“ಇಲ್ಲಿ ಯುದ್ಧಗಳು ಪ್ರವಾಹದಷ್ಟು ತೀವ್ರ ಹೊಡೆತವನ್ನು ನೀಡುವುದಿಲ್ಲ” ಎನ್ನುತ್ತಾರೆ 73 ವರ್ಷದ ಜಸ್ವೀರ್ ಸಿಂಗ್. ಭಾರತ-ಪಾಕಿಸ್ತಾನದ ಗಡಿಯಲ್ಲಿನ ಮುಳ್ಳುತಂತಿ ಬೇಲಿಯ ಆಚೆಗೆ ಪ್ರವಾಹದಿಂದಾವೃತವಾಗಿರುವ ಹೊಲಗಳಿಂದ ಅವರು ವಾಪಸಾಗುತ್ತಿದ್ದಾರೆ.
2025ರ ಸೆಪ್ಟೆಂಬರ್ನಲ್ಲಿ ಸಟ್ಲೆಜ್ ಅನ್ನು ಉಲ್ಲೇಖಿಸುತ್ತ, “ನೀವು ಎತ್ತ ನೋಡಿದರೂ ಬರಿಯ ನೀರೇ ನೀರು. ನದಿಯು ಹೊಲಗಳನ್ನು ವಶಪಡಿಸಿಕೊಂಡಿದೆ. ಅದು ಬಹುಶಃ 15-20 ಅಡಿ ಆಳವಿರಬಹುದು” ಎಂಬುದಾಗಿ ಜಸ್ವೀರ್, ʼಪರಿʼಗೆ ತಿಳಿಸಿದರು.
ವಲ್ಲೆ ಶಾ ಹಿತ್ತಾಡ್ ಹಳ್ಳಿಯಲ್ಲಿನ ನಲವತ್ತು ಎಕರೆ ಕೃಷಿಭೂಮಿಯು 1990ರ ಸುಮಾರಿಗೆ ನಿರ್ಮಿಸಲ್ಪಟ್ಟ ಬೇಲಿ ಮತ್ತು ಕಾಂಕ್ರೀಟ್ ಕಂಬಗಳಿಂದ ಗುರುತಿಸಲಾದ ಅಂತರರಾಷ್ಟ್ರೀಯ ಗಡಿಯ ನಡುವಿನ ಪ್ರದೇಶದಲ್ಲಿದೆ. ಈ ಭೂಮಿಯನ್ನು ಉಳುವ ರೈತರು ತಮ್ಮ ಹೊಲಗಳನ್ನು ಪ್ರವೇಶಿಸಲು ಗಡಿ ರಕ್ಷಣಾ ಪಡೆಯ ಅನುಮತಿ ಪಡೆಯಬೇಕು. ತಮ್ಮ ಹಳ್ಳಿ, ಥೆಹ್ ಕಲೆಂದರ್ಗಿಂತಲೂ ಗಡಿಗೆ ಸಮೀಪದ ಹಳ್ಳಿಗಳಲ್ಲಿ ಭೂಮಿಯು ಅಗ್ಗವಾಗಿದ್ದಾಗ, ಜಸ್ವೀರ್ ಅವರ ಪರಿವಾರವು 1980ರಲ್ಲಿ 19 ಎಕರೆ ಭೂಮಿಯನ್ನು ಪಡೆಯಿತು - ಅವರ ವಾಹನ, ಸ್ಕೂಟಿಯಿಂದ ಕೇವಲ 30 ನಿಮಿಷಗಳ ಪ್ರಯಾಣ.
ಆಗಸ್ಟ್ 2025ರಲ್ಲಿ ಪಂಜಾಬ್ಗೆ ಪ್ರವಾಹವು ಅಪ್ಪಳಿಸಿದಾಗ, ಜಸ್ವೀರ್ ಅವರ 15ಎಕರೆ ಭೂಮಿಯು ಜಲಾವೃತಗೊಂಡಿತು. ಮಾಗಿದ ಭತ್ತವು ಹಾಳಾಯಿತು. 2026ರಲ್ಲಿ ʼಪರಿʼಯೊಂದಿಗೆ ಮಾತನಾಡುತ್ತಾ, ಅವರು ಹೀಗೆಂದರು: “ಭೂಮಿಯು ಬಹಳ ತೇವವಾಗಿರುವ ಕಾರಣ ಗೋಧಿಯನ್ನು ಬಿತ್ತಲು ಸಾಧ್ಯವಾಗದು. ಸುಮಾರು ಏಳು-ಎಂಟು ಎಕರೆಗಳು ಒಣಗಿದ್ದು, ಕೃಷಿಗೆ ಅಣಿಯಾಗುವ ಮೊದಲು ಮತ್ತೆ ಆರು ತಿಂಗಳು ಅಥವಾ ವರ್ಷದವರೆಗೆ ಅವನ್ನು ಹಾಗೆಯೇ ಬಿಡಬೇಕಾಗುತ್ತದೆ. ಈಗಾಗಲೇ ಬೆಳೆಯ ಎರಡು ಚಕ್ರಗಳು ಕಳೆದುಹೋಗಿವೆ.”
ಪ್ರವಾಹವು ಪಂಜಾಬಿನಾದ್ಯಂತ ಸುಮಾರು 40 ಜನರನ್ನು ಕೊಂದಿದ್ದು, 7161 ಜಾನುವಾರುಗಳು ನಾಶವಾಗಿವೆಯಲ್ಲದೆ, 14000ಕ್ಕಿಂತಲೂ ಹೆಚ್ಚಿನ ಮನೆಗಳು ಹಾಗೂ ಸುಮಾರು 200000 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ. “ಭತ್ತವು ಕಟಾವಿಗೆ ಸಿದ್ಧವಾಗಿದ್ದಾಗ ಪ್ರವಾಹವು ಅದೆಲ್ಲವನ್ನೂ ಹಾಳುಗೆಡವಿತು” ಎನ್ನುತ್ತಾರೆ ಅಶೋಕ್ ಸಿಂಗ್. ಫಜಿ಼ಲ್ಕ ಜಿಲ್ಲೆಯ ವಲ್ಲೆ ಶಾ ಹಿತ್ತಾಡ್ನಲ್ಲಿ ಜಸ್ವೀರ್ ಅವರಂತೆಯೇ ಇವರೂ ಒಬ್ಬ ರೈತರು.
40 ವರ್ಷದ ಆತ. ʼಪರಿʼಗೆ ಹೀಗೆಂದರು: “ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ನಾನು ಎಚ್ಚರಗೊಂಡಿದ್ದೇ ಆದಲ್ಲಿ, ಚಿಂತಾಮಗ್ನನಾಗಿ ಇಡೀ ರಾತ್ರಿಯನ್ನು ಸವೆಸುತ್ತೇನೆ.” ಇವರು ಭತ್ತವನ್ನು ಬಿತ್ತಿರುವ ಬೇಲಿಯಾಚೆಗೆ ಇವರ ಪರಿವಾರವು 10 ಎಕರೆ ಭೂಮಿಯನ್ನು ಹೊಂದಿದೆ. ಇಡೀ ಜಮೀನು ಮುಳುಗಿತ್ತು. ಭೂಮಿಯ ಉತ್ಪನ್ನವು 10 ಜನರ ಪರಿವಾರವನ್ನು ಸಲಹುತ್ತದೆ.
















