ಆರ್. ನಲ್ಲಕಣ್ಣು 1925-2026
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ನಮ್ಮೊಂದಿಗೆ ಬದುಕಿದ್ದ ಕೊನೆಯ ಮಹಾನ್ ನಾಯಕರಲ್ಲಿ ಒಬ್ಬರಾದ ಆರ್. ನಲ್ಲಕಣ್ಣು ಅವರು ಫೆಬ್ರವರಿ 25ರಂದು ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು. ತಮಿಳುನಾಡಿನಲ್ಲಿ ನಮ್ಮೊಂದಿಗೆ ಬದುಕಿದ್ದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಖಂಡಿತವಾಗಿಯೂ ಅವರು ಕೊನೆಯವರಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ವೀರರ ಕುರಿತಾದ 'ದಿ ಲಾಸ್ಟ್ ಹೀರೊಸ್: ಫುಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎಂಬ ನನ್ನ ಪುಸ್ತಕದಲ್ಲಿ ಅವರೂ ಸ್ಥಾನ ಪಡೆದಿದ್ದಾರೆ.
2022ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಮಿಳುನಾಡು ಸರ್ಕಾರವು ಅವರಿಗೆ ಅತ್ಯುನ್ನತ ಸರ್ಕಾರಿ ಗೌರವವಾದ 'ತಗೈಸಾಲ್ ತಮಿಳರ್' ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಈ ಪ್ರಶಸ್ತಿಯು 10 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿತ್ತು. ಆದರೆ ಕಾಮ್ರೆಡ್ ಆರ್.ಎನ್.ಕೆ ಎಂದೇ ಜನಪ್ರಿಯರಾಗಿದ್ದ ಅವರು, ಪ್ರಶಸ್ತಿಯನ್ನು ಪಡೆದರಾದರೂ, ಪ್ರಶಸ್ತಿಯ ಮೊತ್ತಕ್ಕೆ 5,000 ರೂಪಾಯಿಗಳಷ್ಟು ಸ್ವಂತ ಹಣವನ್ನು ಸೇರಿಸಿ ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟರು. ತಮಿಳುನಾಡಿನ ರೈತ ಹೋರಾಟದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರ ನಿಧನದೊಂದಿಗೆ ಚಳವಳಿ ಯುಗವೊಂದರ ಕತೆಯೂ ಅಂತ್ಯವಾಗಿದೆ.
ಓದಿರಿ: ಮರೆತುಹೋದ ಹಲವು ಸ್ವಾತಂತ್ರ್ಯಕ್ಕಾಗಿ ಆರ್. ನಲ್ಲಕಣ್ಣುನಡೆಸಿದ ಹೋರಾಟ













