ಅಬ್ದುಲ್ ವಹಾಬ್ ಥೋಕರ್ ಚಳಿಗಾಲದಲ್ಲಿ ಗುಲ್ ಮಾರ್ಗ್ಗೆ ಬರುವ ಉತ್ಸಾಹಭರಿತ ಪ್ರವಾಸಿಗರನ್ನು ಹಿಮಚ್ಛಾದಿತ ಇಳಿಜಾರುಗಳಲ್ಲಿ ಓಡಾಡಿಸಲು ತಮ್ಮ ಸ್ಲೆಡ್ಜ್ (ಹಿಮ ಯಾ ಮಂಜುಗಡ್ಡೆಯ ಮೇಲೆ ಚಲಿಸಲು ಯಾ ಸಾಮಾನು ಸಾಗಿಸಲು ಉಪಯೋಗಿಸುವ ಗಾಡಿ) ಜೊತೆ ಸಿದ್ಧವಾಗಿದ್ದರು. ಆದರೆ ಈ 2024ರ ಜನವರಿ 14 ಒಂದಿಷ್ಟೂ ಮಂಜು ಬೀಳದ ಕಾರಣ ಥೋಕರ್ ನಿರಾಶಾದಾಯಕ ಮುಖ ಹೊತ್ತು ವಿನಾಶಕ್ಕೆ ವಿನಾಶಕ್ಕೆ ಸಾಕ್ಷಿಯಾಗಿ ನಿಂತಿದ್ದ ಕಂದು ಬಣ್ಣದ ಬೆಟ್ಟದತ್ತ ಕಣ್ಣು ನೆಟ್ಟು ಕುಳಿತಿದ್ದರು.
“ಇದು ಚಿಲಾ-ಇ-ಕಲನ್ [ತೀವ್ರ ಚಳಿಗಾಲ] ಆದರೆ ಗುಲ್ ಮಾರ್ಗ್ನಲ್ಲಿ ಒಂದಿಷ್ಟು ಕೂಡಾ ಮಂಜು ಬಿದ್ದಿಲ್ಲ” ಎಂದು 43 ವರ್ಷದ ಅವರು ತಿಳಿಸಿದರು. ಕಳೆದ 25 ವರ್ಷಗಳಿಂದ ಸ್ಲೆಡ್ಜಿಂಗ್ ಎಳೆಯುತ್ತಿರುವ ಥೋಕರ್ ಅವರು ಈ ರೀತಿಯಾಗಿದ್ದನ್ನು ನೋಡುತ್ತಿರುವುದು ಇದೇ ಮೊದಲು. ಹೀಗಾಗಿ ಅವರು ಹೆದರಿದ್ದಾರೆ. “ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾವು ಸ್ವಲ್ಪ ದಿನದಲ್ಲೇ ಸಾಲ ಮಾಡಿ ಬದುಕುಬೇಕಾಗುತ್ತದೆ.”
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ (ಜೆ & ಕೆ) ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ ಗಿರಿಧಾಮವಾದ ಗುಲ್ ಮಾರ್ಗ್ ತನ್ನ ಹಿಮಚ್ಛಾದಿತ ಪರಿಸರಕ್ಕೆ ಜಗತ್ತಿನೆಲ್ಲೆಡೆಯ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಪ್ರವಾಸೋದ್ಯಮವು ಸುಮಾರು 2,000 ಜನರ ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ (ಜನಗಣತಿ 2011), ಮತ್ತು ಕೆಲಸಕ್ಕಾಗಿ ಇಲ್ಲಿಗೆ ಪ್ರಯಾಣಿಸುವ ಥೋಕರ್ ಅವರಂತಹ ಇತರರು ಸಹ ಇದರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.
ಬಾರಾಮುಲ್ಲಾದ ಕಲಂತರಾ ಗ್ರಾಮದ ನಿವಾಸಿಯಾದ ಅವರು, ಕೆಲಸ ಹುಡುಕಿಕೊಂಡು ಸ್ಥಳೀಯ ಸಾರಿಗೆಯ ಮೂಲಕ ಪ್ರತಿದಿನ 30 ಕಿಲೋಮೀಟರ್ ದೂರದಲ್ಲಿರುವ ಗಲ್ ಮಾರ್ಗ್ ಪ್ರದೇಶಕ್ಕೆ ಬರುತ್ತಾರೆ. “ಈ ದಿನಗಳಲ್ಲಿ ಗ್ರಾಹಕರೂ ಸಿಕ್ಕರೂ ಹಿಮವಿಲ್ಲದ ಕಾರಣ ಸವಾರಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನನ್ನ ಆದಾಯ ಕೇವಲ 150-200 ರೂಪಾಯಿಗಳಿಗೆ ಇಳಿದಿದೆ. ಈಗ ನಾವು ಮಾಡಲು ಸಾಧ್ಯವಿರುವುದೆಂದರೆ ಪ್ರವಾಸಿಗರನ್ನು ಹೆಪ್ಪುಗಟ್ಟಿರುವ ನೀರಿನಲ್ಲಿ [ಈ ಹಿಂದೆ ಕರಗಿದ ಹಿಮದಿಂದ ಆಗಿರುವುದು]” ಎನ್ನುತ್ತಾರೆ.
“ಚಳಿಗಾದಲ್ಲಿ ಗುಲ್ ಮಾರ್ಗ್ ಗಿರಿಧಾಮಕ್ಕೆ ಭೇಟಿ ನೀಡುವುದೆಂದರೆ ಅದ್ಭುತ ಅನುಭವ” ಎಂದು ಜಮ್ಮು ಮತ್ತು ಕಾಶ್ಮೀರದ ಅಧಿಕೃತ ವೆಬ್ಸೈಟ್ ಹೇಳುತ್ತದೆ, “ಇಲ್ಲಿನ ಹಿಮದ ಹಾಸಿಗೆಯ ಮೇಲೆ ಜಾರುವ ಅನುಭವವು ಸ್ಕೀಯರ್ಗಳಿಗೆ ಸ್ವರ್ಗದ ಅನುಭವ ಕೊಡುತ್ತದೆ. ಇಲ್ಲಿನ ನೈಸರ್ಗಿಕ ಇಳಿಜಾರುಗಳು ಯಾರು ತಲುಪುದ ಸ್ಥಳಗಳಾಗಿದ್ದು, ಸ್ಕೀಯರ್ಗಳಿಗೆ ಸವಾಲು ಎಸೆಯುತ್ತವೆ!” ಎಂದು ವೆಬ್ಸೈಟ್ ಮುಂದುವರೆದು ಹೇಳುತ್ತದೆ.













