ಅದೊಂದು ನೀರಸ ಬೇಸಿಗೆ ಮಧ್ಯಾಹ್ನ. ಎಂಬತ್ತು ವರ್ಷದ ನನ್ನ ಅಜ್ಜಿ ಕುಸುಮ ವಣಕುಂದ್ರೆ, ಪಕ್ಕದ ಕುರ್ಚಿಯಲ್ಲಿ ಕುಳಿತು ತೋರಣ ಹೆಣೆಯುತ್ತಿದ್ದರು. ನಾನು ಕಾಲೇಜಿನ ರಜೆ ಅನುಭವಿಸುತ್ತಾ ಮನೆಯಲ್ಲಿದ್ದೆ. ಅಂದು ಬಿಸಿಲು ಹೊರಗೆ ಕಾಲಿಡಲಾಗದಷ್ಟು ತೀವ್ರವಾಗಿತ್ತು. ಮುಂಬಯಿಯ ತಾಪಮಾನ ಮುಂಬೈ 39.7 ಡಿಗ್ರಿ ಸೆಲ್ಸಿಯಸ್ ತಲುಪಿತ್ತು — ಈ ದಶಕದಲ್ಲೇ ಅತ್ಯಧಿಕ. ಊಟದ ನಂತರ ಸ್ವಲ್ಪ ಮಂಪರು ಕಾಡಿದಂತಾಗಿ, ನಾನು ಅಜ್ಜಿಯ ಜೊತೆ ನಡೆಯುತ್ತಿದ್ದೆ — ಅವರು ನೆನಪಿನ ಓಣಿಯಲ್ಲಿ ಸಾಗುತ್ತಿದ್ದರು.
"ನಾನು ಹುಟ್ಟಿದ್ದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿನ ಒಂದು ಚಿಕ್ಕ ಹಳ್ಳಿಯಾ ವಡಗಾಂ ಎನ್ನುವಲ್ಲಿ. ಅಲ್ಲಿ 33 ಕೋಟಿ ದೇವರತುಂಬಾ ಹಳೆಯ ಜೈರಾಮ ಸ್ವಾಮಿ ದೇವಾಲಯ ಇತ್ತು. ನಾನು ಓದಿದ ಶಾಲೆ ಆ ದೇವಾಲಯದ ದೊಡ್ಡ ಆವರಣದಲ್ಲಿ ನಡೆಯುತ್ತಿತ್ತು. ಆಡಲು ಎಷ್ಟೊಂದು ಜಾಗವಿತ್ತು! ತರಗತಿ ಮುಗಿದ ಮೇಲೆ ಹುತ್ತೂತು, ಕಬಡ್ಡಿ, ಲಂಗಡಿ ಆಡುತ್ತಿದ್ದೆವು. ನಾಗ ಪಂಚಮಿ ಹಬ್ಬದ ದಿನ ಕೆಲವು ಹುಡುಗಿಯರು ಫುಗಡಿ (ಜನಪದ ನೃತ್ಯ) ಮಾಡಿ ಹಾಡುತ್ತಿದ್ದರು. ನನ್ನ ನಾಲ್ಕು ಚಿಕ್ಕ ತಂಗಿಯರ ಜೊತೆ ಬದುಕು ಬಹಳ ಮಜಾವಾಗಿತ್ತು.
"ಶಾಲೆ 7ನೇ ತರಗತಿಯವರೆಗಷ್ಟೇ ಇತ್ತು. ಆ ನಂತರ ಹೊಲಿಗೆ ಮತ್ತು ಕಸೂತಿ ಕಲಿತೆ. ಜಮೀನಿನ ಕೆಲಸಕ್ಕೂ ಸಹಾಯ ಮಾಡುತ್ತಿದ್ದೆ. ಅಪ್ಪನ ಜಮೀನಿತ್ತು. ಶೇತಿ ಹೋತಿ, ಪಣ ಮುಂಬೈ ಲಾ ಕಾಮಾಲಾ ಹೋತೇ. ಆಫೀಸ್ ಮಧ್ಯೇ ಕಾಮ ಕರಾಯಚೇ, ಪಿಯೋನ್ ಮ್ಹಣೂನ್ [ಜಮೀನಿತ್ತು, ಆದರೆ ಮುಂಬೈಗೆ ಕೆಲಸಕ್ಕೆ ಹೋಗುತ್ತಿದ್ದರು. ಆಫೀಸಿನಲ್ಲಿ 'ಪ್ಯೂನ್' ಆಗಿ ಕೆಲಸ ಮಾಡುತ್ತಿದ್ದರು]. ನಮ್ಮ ಕುಟುಂಬ ಹಳ್ಳಿಯಲ್ಲೇ ಉಳಿದಿತ್ತು. ಆ ಜಮೀನು ನಮ್ಮದೇ. ಈಗಲೂ ಇದೆ. ತಮ್ಮ ನೋಡಿಕೊಳ್ಳುತ್ತಾನೆ. ಮೂರು ಎಕರೆ ಇದೆ. ಆ ದಿನಗಳಲ್ಲಿ ಎಂಟು ಜನ ಸೇರಿ ಜಮೀನು ಹೊಂದಿದ್ದರು — ಅಪ್ಪ, ಅವರ ಅಣ್ಣ-ತಮ್ಮಂದಿರು ಮತ್ತು ಸಂಬಂಧಿಕರು. ಆಗ ಸುಮಾರು 23-24 ಎಕರೆ ಇದ್ದಿರಬೇಕು."
