ಕಾನ್ಸಿ ರಾಮ್ ಅವರು ಗುರುಗ್ರಾಮದ ಬಂಜಾರ ಮಾರ್ಕೆಟ್ನಲ್ಲಿರುವ ತನ್ನ ಅಂಗಡಿಯ ಮುಂದೆ ನಿಂತಿದ್ದರು. ಅವರ ಹಿಂದೆ ಬಿದಿರು ಮತ್ತು ಟಾರ್ಪಾಲಿನ್ನಿಂದ ಮಾಡಿದ ಒಂದು ಗೂಡಂಗಡಿ. ಅದರೊಳಗೆ ಬೇರೆ ಬೇರೆ ತರಹದ ಮರದ ಪೀಠೋಪಕರಣಗಳನ್ನು ಒತ್ತೊತ್ತಾಗಿ ಮಾರಾಟಕ್ಕೆ ಇಡಲಾಗಿತ್ತು. ಅವರ ಹೆಂಡತಿ ಆಶಾ ಪಕ್ಕದಲ್ಲೇ ಕುಳಿತುಕೊಂಡಿದ್ದರು. ಅವರು ತಣ್ಣೀರಿನಲ್ಲಿ ಅದ್ದಿದ ಬಟ್ಟೆಯ ತುಂಡನ್ನು ತಲೆಯ ಮೇಲೆ ಇಟ್ಟುಕೊಂಡಿದ್ದರು. ಬೇಸಿಗೆಯಲ್ಲಿ ದೆಹಲಿಯ ಮುಂಜಾನೆಯನ್ನೇ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರ ತಲೆಯ ಮೇಲಿದ್ದ ಒದ್ದೆ ಬಟ್ಟೆ ಅವರನ್ನು ತಂಪಾಗಿ ಇಡುತ್ತದೆ ಎಂದು ಆಶಾ ಹೇಳುತ್ತಾರೆ.
ಕಾನ್ಸಿ ರಾಮ್ ಅವರಿಗಾಗಲೀ, ಅವರ ಹೆಂಡತಿ ಆಶಾ ಅವರಿಗಾಗಲೇ ಈ ಉರಿ ಬಿಸಿ ಹೊಸದೇನಲ್ಲ. ಸಾಂಪ್ರದಾಯಿಕವಾಗಿ ಕಮ್ಮಾರ ವೃತ್ತಿಯನ್ನು ಮಾಡುವ ಗಾಡಿಯಾ ಲೋಹರ್ ಸಮುದಾಯ ಮತ್ತು ಬೆಂಕಿಯದ್ದು ಎಂದೂ ತೀರದ ಒಡನಾಟ. "ಏಸಿ ಗರ್ಮಿ ಮೇ ಗರಂ ಗರಂ ಲೋಹೆ ಕೋ ಪೀಟೆ ಥೆ... ಆಂಚ್ ಕೆ ಸಾಮ್ನೆ ಭೋಟ್ ಮೆಹ್ನಾತ್ ಕಿ ಹೈ [ನಾವು ಇಷ್ಟು ಬಿಸಿಯಲ್ಲಿ ಕಾದ ಕಬ್ಬಿಣವನ್ನು ಹೊಡೆಯುತ್ತಿದ್ದೆವು,,, ಉರಿವ ಬೆಂಕಿಯ ಮುಂದೆ ತುಂಬಾ ಕಷ್ಟಪಟ್ಟು ದುಡಿದಿದ್ದೇವೆ]” ಎನ್ನುತ್ತಾರೆ ಅವರು,
ಗಾಡಿಯಾ ಲೋಹರ್ಗಳು ತಮ್ಮನ್ನು ರಾಜಸ್ಥಾನ ಮೂಲದವರು ಎನ್ನುತ್ತಾರೆ. ಅಲ್ಲಿ ಅವರನ್ನು ಅತ್ಯಂತ ಹಿಂದುಳಿದ ಸಮುದಾಯ (ಎಂಬಿಸಿ) ಎಂದು ಪರಿಗಣಿಸಲಾಗಿದೆ. ದೆಹಲಿ ಮತ್ತು ಹರ್ಯಾಣದ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಅವರನ್ನು ಇತರ ಹಿಂದುಳಿದ ವರ್ಗಗಳು (ಒಬಿಸಿ) ಎಂದು ವರ್ಗೀಕರಿಸಲಾಗಿದೆ. ಇವರು ಶೇಕಡಾ 98 ರಷ್ಟು ಇರುವ ಭೂರಹಿತ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಒಂದು ಭಾಗ. ಭಾರತದಲ್ಲಿ ಕೇವಲ ಶೇಕಡಾ 11 ರಷ್ಟು ಅಲೆಮಾರಿ ಸಮುದಾಯಗಳು ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿವೆ. ಅನೇಕ ಗಾಡಿಯಾ ಲೋಹಾರ್ಗಳು ತಮ್ಮ ಎತ್ತಿನ ಗಾಡಿಗಳಲ್ಲಿಯೇ ವಾಸಿಸುತ್ತಾರೆ, ಅವುಗಳಲ್ಲೇ ಓಡಾಡುತ್ತಾರೆ. ಇವೇ ಅವರ ಸಂಚಾರಿ ಮನೆಗಳು ಮತ್ತು ಕೆಲಸ ಮಾಡುವ ಸ್ಥಳಗಳು.
ಕಾನ್ಸಿ ರಾಮ್ ಅವರು ಉರಿ ಬೇಸಿಗೆಯಲ್ಲಿ, ಮೈಕೊರೆಯುವ ಚಳಿಯಲ್ಲಿ ತಾವು ರಸ್ತೆಬದಿಯಲ್ಲಿ ಕೈಗಳಿಂದ ತಯಾರಿಸಿದ ಕಬ್ಬಿಣದ ಸಾಧನಗಳು, ಪಾತ್ರೆಗಳನ್ನು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲು ವರ್ಷಗಟ್ಟಲೆ ಅಲೆದಾಡುತ್ತಾರೆ.
ಆದರೆ ದೇಶದ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು ದಶಕಗಳಿಂದ ಹೆಚ್ಚುತ್ತಿರುವ ತಾಪಮಾನದಿಂದಾಗಿ ಓಡಾಟವನ್ನು ನಿಲ್ಲಿಸಿದ್ದಾರೆ. “ಇಷ್ಟು ಬಿಸಿಲಿಗೆ ಮನೆಯಿಂದ ಹೊರಗೆ ಅಡ್ಡಾಡುವುದರಲ್ಲಿ ಅರ್ಥ ಇಲ್ಲ. ಹಾಗಾಗಿ ಆ ವ್ಯವಹಾರವನ್ನು ಬಿಟ್ಟು ಈ ಕೆಲಸಕ್ಕೆ ಕೈಹಾಕಿದೆ,” ಎಂದು ಪಾರಿಗೆ ಅವರು ಹೇಳಿದರು.












