ರಘುವೀರ್ ವಿಶ್ವಕರ್ಮ ಮೊದಲಿಗೆ ಕಬ್ಬಿಣದ ಶೀಟ್ ಒಂದಕ್ಕೆ ಉದ್ದನೆಯ ಹಿಡಿಯಿರುವ ಸುತ್ತಿಗೆಯಿಂದ ಬಡಿಯುತ್ತಾರೆ. ಹಾಗೆ ಬಡಿಯುವಾಗ ʼಡಬ್ ಡಬ್ ಡಬ್ʼ ಎನ್ನುವ ಸದ್ದಾಗುತ್ತದೆ. ನಂತರ ಸಣ್ಣ ಸುತ್ತಿಗೆಯೊಂದನ್ನು ತೆಗೆದುಕೊಂಡು ʼಟಪ್ ಟಪ್ ಟಪ್ʼ ಎಂದು ಬಡಿಯುತ್ತಾರೆ. ಈ ಕುಶಲಕರ್ಮಿ ಕಬ್ಬಿಣದ ಶೀಟಿನಲ್ಲಿ ಉಳಿದಿರಬಹುದಾದ ಏರುತಗ್ಗುಗಳನ್ನು ಸರಿಪಡಿಸಲು ಸಣ್ಣ ಸುತ್ತಿಗೆಯನ್ನು ಬಳಸುತ್ತಾರೆ.
“ಇದು ಜಾನುವಾರುಗಳು ಧರಿಸುವ ಆಭರಣ” ಎಂದ ರಘುವೀರ್ ಅವರ ದನಿಯಲ್ಲಿ ಶಾಂತ ರೀತಿಯ ಹೆಮ್ಮೆಯಿತ್ತು. “ಅಕ್ಕಸಾಲಿಗರು ಜನರಿಗೆ ಆಭರಣ ಮಾಡಿಕೊಡುವಂತೆ ನಾವು ಜಾನುವಾರುಗಳಿಗೆ ಆಭರಣ ತಯಾರಿಸಿ ಕೊಡುತ್ತೇವೆ.”
ಜಾರ್ಖಂಡ್ ರಾಜ್ಯದ ಪಲಾಮು ಜಿಲ್ಲೆಯ ಬಾರಾಂವ್ ಗ್ರಾಮದ ರಾಮಘಡ್ ಟೋಲಾದವರಾದ 76 ವರ್ಷದ ಈ ಹಿರಿಯ ಕುಶಲಕರ್ಮಿ ಈ ಊರಿನ ಹಿರಿಯ ಕುಶಲಕರ್ಮಿಗಳಲ್ಲಿ ಒಬ್ಬರು. ಟೋಲಾ (ಇಲ್ಲಿನ ಸಂದರ್ಭದಲ್ಲಿ ಕಮ್ಮಾರರ ಹಳ್ಳಿಯ ಒಂದು ಕೇರಿ) ಎನ್ನುವುದು ಒಂದು ದೊಡ್ಡ ಕಾರ್ಖಾನೆ ಇದ್ದಂತೆ. ಇಲ್ಲಿನ ಎಲ್ಲರೂ ಗಂಟೆ ತಯಾರಕರೇ.
"ಹಮ್ರಾ ಬಾಪ್ ದಾದಾ ಸಬ್ ಯಹಿ ಕರ್ ರಹಾ ಥಾ. ಹಮ್ ತೋ ನಿಪಢ್ ಆದ್ಮಿ ಹೈ, ಥೇಪಧಾರಿ ಹೈ, ವಿಶ್ವಾಸ್ ನಹೀ ಕರಿಯೇಗಾ [ನನ್ನ ತಂದೆ ಮತ್ತು ಅಜ್ಜ ಎಲ್ಲರೂ ಈ ಕೆಲಸವನ್ನು ಮಾಡುತ್ತಿದ್ದರು. ನಾನು ಅಶಿಕ್ಷಿತ, ಒಬ್ಬ ಥೇಪಧಾರಿ – ಸಹಿ ಹಾಕಲು ಬಾರದ, ಹೆಬ್ಬೆಟ್ಟು ಒತ್ತುವ ಮನುಷ್ಯ – ನೀವು ನಂಬಲಿಕ್ಕಿಲ್ಲ], ಎನ್ನುತ್ತಾರೆ ಈ ಐದನೇ ತಲೆಮಾರಿನ ಕುಶಲಕರ್ಮಿ.
ಈ ಚಳಿಗಾಲದ ಬೆಳಗಿನಂದು ತನ್ನ ಮಣ್ಣಿನ ಮನೆಯ ಹೊರಗೆ ಸೆಣಬಿನ ಚೀಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತಿದ್ದ ರಘುವೀರ್ ತನ್ನ ಎಡಗೈ ಬಳಸಿ ಲೋಹದ ಹಾಳೆಯನ್ನು ಬಿಗಿಯಾಗಿ ಹಿಡಿದಿದ್ದರು. ಮತ್ತು ಬಲಗೈಯಲ್ಲಿ ಸುತ್ತಿಯಿಂದ ಹೊಡೆಯುತ್ತಿದ್ದರು.
ದನದ ಘಂಟೆಗಳನ್ನು ಹಿಂದಿನಿಂದಲೂ ಜಾನುವಾರುಗಳ ಆಭರಣವೆಂದು ಪರಿಗಣಿಸಲಾಗಿದೆ. ಜಾಗತಿಕವಾಗಿ ಗ್ರಾಮೀಣ ಸಮುದಾಯಗಳು ತಮ್ಮದೇ ಆದ ಜಾನುವಾರು ಘಂಟೆಗಳ ಮಾದರಿಯನ್ನು ಹೊಂದಿದ್ದು, ಈ ಘಂಟೆಗಳ ಕಿಣಿ, ಕಿಣಿ ಸದ್ದು ರೈತರಿಗೆ ದಟ್ಟ ಕಾಡಿನಲ್ಲಿ ಮೇಯುತ್ತಿರುವ ತಮ್ಮ ಜಾನುವಾರಗಳನ್ನು ದೂರದಿಂದಲೇ ಗುರುತಿಸಲು ಸಹಾಯ ಮಾಡುತ್ತದೆ.
ಈ ಘಂಟೆಗಳು ಒಂದುಕಾಲದಲ್ಲಿಸಮೃದ್ಧಗ್ರಾಮೀಣಬದುಕಿನಸಂಕೇತವಾಗಿದ್ದವು. ಯಂತ್ರಗಳ ಆಗಮನದೊಂದಿಗೆ, ಈ ಘಂಟೆಗಳ ಸದ್ದು ಮಸುಕಾಗತೊಡಗಿದೆ.



