"ಈ ಎಂಟು ಮಾಲೀಕರು ಬಿತ್ತನೆ ಕೆಲಸಕ್ಕಾಗಿ ಇಬ್ಬರು ಮರಾಠಾ ಕೂಲಿ ಕಾರ್ಮಿಕರನ್ನು ಇಟ್ಟಿದ್ದರು — ರಾಗಿ, ಕಡಲೆಕಾಯಿ, ಹೆಸರುಕಾಳು ಬಿತ್ತುತ್ತಿದ್ದರು. ನಾವು ಕಡಲೆಕಾಯಿ ಕೊಯ್ಯುತ್ತಿದ್ದೆವು, ಕಡಲೆ ಕಿತ್ತುತ್ತಿದ್ದೆವು, ತರಕಾರಿ ಬೆಳೆದಾಗ ತೆಗೆಯುತ್ತಿದ್ದೆವು — ವಾಂಗಿ ಮ್ಹಣಾ [ಬದನೆಕಾಯಿ], ಪಾವಟ್ಯಾಚ್ಯಾ ಶೆಂಗಾ [ನುಗ್ಗೆ], ಹರಭರ್ಯಾಚಿ ಭಾಜಿ [ಹಸಿ ಸೊಪ್ಪುಗಳು]. ಇದೆಲ್ಲ ಮಾಡುತ್ತಾ ನನಗೆ ಇಪ್ಪತ್ತು ಯಾವಾಗ ಆಯಿತು ಎನ್ನುವುದೇ ಗೊತ್ತಾಗಲಿಲ್ಲ."
"ಸ್ವಲ್ಪದರಲ್ಲೇ ನನ್ನ ಮದುವೆಯ ಮಾತು ಶುರುವಾಯಿತು. ಮುಂಬೈಯಿಂದ ಒಂದು ಸಂಬಂಧ ಬಂದು, ಮದುವೆ ನಿಶ್ಚಯವಾಯಿತು. 1965ರಲ್ಲಿ ನಾವೆಲ್ಲ ಮುಂಬೈಗೆ ಹೊರಟೆವು. ನಾನು, ಅಮ್ಮ, ಅಪ್ಪ ಮತ್ತು ತಂಗಿ-ತಮ್ಮಂದಿರು, ಚಿಕ್ಕಪ್ಪ, ಚಿಕ್ಕಮ್ಮ, ಎಲ್ಲರೂ ಹೊರಟೆವು. ವಡಾಗಾಂನಿಂದ ರಹ್ಮತ್ಪುರಕ್ಕೆ ಬಸ್ಸಿನಲ್ಲಿ, ಅಲ್ಲಿಂದ ರಾತ್ರಿ ರೈಲಿನಲ್ಲಿ ಮುಂಬೈಗೆ.
