ಈ ವರದಿಯು ಪುಲಿಟ್ಚರ್ ಸೆಂಟರ್ನ ಬೆಂಬಲದೊಂದಿಗೆ ಮಾಡಲಾಗಿರುವ ಸರಣಿಯ ಒಂದು ಭಾಗ
ತಮ್ಮ ಸಂಬಂಧಿಯೊಬ್ಬರು ಕಳುಹಿಸಿದ್ದ ಯೂಟ್ಯೂಬ್ ಚಾನೆಲ್ನ ಒಂದೇ ಒಂದು ವಿಡಿಯೋ ಲಿಂಕ್ನಿಂದ ಅಮೋಲ್ ಖಂಡೇಕರ್ ಅವರಿಗೆ ತಮ್ಮ ತಿಂಗಳ ಆದಾಯದ ಎರಡು ಪಟ್ಟು ನಷ್ಟವಾಯಿತು. ಅದು ಕೂಡ ಆನ್ಲೈನ್ ಫಿಷಿಂಗ್ ರೀತಿಯ ವಂಚನೆಯೂ ಅಲ್ಲ.
ಅಮೋಲ್ ಸರಳ ಜೀವನವನ್ನು ನಡೆಸುವ 35 ವರ್ಷ ಪ್ರಾಯದ ಸಾಮಾನ್ಯ ಕಾರ್ಮಿಕ. ತಮ್ಮ ಸಂಬಂಧಿಯೊಬ್ಬರು ಕಳುಹಿಸಿದ ಯೂಟ್ಯೂಬ್ ವಿಡಿಯೋವನ್ನು ನೋಡಿದ್ದೇ ತಡ, ಮುಂಜಾನೆ ಬಸ್ ಹತ್ತಿ ಹೊರಟೇ ಬಿಟ್ಟರು. ಜೊತೆಗೆ ಹಣೆಯಲ್ಲಿ ಉರಿಯೂತದಿಂದ ನರಳುತ್ತಿರುವ ಅವರ 11 ವರ್ಷದ ಮಗ ಮತ್ತು ಕೀಲು ನೋವಿನಿಂದ ಬಳಲುತ್ತಿರುವ ತಾಯಿಯೂ ಇದ್ದರು. ಕಿತ್ತುಹೋದ ಒಂದು ಸರ್ಕಾರಿ ಬಸ್ನಲ್ಲಿ ಒಂಬತ್ತು ಗಂಟೆ ಪ್ರಯಾಣ ಮಾಡಿ ಅವರ ತಾಯಿಯ ಮೊಣಕಾಲುಗಳು ಇನ್ನಷ್ಟು ನೋಯುತ್ತಿದ್ದವು. ಹೋಗದೆ ಬೇರೆ ದಾರಿಯಿರಲಿಲ್ಲ. ಅವರ ಸಂಬಂಧಿಯೊಬ್ಬರು ಕಳುಹಿಸಿದ್ದ ಯೂಟ್ಯೂಬ್ ಚಾನೆಲ್ನ ವಿಡಿಯೋಗಳನ್ನು ನೋಡಿ, ತಮ್ಮ ಅನಾರೋಗ್ಯಕ್ಕೂ ಪರಿಹಾರ ಸಿಗಬಹುದು ಎಂಬ ಭರವಸೆಯಿಂದ ಮಗ ಮತ್ತು ಮೊಮ್ಮಗನೊಂದಿಗೆ ಅವರು ಬಸ್ ಹತ್ತಿದ್ದರು.
ಆ ಯೂಟ್ಯೂಬ್ ಚಾನೆಲ್ನಲ್ಲಿ ಹಣೆಗೆ ವಿಭೂತಿ ಬಳಿದುಕೊಂಡು ಸಾವಿರಾರು ಭಕ್ತರಿಗೆ ಪ್ರವಚನ ನೀಡುತ್ತಿರುವ ದಪ್ಪ ಗಡ್ಡದ ‘ದೇವಮಾನವʼನೊಬ್ಬನ ವಿಡಿಯೋಗಳಿದ್ದವು. ಕೌಟುಂಬಿಕ ಸಮಸ್ಯೆಗಳಿಂದ ಹಿಡಿದು ಮದ್ಯ ವ್ಯಸನ ಬಿಡಿಸುವ ವರೆಗೆ, ಉದ್ಯೋಗದ ಸಮಸ್ಯೆಗಳಿಂದ ಹಿಡಿದು ಕ್ಯಾನ್ಸರ್ವರೆಗೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಹಿಡಿದು ಪ್ರೇಮ ವೈಫಲ್ಯದ ವರೆಗೆ – ಎಲ್ಲಾ ಸಮಸ್ಯೆಗಳಿಗೆ ದೇವಮಾನವ ರಾಜೇಂದ್ರ ಗಡ್ಗೆ ‘ಮಹಾರಾಜ್’ ಬಳಿ ಪರಿಹಾರವಿತ್ತು.
ಅವರ ಚಾನೆಲ್ನ ಮಾಹಿತಿಯ ಪ್ರಕಾರ, ಗಡ್ಗೆಯವರು ವಿಷ್ಣುವಿನ ಅವತಾರವೆಂದು ಪೂಜಿಸಲ್ಪಡುವ ಪೌರಾಣಿಕ ಸನ್ಯಾಸಿ ದತ್ತನ 12 ವರ್ಷದ ಆಧ್ಯಾತ್ಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. “ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದ ಫಲವಾಗಿ ದತ್ತಗುರುವು ಗಡ್ಗೆ ಮಹಾರಾಜರಿಗೆ ದೀಕ್ಷೆ ನೀಡಿದರು,” ಎಂದು ಚಾನೆಲ್ನ ‘ಅಬೌಟ್ [ಮಾಹಿತಿ]’ ನಲ್ಲಿ ಹೇಳಲಾಗಿದೆ. ಅವತ್ತಿನಿಂದ ಅವರು, “ಔಷಧಿ ಮತ್ತು ಪ್ರಾರ್ಥನೆಯ ಮೂಲಕ ತಮ್ಮ ಬಳಿಗೆ ಬರುವ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ” ಎಂದು ಹೇಳಲಾಗಿದೆ.
ಅಧಿಕೃತವಾಗಿ ‘ದತ್ತಧಾಮ್ ಸರ್ಕಾರ್ ಸಂಗಮ್ನೇರ್’ ಎಂದಿರುವ ಆ ಯೂಟ್ಯೂಬ್ ಚಾನೆಲ್ಗೆ 1.83 ಲಕ್ಷ ಚಂದಾದಾರರು ಇದ್ದರು. ಪ್ರತಿಯೊಂದು ವಿಡಿಯೋಗಳ ಕೆಳಗೂ ಮೆಚ್ಚುಗೆಯ ಕಾಮೆಂಟ್ಗಳ ಸುರಿಮಳೆಯನ್ನೇ ಕಾಣಬಹುದು. ಇದನ್ನು ನೋಡಿ ಅಮೋಲ್, “ಇವರು ನಿಜವಾಗಿಯೂ ಏನೋ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ,” ಎಂದು ನಂಬಿದರು.










