“ರಾಜಕಾರಣಿಗಳು ನಮ್ಮ ಊರಿಗೆ ಬಂದಾಗ ನಿಲ್ಲುವುದೇ ಇಲ್ಲ. ನಮ್ಮತ್ತ ಕೈ ಬೀಸಿ ಅವರ ಕಾರುಗಳಲ್ಲಿ ಹಾರಿ ಹೋಗುತ್ತಾರೆ. ಅವರ 50 ಅಡಿ ಸಮೀಪದಲ್ಲಿಯೂ ನಮ್ಮನ್ನು ಬಿಡುವುದಿಲ್ಲ” ಎನ್ನುತ್ತಾರೆ ಪುಟ್ಟಣ್ಣ.
ಪುಟ್ಟಣ್ಣ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಆಗಿ ಕೆಲಸ ಮಾಡಿರುವ 11 ವರ್ಷಗಳಲ್ಲಿ ಎರಡು ರಾಷ್ಟ್ರೀಯ ಚುನಾವಣೆಗಳು ಬಂದು ಹೋಗಿವೆ. ಮೂರನೆಯದು ಇನ್ನೇನು ಬರಲಿದೆ. ತುಮಕೂರಿನಲ್ಲಿ ಇದೇ ವಾರ ಏಪ್ರಿಲ್ 18 ರಂದು ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಲಿದೆ.
ಈ ಕ್ಷೇತ್ರದಲ್ಲಿ ಎರಡು ಘಟಾನುಘಟಿಗಳ ನಡುವೆ ಹೋರಾಟ ನಡೆಯಲಿದೆ : ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ಮತ್ತು ನಾಲ್ಕು ಬಾರಿ ಸಂಸದರಾಗಿರುವ ಜಿ.ಎಸ್. ಬಸವರಾಜ್, 77, ಮತ್ತು ಕಾಂಗ್ರೆಸ್-ಜನತಾ ದಳ (ಜಾತ್ಯತೀತ) ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಹಾಗು ಮಾಜಿ ಪ್ರಧಾನಿ, 86 ವರ್ಷ ವಯಸ್ಸಿನ ಎಚ್.ಡಿ. ದೇವೇಗೌಡರು.
ಆದರೆ ಮಧುಗಿರಿಯ ನೈರ್ಮಲ್ಯ ಕಾರ್ಯಕರ್ತರನ್ನು ಯಾರು ಉತ್ತಮ ಪಂತ ಎಂದು ಕೇಳಿದರೆ, ನಮಗೆ ನೀರಸ ಪ್ರತಿಕ್ರಿಯೆಗಳು ದೊರೆಯುತ್ತವೆ. ಅವರಲ್ಲಿ, 45 ವರ್ಷದ ಪುಟ್ಟಣ್ಣ ಅವರಂತಹ ಅನೇಕರು ಮಾದಿಗ ದಲಿತ ಸಮುದಾಯಕ್ಕೆ ಸೇರಿದವರು. ಶೋಷಿತ ಉಪಜಾತಿಗೆ ಸೇರಿದ ಇವರಿಗೆ, ಕೆಲಸದ ಆಯ್ಕೆಗಳು ಹೆಚ್ಚಾಗಿ ಮಲ ಹೊರುವುದಕ್ಕೇ ಸೀಮಿತವಾಗಿದೆ. (ಈ ಕಥೆಗಾಗಿ ಸಂದರ್ಶಿಸಿದ ಎಲ್ಲಾ ಕೆಲಸಗಾರರು ತಮ್ಮ ಮೊದಲ ಹೆಸರನ್ನು ಮಾತ್ರ ಬಳಸಬೇಕೆಂದು ಬಯಸಿದ್ದಾರೆ.) ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಆಗಸ್ಟ್ 2017 ರಲ್ಲಿ ನಿಯೋಜಿಸಿದ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಅತಿ ಹೆಚ್ಚು ಮ್ಯಾನುಯಲ್ ಸ್ಕ್ಯಾವೆಂಜರ್ಗಳನ್ನು ಹೊಂದಿದೆ. ಇವರ ಅಮಾನವೀಯ ಉದ್ಯೋಗ ಸ್ಥಿತಿ, ಕಳಪೆ ವೇತನ ಮತ್ತು ಅನೇಕ ವರ್ಷಗಳಿಂದಿರುವ ವಸತಿಯ ಕೊರತೆಯು, ರಾಜಕೀಯ ನಾಯಕರ ಮೇಲೆ ಹೆಚ್ಚಿನ ನಂಬಿಕೆ ಇಲ್ಲದಿರುವುದಕ್ಕೆ ಕೆಲವು ಕಾರಣಗಳಾಗಿವೆ.