"ಹಳ್ಳಿ ಬಿಟ್ಟು ಅದೇ ಮೊದಲ ಬಾರಿ ಹೊರ ಹೋದದ್ದು, ಮುಂಬೈ ನೋಡಿದ್ದೂ ಮೊದಲ ಬಾರಿ. ಮುಂಬೈಚಿ ಗರ್ದಿ ಪಾಹೂನ್ ಥೋಡೇ ಗಡಬಡ್ಲ್ಯಾಸಾರಖೇ ಝಾಲೇ [ಮುಂಬೈಯ ಜನಜಂಗುಳಿ ಕಂಡು ಒಂದು ರೀತಿ ಗಾಬರಿಯಾಯಿತು]. ಎರಡನೇ ದಿನ ಅಲ್ಲಿ ಮದುವೆಯಾಯಿತು. ಅದರೊಂದಿಗೆ ನಾನು ಅಂಧೇರಿಯಲ್ಲಿದ್ದ ಗಂಡನ ಮನೆ ಸೇರಿದೆ. ನನ್ನ ಮಿಸ್ಟರ್ [ಗಂಡ] ಕರ್ನಾಟಕದವರು. ಆಟೋಮೊಬೈಲ್ ಕಂಪನಿಯೊಂದರಲ್ಲಿ ಲೈನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ನಾನು ಮಂಗಳಸೂತ್ರ ಪೋಣಿಸುವ ಆಭರಣ ಕೆಲಸ ಶುರು ಮಾಡಿದೆ. ಹೀಗೆ ನಮ್ಮ ದಾಂಪತ್ಯ ಜೀವನ ಆರಂಭವಾಯಿತು. ಇಬ್ಬರು ಮಕ್ಕಳು, ಒಬ್ಬಳು ಮಗಳು. ಈಗ ನಾಲ್ಕು ಮೊಮ್ಮಕಳು – ಇಬ್ಬರು ಹೆಣ್ಣು, ಇಬ್ಬರು ಗಂಡು"
ನಾನು ಅಜ್ಜಿಯನ್ನು ಕೇಳಿದೆ: "ನೀವು ಮುಂಬೈಯಿಂದ ಹೊರಗೂ ಹೋಗಿದ್ದೀರಲ್ಲ?"
"ಕನ್ಯಾಕುಮಾರಿ, ಕಲ್ಕತ್ತಾ, ಜೈಪುರ, ಕಾಶಿ, ಕಾಶ್ಮೀರ. ನಿಮ್ಮ ತಾತನ ಜೊತೆ ಸಿಂಗಾಪುರ ಮತ್ತು ನೇಪಾಳಕ್ಕೂ ಹೋಗಿದ್ದೆ."
ನಿನಗೆ ತುಂಬಾ ಖುಷಿ ಕೊಟ್ಟ ಪ್ರವಾಸ ಯಾವುದು ಅಜ್ಜಿ?
"ಕಾಶಿ ಯಾತ್ರೆ — ಮುಂಬೈಗೆ ಬಂದ 30 ವರ್ಷಗಳ ನಂತರ ಅಮ್ಮ ಮತ್ತು ತಂಗಿಯ ಜೊತೆ ಹೋದ ಯಾತ್ರೆ. ಸಂಪೂರ್ಣ ಮಹಿಳೆಯರ ಯಾತ್ರೆ. ನನ್ನ ಭಾವನ ತಂಗಿ ಹೀಗೆ ಆಗಾಗ ಹೋಗುತ್ತಿದ್ದಳು. ಅವಳೇ ನನಗೆ ಹೇಳಿ ಜೊತೆಗೆ ಬರುವಂತೆ ಕರೆದಳು. ನಾನು ಒಪ್ಪಿದೆ."
ತಾತ ಏನು ಹೇಳಿದರು? ನಿಮಗೆ ಭಯ ಆಗಲಿಲ್ಲವೇ? ನನ್ನಲ್ಲಿ ಪ್ರಶ್ನೆಗಳಿದ್ದವು. ಅಜ್ಜಿ ಹೇಳುತ್ತಿದ್ದ ಕಥೆ ಇದ್ದಕ್ಕಿದ್ದಂತೆ ರೋಚಕವಾಗಿ ತೋರತೊಡಗಿತ್ತು. ಜೀವನವಿಡೀ ನಾನವರನ್ನು ನೋಡಿದ್ದು ಒಬ್ಬ ಸೌಮ್ಯ, ಪ್ರೀತಿಯ, ಮನಮೋಹಕ ಅಜ್ಜಿಯಾಗಿ — ಅಡುಗೆ ಮಾಡುತ್ತ, ಹೊಲಿಗೆ ಮಾಡುತ್ತ, ನಗುತ್ತ, ಕುಟುಂಬಕ್ಕೆ ಸೇವೆ ಮಾಡುತ್ತ, ಸದಾ ಮನೆಯಲ್ಲೇ ಉಳಿಯುವವರು, ಒಟ್ಟಾರೆಯಾಗಿ ಹೇಳುವುದಾದರೆ ಗೃಹಿಣಿ. ಆದರೆ ಈಗ ಇದ್ದಕ್ಕಿದ್ದಂತೆ, ಮೂರೂವರೆ ದಶಕಗಳ ಹಿಂದೆ ಅವರು ಅಮ್ಮ ಮತ್ತು ತಂಗಿಯ ಜೊತೆ ಧೈರ್ಯವಾಗಿ ನಡೆಸಿದ ಈ ಅದ್ಭುತ ಸಾಹಸದ ಬಗ್ಗೆ ತಿಳಿಯುತ್ತಿತ್ತು. ಈ ಕುರಿತು ಇನ್ನಷ್ಟು ಕೇಳಬೇಕೆನ್ನಿಸಿತು.
