"ಬೇಸಗೆ ಮಗಿಯೋಕೆ ಬಂತು ನೋಡಿ! [ಸಾಮಾನ್ಯವಾಗಿ] ಮಡಕೆ ವ್ಯಾಪಾರಕ್ಕೆ ಇದು ಒಳ್ಳೆಯ ಟೈಮ್. ಆದರೆ ಈ ಸಲ ನಮಗೆ ಅಷ್ಟೇನೂ ವ್ಯಾಪಾರ ಇಲ್ಲ" ಎಂದರು ರೇಖಾ ಕುಂಭಕಾರ್. ಅವರು ತಮ್ಮ ಮನೆಯ ಹೊರಗಿನ ಮಡಕೆಗಳನ್ನು ಭಟ್ಟಿಯಲ್ಲಿ ಸುಡಲು ಇಡುವ ಮೊದಲಿನ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಸಮಯದಲ್ಲಿ ಅವರು ಮನೆಯಲ್ಲೇ ಮಡಕೆಗಳನ್ನು ತಯಾರಿಸುತ್ತಿದ್ದರು, ಅಪರೂಪಕ್ಕೊಮ್ಮೆ ಹೊರಗೆ ಹೋಗುತ್ತಿದ್ದರು.
ಮಾರ್ಚಿಯಿಂದ ಮೇ ತಿಂಗಳ ನಡುವೆ ಮಾರಾಟವಾಗಬೇಕಿದ್ದ ಕೆಂಪು ಬಣ್ಣದ ಮಡಕೆಗಳನ್ನು ಛತ್ತೀಸಗಢದ ಧಮತರಿ ನಗರದ ಕುಮ್ಹಾರ್ ಪಾಡಾ ಎನ್ನುವ ಕುಂಬಾರರ ಓಣಿಯ ಉದ್ದಕ್ಕೂ ಜೋಡಿಸಿಡಲಾಗಿತ್ತು. "ತರಾಕಾರಿ ವ್ಯಾಪಾರದವರಿಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಮಗೂ ಇದೇ ರೀತಿ ಮಡಕೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು. ಇಲ್ಲದೆ ಹೋದರೆ ನಾವು ನಮಗೆ ಬದುಕು ನಡೆಸವುದು ಕಷ್ಟವಾಗಲಿದೆ" ಎಂದರು ರೇಖಾ.
ಅಷ್ಟರಲ್ಲೇ ಅಲ್ಲಿಗೆ ತಲೆಯ ಮೇಲೆ ಖಾಲಿ ಬಿದಿರಿನ ಬುಟ್ಟಿಯನ್ನು ಹೊತ್ತು ಭುವನೇಶ್ವರಿ ಕುಂಭಕಾರ್ ಬಂದರು. "ಬೆಳಗ್ಗೆ ಬೇಗ ಎದ್ದು ನಗರದ ಬೇರೆ ಬೇರೆ ಕಡೆ ವ್ಯಾಪಾರಕ್ಕೆ ಹೋಗಿದ್ದೆ. ಎಂಟು ಮಡಕೆ ಖಾಲಿ ಆದವು. ಪುನಃ ಎಂಟು ಮಡಕೆ ತೆಗೆದುಕೊಂಡು ಹೋಗಿದ್ದೆ ಆದರೆ ಮಧ್ಯಾಹ್ನ ಮತ್ತೆ ಲಾಕ್ಡೌನ್ ಶುರುವಾಗುತ್ತೆ. ಹೀಗಾಗಿ ಬೇಗ ವಾಪಸ್ ಬರಬೇಕಾಯ್ತು. ಸರ್ಕಾರ ನಮಗೆ ಸಂತೆಗೆ ಹೋಗಲು ಬಿಡುತ್ತಿಲ್ಲ. ಇದರಿಂದಾಗಿ ನಮಗೆ ಹೆಚ್ಚು ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೊಡುವ 500 ರೂಪಾಯಿ ಮತ್ತೆ ಅಕ್ಕಿಯನ್ನ ನಂಬಿ ಒಂದು ಕುಟುಂಬ ಹೇಗೆ ಬದುಕು ನಡೆಸೋದು?"
ಕುಮ್ಹಾರ್ಪಾಡಾದಲ್ಲಿರುವ ಎಲ್ಲಾ ಕುಟುಂಬಗಳು ಇತರೆ ಹಿಂದುಳಿದ ವರ್ಗದ (ಒಬಿಸಿ) ಕುಂಬಾರ ಸಮುದಾಯಕ್ಕೆ ಸೇರಿವೆ. ಇವರು ಒಂದು ಮಡಕೆಯನ್ನು 50ರಿಂದ 70 ರೂಪಾಯಿಗೆ ಮಾರುತ್ತಾರೆ. ಮಾರ್ಚ್ - ಮೇ ತಿಂಗಳ ನಡುವೆ ಇವರು ವ್ಯವಹಾರ ಉತ್ತುಂಗದಲ್ಲಿರುತ್ತದೆ. ಬೇಸಗೆ ಸಮಯದಲ್ಲಿ ಮಡಕೆಯ ನೀರು ತಣ್ಣಗಿರುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಜನರು ಮಡಕೆ ಕೊಳ್ಳುತ್ತಾರೆ. ಈ ಅವಧಿಯಲ್ಲಿ ಒಂದೊಂದು ಕುಟುಂಬ 200ರಿಂದ 700 ಮಡಕೆಗಳನ್ನು ತಯಾರಿಸುತ್ತದೆ. ಮನೆಯಲ್ಲಿ ಎಷ್ಟು ಜನರು ಕೆಲಸಕ್ಕೆ ಕೈ ಜೋಡಿಸುತ್ತಾರೆ ಎನ್ನುವುದನ್ನು ಅವಲಂಬಿಸಿ ಮಡಕೆಯ ಸಂಖ್ಯೆ ನಿರ್ಧಾರವಾಗುತ್ತದೆ. ಉಳಿದ ಸಮಯದಲ್ಲಿ ಇವರು ಹಬ್ಬಹರಿದಿನಗಳಿಗೆ ಬೇಕಾಗುವ ಸಣ್ಣ ಮೂರ್ತಿಗಳು, ದೀಪಾವಳಿಗೆ ಹಣತೆಗಳು, ಮದುವೆ ಸಮಾರಂಭಗಳಿಗೆ ಮಂಗಳ ಕಳಸ/ಚಿಕ್ಕ ಮಡಕೆಗಳು ಇತ್ಯಾದಿ ವಸ್ತುಗಳನ್ನು ತಯಾರಿಸುತ್ತಾರೆ.
ಜೂನ್ ತಿಂಗಳ ಎರಡನೇ ವಾರದಿಂದ ಸೆಪ್ಟೆಂಬರ್ ತನಕ ಕುಂಬಾರರ ಕೆಲಸ ನಡೆಯುವುದಿಲ್ಲ. ಮಳೆಗಾಲದ ಕಾರಣ ಮಣ್ಣು ಒಣಗದಿರುವುದು ಮತ್ತು ಮನೆಯ ಹೊರಗೆ ಕೆಲಸ ಮಾಡಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ. ಈ ಅವಧಿಯಲ್ಲಿ ಇಲ್ಲಿನ ಕೆಲವರು 150-200 ರೂಪಾಯಿ ಕೂಲಿಗೆ ಕೃಷಿ ಕೆಲಸಗಳನ್ನು ಮಾಡುತ್ತಾರೆ. (ಇಲ್ಲಿನ ಯಾವೊಂದು ಕುಟುಂಬಕ್ಕೂ ಸ್ವಂತ ಜಮೀನಿಲ್ಲ).




