನಗೆ ಅನ್ನ ಹಾಕುವವರು ಇಲ್ಲದ ಸಮಯದಲ್ಲಿ ನನಗೆ ಅನ್ನ ಹುಟ್ಟಿಸಿ ಕೊಟ್ಟಿದ್ದು ಇದೇ ಕೆಲಸ]" ಎಂದು ಈ ವರ್ಷದ ಫೆಬ್ರವರಿಯಲ್ಲಿ ನಮ್ಮ ಮೊದಲ ಭೇಟಿಯ ಸಮಯದಲ್ಲಿ ಅವರು ಹೇಳಿದರು. ಅಂದು ತಮ್ಮ ಜೋಪಡಿಯ ಮುಂದೆ ಕುಳಿತಿದ್ದ ಆ ಐವತ್ತು ವರ್ಷದ ಮಹಿಳೆ, ಮುಂಬರುವ ಹಂಗಾಮಿಗಾಗಿ ಛಜ್ ನೇಯುವುದರಲ್ಲಿ ನಿರತರಾಗಿದ್ದರು.


![ʼಈ ಸೆಕೆಯಲ್ಲಿ [ಛಜ್] ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲʼ](/_next/image?url=https%3A%2F%2Fproduction.ruralindiaonline.org%2Fuploads%2FHP_COVER_IMAGE_ST_I_am_unable_to_sell_chhaj_in_this_heat_1377533fb1.jpg&w=1080&q=75)
























