ಲಾತೆಹರ ಟೋಲಾದ ರಸ್ತೆಯ ಎರಡೂ ಬದಿಗಳಲ್ಲಿ ಆದಿವಾಸಿಗಳ ಸುಮಾರು ಎರಡು ಡಜನ್ ಮನೆಗಳಿವೆ. ಇವುಗಳಲ್ಲಿ ಕೆಲವು ಕಾಂಕ್ರೀಟ್ ಮನೆಗಳಾಗಿದ್ದರೆ, ಇನ್ನೂ ಕೆಲವು ಮಣ್ಣಿನ ಮತ್ತು ಮುಳಿಹುಲ್ಲು ಹೊದಿಸಲಾದ ಮನೆಗಳು. ಸೆಪ್ಟೆಂಬರ್ ತಿಂಗಳ ಒಂದು ಮಧ್ಯಾಹ್ನ, ಮಳೆ ಈಗಷ್ಟೇ ಬಂದುಹೋಗಿತ್ತು. ಬಾನಿನಲ್ಲಿ ಮೋಡಗಳು ಬಹುತೇಕ ಮರೆಯಾಗಿದ್ದವು. ಕೆಲವು ಮುದುಕಿಯರು ಮನೆಗಳ ಎದುರಿನ ರಸ್ತೆಯ ಬದಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು.
ಅವರಲ್ಲಿ ಒಬ್ಬರಾದ ಫೂಲ್ಮನಿಯವರ ಗೂನು ಬೆನ್ನು ಮತ್ತು ಸುಕ್ಕುಗಟ್ಟಿದ ಚರ್ಮ ಅವರ ವಯಸ್ಸನ್ನು ತೋರಿಸುತ್ತಿದ್ದವು. ಕೈಯಲ್ಲಿ ಊರುಗೋಲು ಹಿಡಿದುಕೊಂಡು ಅವರು ನನ್ನ ಕಡೆಗೆ ನಡೆದುಕೊಂಡು ಬಂದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜಮುಯಿ ಜಿಲ್ಲೆಯ ಲಾತೆಹರ ಟೋಲಾದ ಈ ಸಂತಾಲಿ ಆದಿವಾಸಿ ಫೂಲ್ಮನಿಯವರಿಗೆ ಮೂರು ವರ್ಷ ಪ್ರಾಯ. 21 ವರ್ಷ ತುಂಬಿದಾಗ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಕಳೆದ ತಿಂಗಳು ಇವರ ಹೆಸರನ್ನು ತೆಗೆದುಹಾಕುವ ವರೆಗೆ ಮತದಾರರ ಪಟ್ಟಿಯಲ್ಲಿ ಇವರ ಹೆಸರಿತ್ತು. 80 ರ ದಶಕಕ್ಕೆ ಹೆಜ್ಜೆಗಳನ್ನಿಡುತ್ತಿರುವ ಫೂಲ್ಮನಿಯವರು, ತಮ್ಮ ಜೀವನದ ಉಳಿದ ದಿನಗಳನ್ನು ಹೇಗೆ ಕಳೆಯುವುದು ಎಂಬ ಚಿಂತೆಯಲ್ಲಿ ಬದುಕುತ್ತಿದ್ದಾರೆ. ಮತದಾನ ಮಾಡಲು ಸಾಧ್ಯವಾಗದೇ ಇದ್ದರೆ, ತಮಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯಗಳು ನಿಂತುಹೋಗುತ್ತವೆ ಎಂಬ ಭಯದಲ್ಲಿ ಈ ವೃದ್ಧೆ ತಮ್ಮ ದಿನಗಳನ್ನು ಕಳೆಯುತ್ತಿದ್ದಾರೆ.
