ಮೋನಾ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಅವರ ಒಂದು ಕೈಯಲ್ಲಿ ಕಾಯಿಸಿದ ಕಬ್ಬಿಣದ ಸರಳಿದೆ. ಇನ್ನೊಂದು ಕೈಯಲ್ಲಿ ಟೊಳ್ಳಾದ ಬಿದಿರಿನ ಕೋಲಿದೆ. ಇಡೀ ಕೋಣೆ ಹೊಗೆಯಿಂದ ತುಂಬಿದೆ. ಮೋನಾ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡೇ ಸರಳಿನಿಂದ ಬಿದಿರಿನ ಮೇಲೆ ಒಂದು ರಂಧ್ರವನ್ನು ಕೊರೆದರು, ನಂತರ ಮತ್ತೊಂದು, ಮತ್ತು ಮಗದೊಂದು. ಒಟ್ಟಾರೆಯಾಗಿ ಆರು ರಂಧ್ರಗಳು.
ತಮ್ಮ ಕಣ್ಣುಗಳನ್ನು ತೆರೆಯುತ್ತಾ ಅವರು ಹೀಗೆನ್ನುತ್ತಾರೆ, "ಬಾನ್ಸುರಿ (ಕೊಳಲು) ತಯಾರಿಸಲು ಕೌಶಲ ಬೇಕು ಮತ್ತು ಹೆಚ್ಚಿನ ಸಂಖ್ಯೆಯ ಕೊಳಲುಗಳನ್ನು ತಯಾರಿಸಲು ವೇಗ ಬೇಕು." ನಂತರ ಅವರು ನಗುತ್ತಾ ಹೀಗೆ ಹೇಳುತ್ತಾರೆ, "ಗಂಡಸರಿಂದ ಇದು ಸಾಧ್ಯವಿಲ್ಲ. ಇದೊಂದು ಕಷ್ಟದ ಕೆಲಸ!"
ಮೋನಾ (ಅವರು ಈ ಹೆಸರಿನಿಂದ ಗುರುತಿಸಿಕೊಳ್ಳಲು ಬಯಸುತ್ತಾರೆ) ಮೂರನೇ ತಲೆಮಾರಿನ ಬಾನ್ಸುರಿ ತಯಾರಕರು. "ಕೊಳಲು ಸರಳವಾಗಿ ಕಂಡರೂ ಅತ್ಯಂತ ಸಂಕೀರ್ಣವಾದ ವಾದ್ಯ," ಎನ್ನುತ್ತಾರೆ ಈ 35 ವರ್ಷದ ಮಹಿಳೆ. "ರಂಧ್ರಗಳಿಲ್ಲದಿದ್ದರೆ ಕೇವಲ ಅದೊಂದು ಬಿದಿರಿನ ಕೋಲು ಮಾತ್ರ, ಆದರೆ ಸರಿಯಾದ ರಂಧ್ರಗಳಿದ್ದರೆ ಅದರಲ್ಲಿ ಎಲ್ಲಾ ರಾಗಗಳೂ ಅಡಗಿರುತ್ತವೆ. ಇದು ಕಾನ್ಹಾ ಜೀ [ಶ್ರೀಕೃಷ್ಣ] ಸಂಕೇತವೂ ಹೌದು."
ಅವರು ಗಾರೆ ಮಾಡದ ಕೋಣೆಯ ಮಧ್ಯದಲ್ಲಿ, ಉರಿಯುತ್ತಿರುವ ಕೆಂಡದಿಂದ ಕೂಡಿದ ಮಣ್ಣಿನ ಒಲೆಯ ಪಕ್ಕದಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಚಾವಣಿಯಲ್ಲಿರುವ ಏಕೈಕ ಕಿಟಕಿಯ ಮೂಲಕ ಸೂರ್ಯನ ಬೆಳಕು ಕೋಣೆಯೊಳಗೆ ಚೆಲ್ಲುತ್ತಿತ್ತು; ಹೊರಗೆ, ಆಕಾಶದಲ್ಲಿ ಗಿಡುಗಗಳು ಹಾರಾಡುತ್ತಿದ್ದವು.