"ಕಾಯ್ ನಾಯ್, ಝಾ ಮ್ಹಣೂನ್ ಸಾಂಗಿತಲಾ. ತ್ಯಾಂಚಿ ಬಾಹಿಣ್ ಚ ನಾ ತಿ, ಬಾಹಿಣ್ ಬರೋಬರ್ ಝಾತೇಸ್ ತರ್ ಝಾ. ತ್ಯಾ ಬಾಯ್ಕಾಂಚಿ ಸಹಲ್ ಹೋತಿ, ತೇ ಯೇವೂ ಶಕತ್ ನವ್ಹತೇ. [ಏನೂ ಇಲ್ಲ. ಗಂಡ ಹೋಗು ಅಂದರು. ಅವರ ತಂಗಿಯೇ ಅಲ್ಲವೇ ಅವಳು, ತಂಗಿ ಜೊತೆ ಹೋಗುತ್ತೀಯಾ ಹಾಗಿದ್ದರೆ ಹೋಗು. ಅದು ಮಹಿಳೆಯರ ಯಾತ್ರೆಯಾಗಿತ್ತು, ಅವರು ಬರಲು ಆಗಲಿಲ್ಲ. ನನಗೆ ಹೋಗಬೇಕೆನ್ನಿಸಿತ್ತು. ಯಾವ ಭಯವೂ ಇರಲಿಲ್ಲ, ಆತಂಕವೂ ಇರಲಿಲ್ಲ]. ಫಿರಾಯಲಾ ಜಾಯಚಂಯ್ ಮಗ್ ಭಿತಿ ಕಸಲಿ ವಾಟಣಾರ್ [ಯಾತ್ರೆಗೆ ಹೋಗಲು ಭಯ ಯಾಕೆ ಆಗಬೇಕು?]"
"ಆಗ ನನಗೆ 50 ವರ್ಷ. ಶಾಲನ್ ಅಜ್ಜಿ [ಅವರ ತಂಗಿ] ಎರಡು ವರ್ಷ ಚಿಕ್ಕವಳು. ಅಮ್ಮನಿಗೆ ಆಗ ಸುಮಾರು 72 ವರ್ಷ ಇರಬೇಕು. ಪಾಹಿಲ್ಯಾ ಲೋಕ ಕಟ್ಟಕ್ ಹೋತಿ ನಾ ರೇ. ಆತಾ ಆಮ್ಹಿ ಕಸೇ ಕಟ್ಟಕ್ ನಾಹಿ ಆಹೇ ಯೇವಡ್ಯಾ. ಆಮ್ಚ್ಯಾ ಆಯ್ ಕಟ್ಟಕ್ ಹೋತಿ, ಶೇವಟ್ ಪರ್ಯಂತ್ ಚಾಲತ್ ಹೋತಿ ಚಾಂಗಲಿ. [ಹಿಂದಿನ ಜನರು ಗಟ್ಟಿ-ಮುಟ್ಟಾಗಿದ್ದರು. ನಾವು ಅಷ್ಟು ಗಟ್ಟಿ ಇಲ್ಲ ಈಗ. ನಮ್ಮ ಅಮ್ಮ ಗಟ್ಟಿಯಾಗಿದ್ದರು. ಅವರು ಕೊನೆಯವರೆಗೂ ಚೆನ್ನಾಗಿ ನಡೆದಾಡುತ್ತಿದ್ದರು.] ನಾವು ಬಾಡಿಗೆಗೆ ಮಾತನಾಡಿದ ಬಸ್ಸಿನಲ್ಲಿ 45 ಮಹಿಳೆಯರು 15ಕ್ಕೂ ಹೆಚ್ಚು ದಿನ ಪ್ರಯಾಣ ಮಾಡಿದೆವು. ನನ್ನ ಇಬ್ಬರು ಮಕ್ಕಳು ಸೇರಿ ಪ್ರಯಾಣಕ್ಕೆ 4,000 ರೂಪಾಯಿ ಕೊಟ್ಟರು. ನಾವು ಕಾಶಿ, ಉಜ್ಜಯಿನಿ, ಮಥುರಾ ಮತ್ತು ಇಂತಹ 27 ಪುಣ್ಯ ಕ್ಷೇತ್ರಗಳನ್ನು ನೋಡಿದೆವು…"
ಇನ್ನೊಂದು ಅಜ್ಜಿಯ ಕಥೆ ಕೇಳಲು ನಾನು ಕಣ್ಣರಳಿಸಿ ಕುಳಿತಿದ್ದೆ…


