“ಯಾರೂ ಆಕೆಯನ್ನು ಮುಟ್ಟುತ್ತಿರಲಿಲ್ಲ; ಎಲ್ಲರೂ ತಮ್ಮ ಅಂತರವನ್ನು ಕಾಯ್ದುಕೊಂಡರು. ವೈದ್ಯರು ಬಂದಾಗ, ಅವರು ಸಹ ತಪಾಸಣೆಯ ಸಮಯದಲ್ಲಿ ಕೈಗವಸುಗಳು ಮತ್ತು ಮುಖ ಮುಸುಕೊಂದನ್ನು ತೊಟ್ಟಿದ್ದರು.”
ಸುನೀತ ಲಗುರಿ ಅವರಿಗೆ, ಆಸ್ಪತ್ರೆಗಳ ಪರಿಚಯವಿದೆ – ಅವರು ತಮ್ಮ ಮಗಳನ್ನು ತಮ್ಮ ನೆನಪಿಗೆ ನಿಲುಕದಷ್ಟು ಬಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇವರ ಮಗಳು ರಿಯಾ ಥಲಸ್ಸೇಮಿಯ ರೋಗಪೀಡಿತಳೆಂದು ತಿಳಿದುಬಂದಾಗ ಆಕೆಗೆ ಕೇವಲ ಐದು ತಿಂಗಳ ವಯಸ್ಸು. ಥಲಸ್ಸೇಮಿಯಾ, ಆನುವಂಶಿಕವಾಗಿ ಬಂದ ರಕ್ತದ ಅಸ್ವಸ್ಥತೆಯಾಗಿದ್ದು, ರಿಯಾಳ ರೋಗದ ಪ್ರಕಾರಕ್ಕೆ ಕ್ರಮಬದ್ಧ ಮತ್ತು ಜೀವನಪರ್ಯಂತ ರಕ್ತ ವರ್ಗಾವಣೆಗಳ ಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ, ಸುನೀತಾ ತಿಂಗಳಿಗೆ ಎರಡು ಬಾರಿ ಅವಳನ್ನು ಆಸ್ಪತ್ರೆಗೆ ಕರೆತರುತ್ತಿದ್ದು, ಅವರಿಗೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಪರಿಚಯವಿದೆ.
ಆದರೆ ಸೆಪ್ಟೆಂಬರ್ 2025ರ ಭೇಟಿಯನ್ನು ಆಕೆಯೆಂದಿಗೂ ಮರೆಯುವುದಿಲ್ಲ.
ರಾಜ್ಯದ ಸ್ವಾಮಿ ವಿವೇಕಾನಂದ ನಿಶ್ಶಕ್ತ ಸ್ವಾವಲಂಬನ್ ಪ್ರೋತ್ಸಾಹನ್ ಯೋಜನೆಯಡಿ ಮಾಸಿಕ ರೂ. 1,000 ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಆಶಯದೊಂದಿಗೆ ಸುನೀತ ಮನೆಯಿಂದ ಹೊರಟಿದ್ದರು. ಅರ್ಜಿಯ ಸಲುವಾಗಿ ಹೆಚ್ಚುವರಿ ತಪಾಸಣೆಗಳನ್ನು ಮಾಡಿಸುವಂತೆ ಅವರಿಗೆ ಹೇಳಲಾಯಿತು.
ಸುನೀತ ಕಾಯತೊಡಗಿದರು. ಫಲಿತಾಂಶವು ಹೊರಬಿದ್ದಾಗ, ಆ ಒಂದು ತಪಾಸಣೆಯು ಎಲ್ಲವನ್ನೂ ಬದಲಿಸಿತ್ತು. ಇವರ ಮಗಳು ಎಚ್ಐವಿ-ಪಾಸಿಟಿವ್ ಎಂಬುದಾಗಿ ತಿಳಿದುಬಂದಿತು. ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ಗೆ ತುತ್ತಾಗಿದ್ದಳು. ಚಿಕಿತ್ಸೆ ನೀಡದಿದ್ದರೆ, ಎಚ್ಐವಿ, ಭಯಾನಕ ಏಡ್ಸ್(ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್)ಗೆ ದಾರಿಯಾಬಹುದು.
ವಾರಗಳ ನಂತರ, ಇನ್ನೂ ಆಘಾತದಲ್ಲಿಯೇ ಇದ್ದು, ತಮ್ಮ ಒಂದು ಕೋಣೆಯ ಕಚ್ಚಾ ಮನೆಯ ಹೊರಗೆ ರಿಯಾಳೊಂದಿಗೆ ಕುಳಿತಿದ್ದ ಸುನೀತ, “ನಾವು ಅದರ ಬಗ್ಗೆ ಎಂದಿಗೂ ಕೇಳಿಯೇ ಇರಲಿಲ್ಲ. ಈ ಕಾಯಿಲೆ ಏನೆಂಬುದೇ ನಮಗೆ ತಿಳಿದಿಲ್ಲ” ಎಂದರು. ಇವರ ಪತಿ ವಿಜಯ್, ಆಗಾಗ್ಗೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದು, ಈ ಬಾರಿ ತಮ್ಮ ಮನೆಯನ್ನು ಪುನರ್ನಿರ್ಮಿಸಲು ಸಾಕಷ್ಟು ಹಣವನ್ನು ತರುವ ಭರವಸೆಯಲ್ಲಿದ್ದರು. ಐದು ಜನರ ಕುಟುಂಬವು ಜಾರ್ಖಂಡ್ನಲ್ಲಿ ಪರಿಶಿಷ್ಟ ಪಂಗಡವೆಂದು ವರ್ಗೀಕರಿಸಲಾದ ಹೋ ಸಮುದಾಯಕ್ಕೆ ಸೇರಿದೆ.















