“ಎಸ್. ಎನ್. ಗೋಪಾಲ ದೇವಿ, ನನ್ನ ಪರಿವಾರವು ಪ್ರತ್ಯೇಕ ಪ್ರವೇಶದ್ವಾರವನ್ನು ಹೊಂದಿದ್ದು, ಪ್ರತ್ಯೇಕ ಕೋಣೆಯುಳ್ಳ ಮನೆಯನ್ನು ಹುಡುಕಿದೆ. ಇದರಿಂದಾಗಿ ನಾನು ಪ್ರತ್ಯೇಕವಾಸದಲ್ಲಿರಬಹುದು” ಎಂದು ತಿಳಿಸಿದರು. ಮಾರ್ಚ್ 2020ರಲ್ಲಿ ಕೆಲವು ಕುಟುಂಬಗಳು ತಮ್ಮ ಪರಿವಾರದ ಇತರರ ಸುರಕ್ಷತೆಗಾಗಿ ಹೆಚ್ಚಿನ ಪ್ರಯತ್ನವನ್ನು ಕೈಗೊಳ್ಳಲು ಮೊದಲಬಾರಿಗೆ ನಿರ್ಧರಿಸಿದಾಗ, ಆಕೆಯ ಅತ್ಯಂತ ಅಪಾಯಕಾರಿ ವೃತ್ತಿಯಲ್ಲಿದ್ದ ತಮ್ಮ ಕುಟುಂಬದ ಸದಸ್ಯರ ಭಾರವನ್ನು ಸಹ ನೀಗಿಸಿದ್ದರು.
ಐವತ್ತರ ಗೋಪಾಲ ದೇವಿ, ದಾದಿಯ ವೃತ್ತಿಯಲ್ಲಿದ್ದಾರೆ. ಇಪ್ಪತ್ತೊಂಬತ್ತು ವರ್ಷಗಳ ಅನುಭವವಿರುವ ಇವರು ಉನ್ನತ ತರಬೇತಿ ಪಡೆದ ವೃತ್ತಿಪರರರು. ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಚನ್ನೈನ ರಾಜೀವ್ ಗಾಂಧಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಕೆಲಸವನ್ನು ನಿರ್ವಹಿಸುತ್ತಾ ಇವರು ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಸ್ವಲ್ಪ ಸಮಯದವರೆಗೆ ಅದೇ ನಗರದ ನೆರೆಯ ಪುಲಿಯನ್ಥೋಪ್ನಲ್ಲಿನ ವಿಶೇಷ ಕೋವಿಡ್ ಕೇರ್ ಸೆಂಟರ್ನ ಪ್ರಭಾರಿಯೂ ಆಗಿದ್ದರು.
ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಿದ ನಂತರ, ಅನೇಕ ಚಟುವಟಿಕೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದಾಗ್ಯೂ, ಗೋಪಾಲ ದೇವಿಯವರು ಈಗಲೂ ಸಹ ಕೋವಿಡ್ 19 ವಾರ್ಡ್ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಆಗಾಗ ಪ್ರತ್ಯೇಕವಾಸ(quarantine)ದಲ್ಲಿ ಸಮಯವನ್ನು ವ್ಯಯಿಸಬೇಕಾಗುತ್ತದೆ. “ನನಗೆ ಲಾಕ್ಡೌನ್ ಮುಂದುವರಿಯುತ್ತದೆ, ದಾದಿಯರಿಗೆ ಇದರ ಅಂತ್ಯವು ದೂರವೇ ಸರಿ” ಎಂದು ಆಕೆ ನಗುತ್ತಾ ನುಡಿದರು.
ಅನೇಕ ದಾದಿಯರು ಈ ವರದಿಗಾರರಿಗೆ ತಿಳಿಸಿದಂತೆ: “ನಮ್ಮ ಪಾಲಿಗೆ ಲಾಕ್ಡೌನ್ ನಿರಂತರವಾದುದು – ಅಂತೆಯೇ ಕೆಲಸವೂ.”
