ಈ ಸ್ಟೋರಿಯನ್ನಯ ಪುಲಿಟ್ಜರ್ ಸೆಂಟರ್ ಅನುದಾನದ ಬೆಂಬಲದೊಂದಿಗೆ ವರದಿ ಮಾಡಲಾಗಿದೆ.
ಮಳೆಗಾಲಕ್ಕೂ ಮೊದಲು 53 ವರ್ಷದ ದೇವರಾವ್ ನಗರೆ ಭರವಸೆಯೊಂದನ್ನು ನೀಡಿದ್ದರು. ಅದೀಗ ಅವರನ್ನು ಎಡೆಬಿಡದೆ ಕಾಡುತ್ತಿದೆ.
ಅವರು ಸೆಪ್ಟೆಂಬರ್ ತಿಂಗಳನ್ನು ಮೊಣಕಾಲು ಮಟ್ಟದ ನೀರಿನಲ್ಲಿ ನಿಂತು ತಮ್ಮ ಕೃಷಿ ಭೂಮಿಯನ್ನು ವಿನಾಶಕಾರಿ ಮಳೆಯಿಂದ ರಕ್ಷಿಸಿಕೊಳ್ಳುವುದರಲ್ಲಿ ಕಳೆದರು. ಅವರ 8 ಎಕರೆ ಜಮೀನಿನಲ್ಲಿ ಚಕ್ಲಾಂಬಾ ಗ್ರಾಮದ ಗುಡ್ಡಗಾಡು ಪ್ರದೇಶದ ಇಳಿಜಾರಿನಲ್ಲಿದೆ. ಇದು ನೆರೆ ನೀರು ನುಗ್ಗಿದಾಗ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತದೆ.
“ನೀರು ನೇರವಾಗಿ ನನ್ನ ಜಮೀನಿನ ಮೂಲಕ ಹರಿಯುತ್ತದೆ. ಪ್ರತಿದಿನ ನಾನು ನೀರನ್ನು ಹೊರಗೆ ಹರಿದು ಹೋಗುವಂತೆ ಮಾಡುವುದರಲ್ಲಿ ಗಂಟೆಗಳಷ್ಟು ಸಮಯವನ್ನು ಕಳೆಯುತ್ತಿದ್ದೆ” ಎಂದು ಅವರು ಹೇಳುತ್ತಾರೆ.
ಆದರೆ ಅವರ ದಣಿವಿನ ದುಡಿಮೆ ಸಿಟ್ಟಿನಿಂದ ಆರ್ಭಟಿಸುತ್ತಿದ್ದ ಮೋಡಗಳೆದುರು ಫಲ ಕೊಡಲಿಲ್ಲ. ಅವರ ಹತ್ತಿ, ತೊಗರಿ ಮತ್ತು ಕಬ್ಬಿನ ಬೆಳೆಗಳು ಮಣ್ಣುಪಾಲಾದವು. ಪರಿಣಾಮವಾಗಿ ಅವರಿಗೆ ಎದುರಾದ ನಷ್ಟ 3 ಲಕ್ಷ ರೂಪಾಯಿಗಳು. ಬೆಟ್ಟಗಳಿಂದ ಹರಿದುಬಂದ ನೀರಿನ ರಭಸಕ್ಕೆ ಅವರ ಹೊಲದ ಮೇಲ್ಭಾಗದ ಮಣ್ಣಿನ ಒಂದು ಪದರವನ್ನೇ ಕೊಚ್ಚಿಕೊಂಡು ಹೋಗಿತ್ತು. ಮತ್ತು ಈ ಮೂಲಕ ಅವರ ದುಡಿಮೆಯ ದಾರಿ ಅಪಾಯದಲ್ಲಿತ್ತು.
ಆದರೂ ಇದೀಗ ಅವರನ್ನು ಕಾಡುತ್ತಿರುವುದು ಈ ಬೆಳೆನಷ್ಟವನ್ನು ಹೇಗೆ ಭರಿಸುವುದು ಎನ್ನುವ ಚಿಂತೆಯಲ್ಲ. ನಗರೆ ಅವರನ್ನೀಗ ಕಾಡುತ್ತಿರುವುದು ಮಹಾರಾಷ್ಟ್ರದ ಪ್ರಸಿದ್ಧ ದೇವಸ್ಥಾನವೊಂದಕ್ಕೆ ನೀಡುವುದಾಗಿ ಹೇಳಿದ್ದ 1.7 ಲಕ್ಷ ರೂಪಾಯಿಗಳನ್ನು ಹೇಗೆ ಹೊಂದಿಸುವುದು ಎನ್ನುವುದು.















