ತಮ್ಮ ಚಾಚಿದ ಅಂಗೈ ಮೇಲೆ ತೆಂಗಿನಕಾಯಿ ಹಿಡಿದುಕೊಂಡಿದ್ದ ಪೂಜಾರಿ ಆಂಜನೇಯಲು ಮುದ್ದಲಾಪುರದಲ್ಲಿನ ತೋಟದ ಮೂಲಕ ನಡೆಯತೊಡಗಿದರು. ಅವರು ತನ್ನ ಕೈಯಲ್ಲಿದ್ದ ತೆಂಗಿನಕಾಯಿ ತಿರುಗುವುದು, ಬಾಗುವುದು ಅಥವಾ ಬೀಳುವುದನ್ನು ಮಾಡುವುದನ್ನು ಕಾಯುತ್ತಿದ್ದರು. ನಂತರ ತೆಂಗು ಯಾವುದೋ ಒಂದನ್ನು ಮಾಡಿತು. ಅವರು ಅಲ್ಲೊಂದು ಗುಣಿಸು ಚಿನ್ಹೆ ಹಾಕಿ ಇಲ್ಲಿ ನೀವು ನೀರನ್ನು ಕಾಣಬಹುದು. ಈ ನಿಖರವಾದ ಸ್ಥಳದಲ್ಲಿ ಕೊಳವೆಬಾವಿಯನ್ನು ಕೊರೆಸಿದರೆ ನೀವು ನೋಡುತ್ತೀರಿ" ಎಂದು ಭರವಸೆ ನೀಡಿದರು. ಇದು ನಡೆದಿದ್ದು ಅನಂತಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ.
ಕೇವಲ ಒಂದು ಹಳ್ಳಿಯ ದೂರದಲ್ಲಿ, ರಾಯುಲು ಧೋಮತಿಮ್ಮನ್ನ ಮತ್ತೊಂದು ಹೊಲದಲ್ಲಿ ಬಾಗಿ ನಡೆಯುತಿದ್ದರು. ಅವರ ಕೈಯಲ್ಲಿದ್ದ ಕವೆಗೋಲು ಅವರಿಗೆ ನೀರಿನ ದಾರಿಯನ್ನು ತೋರುತ್ತಿತ್ತು. “ಕವೆಗೋಲು ಮೇಲ್ಭಾಗಕ್ಕೆ ತಿರುಗಿದ ಸ್ಥಳದಲ್ಲಿ ನೀರಿರುತ್ತದೆ” ಎಂದು ಅವರು ಹೇಳುತ್ತಾರೆ. “ಇದರಲ್ಲಿ ಶೇಕಡಾ 90ರಷ್ಟು ಯಶಸ್ಸು ಸಿಗುತ್ತದೆ” ಎಂದು ಅವರು ತಮ್ಮ ತಂತ್ರದ ಕುರಿತು ವಿವರಿಸಿದರು.
ಅನಂತಪುರದ ಇನ್ನೊಂದು ಮಂಡಲದ ಚಂದ್ರಶೇಖರ್ ರೆಡ್ಡಿ ಯುಗಾಂತರಗಳಿಂದ ದಾರ್ಶನಿಕರನ್ನು ಗೊಂದಲಕ್ಕೀಡು ಮಾಡಿದ ಪ್ರಶ್ನೆಯೊಂದಿಗೆ ಸೆಣಸಾಡುತ್ತಿದ್ದಾರೆ. ಸಾವಿನ ನಂತರ ಬದುಕಿದೆಯೇ ಎನ್ನುವುದು ಆ ಪ್ರಶ್ನೆ, ರೆಡ್ಡಿಯವರ ಪ್ರಕಾರ ಅವರಿಗೆ ಇದಕ್ಕೆ ಉತ್ತರ ತಿಳಿದಿದೆ. "ನೀರೇ ಜೀವನ" ಎನ್ನುವ ಅವರು ಸ್ಮಶಾನದಲ್ಲಿ ನಾಲ್ಕು ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಅದರ ಜೊತೆಗೆ ಅವರ ಹೊಲದಲ್ಲೂ 32 ಕೊಳವೆಬಾವಿಗಳಿವೆ. ಅವರು ತಮ್ಮ ನೀರಿನ ಮೂಲವನ್ನು ಜಂಬುಲದಿನ್ನ ಗ್ರಾಮದ ಉದ್ದಕ್ಕೂ 8 ಕಿಲೋಮೀಟರ್ ಉದ್ದದ ಪೈಪ್ಲೈನ್ ಬಳಸಿ ಸಂಪರ್ಕಗೊಳಿಸಿದ್ದಾರೆ.
ಮೂಢನಂಬಿಕೆ, ಮಾಂತ್ರಿಕತೆ, ದೇವರು, ಸರ್ಕಾರ, ತಂತ್ರಜ್ಞಾನ ಮತ್ತು ತೆಂಗಿನಕಾಯಿ ಇವೆಲ್ಲವೂ ಅನಂತಪುರದಲ್ಲಿ ಇಲ್ಲಿನ ಜನರ ನೀರು ಹುಡುಕುವ ಹತಾಶ ಪ್ರಯತ್ನದಲ್ಲಿ ಭಾಗಿಯಾಗಿವೆ. ಇವುಗಳೆಲ್ಲದ ಸಂಯೋಜಿತ ಯಶಸ್ಸಿನ ಅಷ್ಟೇನೂ ಉತ್ತಮವಿಲ್ಲ. ಆದರೆ ಪೂಜಾರಿ ಆಂಜನೇಯುಲು ಹೇಳುವುದೇ ಬೇರೆ.
ಸಭ್ಯ ಮತ್ತು ಸೌಮ್ಯ ವ್ಯಕ್ತಿತ್ವದ ನಡವಳಿಕೆಯ ಈ ವ್ಯಕ್ತಿ ತನ್ನ ತಂತ್ರ ಎಂದಿಗೂ ವಿಫಲವಾಗುವುದಿಲ್ಲ ಎನ್ನುತ್ತಾರೆ. ಅವರ ಪ್ರಕಾರ ಅವರಿಗೆ ಈ ಕೌಶಲ ದೇವರ ವರ. “ಜನರು ತಪ್ಪು ಸಮಯದಲ್ಲಿ ಈ ವಿದ್ಯೆಯನ್ನು ಪ್ರಯೋಗಿಸುವಂತೆ ಒತ್ತಾಯಿಸಿದಾಗ ಮಾತ್ರ ಈ ತಂತ್ರ ವಿಫಲವಾಗುತ್ತದೆ” ಎಂದು ಅವರು ಹೇಳುತ್ತಾರೆ. (ಈ ದೇವರ ವರ ಪಡೆದ ಮನುಷ್ಯ ಗಂಟೆಗೆ 300 ರೂಪಾಯಿ ಶುಲ್ಕ ವಿಧಿಸುತ್ತಾನೆ). ನಂತರ ನಮ್ಮ ಕೈಯಲ್ಲಿ ತೆಂಗಿನಕಾಯಿ ಹಿಡಿದು ಹೊಲದ ಉದ್ದಕ್ಕೂ ಕರೆದೊಯ್ದರು.









