ವಾರಣಾಸಿಯ ರಾಜಾ ಹರಿಶ್ಚಂದ್ರ ಸ್ಮಶಾನ ಘಾಟಿನಲ್ಲಿ ದಿನದ ಎರಡನೇ ಚಿತೆಯನ್ನು ಸಿದ್ಧಪಡಿಸುತ್ತಿದ್ದ ವಿಜಯ್ “ (ಹಮಾರೆ ಚುಲ್ಹೆ ತೋ ಇನ್ ಲಾಶೋಂ ಸೇ ಜಲ್ತೇ ಹೈ]” ಎಂದರು. ಸುಡುವ ಹೊಗೆ ಮತ್ತು ಬೂದಿ ಕಣ್ಣು-ಮೂಗುಗಳಲ್ಲಿ ಕಿರಿಕಿರಿ ಉಂಟುಮಾಡುತ್ತಿತ್ತು, ಅವರು ಹೊಗೆಯನ್ನು ಕೈಯಲ್ಲಿ ದೂರ ಮಾಡುತ್ತಾ ದಾರಿ ನೋಡಿಕೊಂಡು ಸಾಗತೊಡಗಿದರು.
35 ವರ್ಷದ ವಿಜಯ್ ಚೌಧರಿ ಬನಾರಸ್ಸಿನ ಡೋಮ್ ಸಮುದಾಯಕ್ಕೆ ಸೇರಿದವರು (ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ). ಇವರು ಈ ಪಾರಂಪರಿಕ ಉದ್ಯೋಗದಲ್ಲಿ ತೊಡಗಿಕೊಂಡಿರುವ ನಾಲ್ಕನೇ ತಲೆಮಾರು. ಇವರು ಭಾರತದ ವಿವಿಧೆಡೆಗಳಿಂದ ಇಲ್ಲಿಗೆ ಜನರು ಹೊತ್ತು ತರುವ ತಮ್ಮ ಪ್ರೀತಿ ಪಾತ್ರರ ಶವಕ್ಕೆ ಅಂತ್ಯಕ್ರಿಯೆ ಮತ್ತು ಅಂತ್ಯಸಂಸ್ಕಾರ ನಡೆಸುವ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.
ಇಲ್ಲಿನ ಇನ್ನುಳಿದವರಂತೆ ವಿಜಯ್ ಅವರ ಮನೆಯಲ್ಲೂ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್ಪಿಜಿ) ಸಂಪರ್ಕವಿದೆ. ಆದರೆ ಕಳೆದ 25 ದಿನಗಳ ಕೆಳಗೆ ಸಿಲಿಂಡರ್ ಖಾಲಿಯಾಗಿದ್ದು, ರೀಫಿಲ್ ಸಿಕ್ಕಿಲ್ಲ. “ನಾನು ಗ್ಯಾಸ್ ಬುಕ್ ಮಾಡೋದಕ್ಕೆ ಪ್ರಯತ್ನಿಸಿದೆ. ಆದರೆ ಫೋನ್ ರಿಂಗ್ ಆಗುತ್ತದೆ ಬಿಟ್ಟರೆ ಯಾರೂ ಉತ್ತರಿಸುತ್ತಿಲ್ಲ. 1,000 ಸಾವಿರ ಬೆಲೆಯಿರುವ ಸಿಲಿಂಡರ್ ಒಂದಕ್ಕೆ 2,000 ಕೊಟ್ಟು ತರುವುದು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನಾವು ಹಿಂದಿನಂತೆ ಮತ್ತೆ ಸೌದೆ ಒಲೆ ಬಳಸಲು ಶುರು ಮಾಡಿದ್ದೇವೆ. ಒಲೆ ಉರಿಸಲು ತುಂಡು ಸೌದೆಗಳು ಅಥವಾ ಹೆಣ ಸುಟ್ಟು ಉಳಿದ ಸೌದೆಗಳನ್ನು ಬಳಸುತ್ತೇವೆ” ಎಂದು ವಿಜಯ್ ಪಾರಿ ಪ್ರತಿನಿಧಿಗೆ ತಿಳಿಸಿದರು.















