ತನ್ನ ಮೂರು ಮೇಕೆಗಳು ತಲಾ ಮೂರು ಮರಿಗಳಿಗೆ ಜನ್ಮವಿತ್ತಿದ್ದ ಕಾರಣ, ಹುಸ್ನ್ ಅರಾ, ಬಹಳ ಖುಷಿಪಟ್ಟರು. ಆರು ಮರಿಗಳು ಈ ವರ್ಷದ ಅಕ್ಟೋಬರ್ ಮೂವತ್ತರಂದು ಜನ್ಮತಳೆದವು. ಇದಕ್ಕೆ ಒಂದು ದಿನದ ಮೊದಲು ಮೂರು ಮರಿಗಳು ಜಗತ್ತಿಗೆ ಬಂದವು. ಅವು ಅತ್ಯಂತ ಚಿಕ್ಕದಾಗಿದ್ದು, ತಾವೇ ಸ್ವತಃ ತಿನ್ನಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ. ಇವುಗಳಿಗೆ ಸಾಕಷ್ಟು ಹಾಲು ದೊರೆಯುವಂತೆ, ಹುಸ್ನ್ ಅರ, ಹೆಚ್ಚಿನ ಕಾಳಜಿ ವಹಿಸಿದ್ದರು. ಇವು ಬೆಳೆದ ನಂತರ ತನಗೆ ಆದಾಯದ ಮೂಲವೆನಿಸುತ್ತವೆ ಎಂಬುದು ಅವರಿಗೆ ತಿಳಿದಿತ್ತು.
ಹುಸ್ನ್ ಆರಾ, ಬಿಹಾರದ ಸೀತಾಮರ್ಹಿ ಜಿಲ್ಲೆಯ ಬಾಜ್ಪಟ್ಟಿ ವಲಯದ ಫುಲ್ವರಿಯ ಗ್ರಾಮದಲ್ಲಿ ವಾಸಿಸುತ್ತಾರೆ. ಈ ಪಂಚಾಯತ್ನ ಸುಮಾರು 5700 ನಿವಾಸಿಗಳಲ್ಲಿ ಅನೇಕರು ಬಡವರು ಹಾಗೂ ರೈತರು ಅಥವಾ ಭೂರಹಿತ ಕೃಷಿ ಕಾರ್ಮಿಕರು. ಹುಸ್ನ್ ಅರ ಕೂಡ ಅವರಲ್ಲೊಬ್ಬರು.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತನ್ನ ಸೋದರಸಂಬಂಧಿ, ಮೊಹಮ್ಮದ್ ಶಬೀರ್ನೊಂದಿಗೆ ಇವರ ವಿವಾಹವಾಯಿತು. ಐದು ವರ್ಷದ ಹಿಂದೆ, ಚರ್ಮದ ಚೀಲವನ್ನು ತಯಾರಿಸುವ ಘಟಕವೊಂದರಲ್ಲಿ ಕೆಲಸಮಾಡಲು ಹೈದರಾಬಾದಿಗೆ ತೆರಳಿದರು. ಇದಕ್ಕೆ ಮೊದಲು ಅವರೂ ಕೃಷಿ ಕಾರ್ಮಿಕನಾಗಿದ್ದರು. “ಮಾಹೆಯಾನ ಐದು ಸಾವಿರ ರೂ.ಗಳನ್ನು ಗಳಿಸುವ ಶಬೀರ್, ಕೆಲವೊಮ್ಮ ಎರಡು ಸಾವಿರ ರೂ.ಗಳನ್ನು ಮನೆಗೆ ಕಳುಹಿಸುತ್ತಾರೆ. ತನ್ನ ಸ್ವಂತ ಖರ್ಚುಗಳನ್ನು ನಿಭಾಯಿಸಬೇಕಾದ ಕಾರಣ, ಈತನಿಂದ ಹಣದ ಪೂರೈಕೆಯು ಅನಿಯತವಾಗಿರುತ್ತದೆ.”







