ತಮಿಳುನಾಡಿನ ಹೊಸೂರು ತಾಲ್ಲೂಕಿನಲ್ಲಿ, ಜನವರಿ ತಿಂಗಳಲ್ಲಿ ಕೊಯ್ಲು ಮಾಡಿದ ಬೆಳೆಗಳನ್ನು ಹೊಲದಲ್ಲಿ ಒಣಗಲು ಇಡಲಾಗುತ್ತದೆ. ಒಂದು ವಾರ ಬಿಸಿಲಿನಲ್ಲಿ ಭತ್ತದ ಬೆಳೆಗಳನ್ನು ಒಣಗಿಸುವುದರಿಂದ ಕಾಂಡದಲ್ಲಿನ ಎಲ್ಲಾ ಪೋಷಕಾಂಶಗಳು ರಾಗಿ ಧಾನ್ಯಗಳಲ್ಲಿ ಸಂಗ್ರಹಣೆ ಆಗುತ್ತದೆ ಎಂದು ರೈತರು ಹೇಳುತ್ತಾರೆ.
ಬಿಸಿಲ ಬೇಗೆಯನ್ನು ಸಹಿಸಲಾಗದೆ ಒಂದಷ್ಟು ಜನ ಗಂಡಸರು ಶಿಥಿಲಗೊಂಡಿರುವ ಒಂದು ಶೆಡ್ಡಿನ ಕೆಳಗೆ ನಿಂತಿದ್ದಾರೆ. ಅವರಲ್ಲಿ ಒಬ್ಬರಾದ 52 ವರ್ಷದ ನಾರಾಯಣಪ್ಪ ನೀಲಿ ಬಣ್ಣದ ಖಾದಿ ಧೋತಿಯನ್ನು ಧರಿಸಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂದು ಸಣ್ಣ ಟವೆಲ್ ಅನ್ನು ತಮ್ಮ ತಲೆಯಮೇಲೆ ಹಾಕಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಲವನಪಲ್ಲಿ ಗ್ರಾಮದವರಾದ ಇವರು, 1.5 ಎಕರೆ ಜಮೀನನ್ನು ಗುತ್ತಿಗೆ ಪಡೆದು ಮಳೆಗಾಲದ ನಂತರ, ರಾಗಿ ಮತ್ತು ಹುರುಳಿಕಾಳು ಬೆಳೆಯುತ್ತಾರೆ. ಅವರ ಹಳ್ಳಿಯಿಂದ ಒಂದು ಗಂಟೆ ನಡಿಗೆ ಅಷ್ಟು ದೂರದಲ್ಲಿದೆ ಅವಿಶ್ರಾಂತ ಕೈಗಾರಿಕಾ ಕ್ಷೇತ್ರ ಹೊಸೂರು.