“ನನ್ನ ಮಗಳಿಗೆ ಸೆಪ್ಟೆಂಬರ್ನಲ್ಲಿ ವಿವಾಹವಾಯಿತು. ನಾನು ಹಿಂದಿನ ದಿನ ಮಾತ್ರ ರಜೆ ಪಡೆದೆ. ನನ್ನ ಪತಿ ಉದಯ ಕುಮಾರ್ ವಿವಾಹದ ಸಂಪೂರ್ಣ ಜವಾಬ್ದಾರಿಯನ್ನು ಹೆಗಲಲ್ಲಿ ಹೊತ್ತರು” ಎಂದರು ಗೋಪಾಲ ದೇವಿ. ಕುಮಾರ್, ಮದ್ರಾಸಿನ ಮತ್ತೊಂದು ಆಸ್ಪತ್ರೆ, ಸಂಕರ ನೇತ್ರಾಲಯದ ಲೆಕ್ಕ ಶಾಖೆಯಲ್ಲಿ ಕೆಲಸಮಾಡುತ್ತಾರೆ. “ಅವರು ನನ್ನ ವೃತ್ತಿಯ ಆಗ್ರಹಗಳನ್ನು ಅರ್ಥಮಾಡಿಕೊಳ್ಳುತ್ತಾರೆ” ಎಂದು ಸಹ ಆಕೆ ತಿಳಿಸಿದರು.
ಅದೇ ಆಸ್ಪತ್ರೆಯಲ್ಲಿರುವ ಮೂವತ್ತೊಂಬತ್ತರ ತಮಿಳ್ ಸೆಲ್ವಿ, ಕೋವಿಡ್ 19 ವಾರ್ಡಿನಲ್ಲಿ ರಜೆ ಪಡೆಯದೇ ಕೆಲಸ ನಿರ್ವಹಿಸಿದ ಕಾರಣಕ್ಕಾಗಿ ಪ್ರಶಸ್ತಿ ಪಡೆದರು. “ಪ್ರತ್ಯೇಕವಾಸದ ದಿನಗಳನ್ನು ಹೊರತುಪಡಿಸಿ, ನಾನು ಈ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಂಡಿರುವ ಕಾರಣ, ಎಂದಿಗೂ ರಜೆ ಪಡೆದಿಲ್ಲ. ನನ್ನ ರಜೆಯ ದಿನಗಳಲ್ಲೂ ಕೆಲಸಮಾಡಿದ್ದೇನೆ. ಏಕೆಂದರೆ ಸಮಸ್ಯೆಯ ಗಂಭೀರತೆಯು ನನಗೆ ಅರ್ಥವಾಗಿದೆ” ಎಂದರಾಕೆ.
“ನನ್ನ ಚಿಕ್ಕ ಮಗ ಶೈನ್ ಆಲಿವರ್ನನ್ನು ಅನೇಕ ದಿನಗಳವರೆಗೆ ಬಿಟ್ಟು ಹೋಗಬೇಕಾದ ನೋವು ಗಹನವಾದುದು. ಕೆಲವೊಮ್ಮೆ ನನಗೆ ಅಪರಾಧಿ ಭಾವನೆ ಕಾಡುತ್ತದೆಯಾದರೂ, ಈ ಸಾಂಕ್ರಾಮಿಕ ರೋಗವು ಹರಡಿರುವಾಗ ನಾವು ಮುಂಚೂಣಿಯಲ್ಲಿರುವುದು ಮುಖ್ಯವೆನಿಸುತ್ತದೆ. ನಮ್ಮ ರೋಗಿಗಳು ತಮ್ಮ ಕುಟುಂಬಗಳಿಗೆ ವಾಪಸ್ಸು ತೆರಳುತ್ತಿದ್ದಾರೆಂದು ತಿಳಿದಾಗ ಆಗುವ ಸಂತೋಷದಿಂದಾಗಿ, ನಮ್ಮ ಜನರಿಂದ ನಾನು ದೂರವಿದ್ದು ಅನುಭವಿಸಿದ ನೋವು ವ್ಯರ್ಥವಾಗಲಿಲ್ಲವೆನಿಸುತ್ತದೆ. ಆದರೆ ನನ್ನ ಪತಿಯು ನಮ್ಮ ಹದಿನಾಲ್ಕು ವರ್ಷದ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ನನ್ನ ಪಾತ್ರವೇನು ಎಂಬುದನ್ನು ಅರ್ಥಮಾಡಿಕೊಂಡಿದ್ದರಿಂದ ಇದು ಸಾಧ್ಯವಾಗಿದೆಯೇ ಹೊರತು ಇಲ್ಲದಿದ್ದರೆ ಇದು ಅಸಾಧ್ಯವಾಗುತ್ತಿತ್ತು.”