ಡುಬರತರಿ ಗ್ರಾಮದ ಕನಾರ್ ಆದಿವಾಸಿ ಟೋಲಾದ ವಿಷ್ಣುದೇವ್ ಹಂಸ್ದಾ ಅವರ ಹೆಸರನ್ನು ಕೂಡ ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ರಾಜು ಕಿಸ್ಕು ಅವರ ಕತೆಯೂ ಇದೇ. ಅಲ್ಲದೇ, ಫೂಲ್ಮನಿಯವರ ಮನೆಯ ಇನ್ನೂ ಐವರು ಸದಸ್ಯರ ಹೆಸರುಗಳನ್ನೂ ಅಳಿಸಲಾಗಿದೆ. ಇವರೆಲ್ಲರೂ ಖಿರ್ಭೋಜ್ನಾ (ಪೂರ್ವ)ದ ಉತ್ಕ್ರಮಿತ್ ಮಧ್ಯ ವಿದ್ಯಾಲಯ, ಬೂತ್ ಸಂಖ್ಯೆ 14 ರ ವ್ಯಾಪ್ತಿಯಲ್ಲಿ ಬರುವ ಮತದಾರರು. ಒಟ್ಟು ಐವತ್ತು ಹೆಸರುಗಳನ್ನು ತೆಗೆದುಹಾಕಲಾಗಿದೆ. ನಾನು ಈ ಪಟ್ಟಿಯನ್ನು ಪರಿಶೀಲಿಸಿದಾಗ, ಇವುಗಳಲ್ಲಿ ಶೇಕಡಾ 50 ರಷ್ಟು ಆದಿವಾಸಿಗಳ ಹೆಸರುಗಳಿದ್ದವು. ಪರಿಷ್ಕರಣೆಯ ನಂತರ ಹೊರಬಂದ ಅಂತಿಮ ಪಟ್ಟಿಯಲ್ಲಿ ಈ ಬೂತ್ನಲ್ಲಿ 661 ಮತದಾರರಿದ್ದಾರೆ.
2025 ರ ಜುಲೈ ತಿಂಗಳಲ್ಲಿ ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಯಿತು. ಇದರಲ್ಲಿ 66 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇದನ್ನು ಮಾಡಲು ‘ಮರಣ ಹೊಂದಿದ್ದಾರೆʼ ಮತ್ತು ‘ಸ್ಥಳಾಂತರಗೊಂಡಿದ್ದಾರೆʼ ಎಂಬ ಎರಡು ಪ್ರಮುಖ ಕಾರಣಗಳನ್ನು ಕೊಡಲಾಗಿದೆ. ಇದನ್ನೂ ಓದಿ: ಬಿಹಾರ್: ‘ಸತ್ತʼಆದಿವಾಸಿಗಳು ತಮ್ಮ ಕತೆ ಹೇಳಲು ಕುಳಿತಾಗ
ಈ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಎರಡಕ್ಕಿಂತ ಕಡಿಮೆ ಆದಿವಾಸಿಗಳಿದ್ದಾರೆ. ಚುನಾವಣೆಗಳಿಗೆ ಮೊದಲು ನಡೆಸಿದ ಎಸ್ಐಆರ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವರ ಹೆಸರುಗಳನ್ನೂ ತೆಗೆದುಹಾಕಲಾಗಿದೆ. ಈ ಬುಡಕಟ್ಟು ಜನಾಂಗದವರು ಹತ್ತಿರದ ಬೆಟ್ಟಗಳಿಂದ ಸಣ್ಣ ಪ್ರಮಾಣದ ಕಾಡುತ್ಪನ್ನಗಳನ್ನು ಸಂಗ್ರಹಿಸಿ, ಅವನ್ನು ಮಾರಿ ಮನೆ ನಡೆಸುತ್ತಾರೆ. ಕಾಡಿಗೆ ಹೋಗಿ ದಿನವಿಡೀ ಸೌದೆ ಸಂಗ್ರಹಿಸಿ ಸಂಜೆ ಹತ್ತಿರದ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇದರಿಂದ ಇವರಿಗೆ ಸಿಗುವುದು 150-200 ರುಪಾಯಿಗಳಷ್ಟೇ. ಇದಲ್ಲದೆ ಇವರು ಬೇರೆಯವರ ಹೊಲಗಳಲ್ಲಿ, ಮನರೇಗಾದಲ್ಲಿ, ಎಲ್ಲೆಲ್ಲಿ ಕೆಲಸಗಳು ಸಿಗುತ್ತವೆಯೋ ಅಲ್ಲೆಲ್ಲಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.
















