ದಕ್ಷಿಣದ ಕಡೆಗೆ ಕಾಳಿಂದಿ ಕುಂಜ್ ಘಾಟ್ ಬಳಿ, ನದಿಯ ಪಾತ್ರ ವಿಶಾಲವಾಗುತ್ತದೆ ಮತ್ತು ಅಲ್ಲಿನ ಗಾಳಿ ತೀವ್ರ ರಾಸಾಯನಿಕ ವಾಸನೆಯಿಂದ ಕೂಡಿದೆ. ನದಿಯ ಮೇಲ್ಮೈ ಮೇಲೆ ದಟ್ಟ ಬಿಳಿ ನೊರೆಯ ಪದರ ತೇಲುತ್ತಿದ್ದು, ಅಲ್ಲಿನ ಗಾಳಿ ಗಂಟಲಿನಲ್ಲಿ ಉರಿಯ ಅನುಭವ ಉಂಟುಮಾಡುತ್ತದೆ.
ಇಲ್ಲಿ 41 ವರ್ಷದ ಫಿರೋಜ್ ಮಲಿಕ್ ಮತ್ತೊಂದು ಬಗೆಯ ಸೇವೆಯನ್ನು ನೀಡುತ್ತಾರೆ. ಇಲ್ಲಿನ ನೀರು ತ್ಯಾಜ್ಯದಿಂದ ತುಂಬಿ ಹೋಗಿದೆಯಾದರೂ, ಅವರು ಮೃತಪಟ್ಟವರ ಚಿತಾಭಸ್ಮವನ್ನು ಯಮುನೆಯಲ್ಲಿ ವಿಸರ್ಜಿಸುವ (ಹಿಂದೂಗಳ ಧಾರ್ಮಿಕ ವಿಧಿವಿಧಾನ) ಕಾರ್ಯವನ್ನು ಮಾಡುತ್ತಾರೆ. "ನನಗೆ ನೀರಿನೊಳಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅದರೊಳಗೆ [ನೀರಿನ ಮೇಲ್ಮೈ ಕೆಳಗೆ ಹೆಚ್ಚು ಹೊತ್ತು] ಸಿಲುಕಿಕೊಂಡರೆ, ಅವರು ಬದುಕುವುದು ಅಸಾಧ್ಯ" ಎಂದು ಅವರು ಹೇಳುತ್ತಾರೆ. ಆದರೂ, ಆ ವಿಷಪೂರಿತ ನೀರಿನಲ್ಲಿ ಸಂಪೂರ್ಣವಾಗಿ ಮುಳುಗುವುದು ಫಿರೋಜ್ ಪಾಲಿಗೆ ದೈನಂದಿನ ಅಭ್ಯಾಸವಾಗಿಬಿಟ್ಟಿದೆ.
ದೆಹಲಿಯಲ್ಲಿ ಯಮುನೆ ಇಂದು ತುಣುಕುಗಳಲ್ಲಷ್ಟೇ ಉಳಿದಿದೆ. ಅದೂ ಕೂಡಾ ಉಸಿರುಗಟ್ಟಿದ ಸ್ಥಿತಿಯಲ್ಲಿ ಈ ನದಿಯಂತೆಯೇ ಅದನ್ನು ನಂಬಿ ಬದುಕುತ್ತಿರುವ ಬನಾರಸಿ ಮತ್ತು ಫಿರೋಜ್ ಅವರಂತಹ ಮುಳುಗು ತಜ್ಞರ ಬದುಕು ಉಸಿರುಗಟ್ಟಿದ ಸ್ಥಿತಿಯಲ್ಲಿದೆ. ಈ ಅತ್ಯಂತ ಅಪಾಯಕಾರಿ ಕೆಲಸದಿಂದ ಬರುವ ದೈನಂದಿನ ಕೂಲಿಯೇ ಅವರ ಬದುಕಿಗೆ ಆಧಾರ.
ನದಿ ತನ್ನ ವೇದನೆಯನ್ನು ಮೌನವಾಗಿ ಅನುಭವಿಸುತ್ತಿದೆ; ಅದನ್ನು ನಂಬಿರುವ ಜನರ ಪರಿಸ್ಥಿತಿ ಕೂಡಾ ಹಾಗೇ ಇದೆ. ಮುಳುಗುತ್ತಿರುವ ಅಪರಿಚಿತರನ್ನು ರಕ್ಷಿಸಲು ಮತ್ತು ಶವಗಳನ್ನು ಹೊರತೆಗೆಯಲು ಮುಳುಗು ತಜ್ಞರು ರಾಸಾಯನಿಕಯುಕ್ತ ವಿಷಕಾರಿ ನೀರಿನಲ್ಲಿ ಮುಳುಗಲೇಬೇಕಾದ ಅನಿವಾರ್ಯತೆಯಿದೆ. ಅಭಿನಂದನ್ ಅವರಂತಹ ಅಂಬಿಗರು ದಿನನಿತ್ಯದ ವಿರೋಧಾಭಾಸಗಳಿಗೆ ಸಾಕ್ಷಿಯಾಗುತ್ತಿದ್ದಾರೆ: ಭಕ್ತರು ನದಿಯನ್ನು ಆರಾಧಿಸುತ್ತಾರೆ, ಆದರೆ ಅದೇ ನದಿಯನ್ನು ಕಲುಷಿತಗೊಳಿಸಿ ಹೋಗುತ್ತಾರೆ. ಇವರೇ ಯಮುನಾ ತೀರದ ನಿಜವಾದ ಮನುಷ್ಯರು; ನೀರಿನ ದಡದಲ್ಲಿ ನಡೆಯುತ್ತಿರುವ ವಿನಾಶ ಮತ್ತು ನದಿಯ ಸಹನಶೀಲತೆ ಎರಡಕ್ಕೂ ಸಾಕ್ಷಿಯಾಗಿರುವ ಇವರು, ದೀರ್ಘಕಾಲದಿಂದ ಶೋಷಣೆಗೆ ಒಳಗಾಗಿರುವ ಯಮುನೆಯ ನಿಜವಾದ ರಕ್ಷಕರು.
ಗಗನ್ದೀಪ್ ಸಿಂಗ್ ದೆಹಲಿ ಮೂಲದ ಸಾಕ್ಷ್ಯಚಿತ್ರ ನಿರ್ಮಾಪಕ. ಅವರು ಪ್ರಮುಖವಾಗಿ ಮಾನವೀಯ ಕಥೆಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಹೆಚ್ಚು ವರದಿ ಮಾಡುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು