“ನಾನು ಶೋಲೇ ಸಿನೇಮಾದಲ್ಲಿ ಬರುವ ಠಾಕುರ್ ಇದ್ದ ಹಾಗೆ….”
ಬಾಲಿವುಡ್ನ ಸೂಪರ್ ಹಿಟ್ ಸಿನೇಮಾ ಶೋಲೆಯಲ್ಲಿ ಬರುವ ಸಂಜೀವ್ ಕುಮಾರ್ ಅಭಿನಯದ ಠಾಕುರ್ ಪಾತ್ರಕ್ಕೆ ತಮ್ಮನ್ನು ತಾವು ಹೋಲಿಸಿಕೊಂಡು ರವೀಂದ್ರ ಶಿಂಧೆಯವರು ತುಂಟ ನಗೆಯನ್ನು ಬೀರಿದರು. ಒಂದು ಕ್ಷಣ ಮೌನವಾಗಿ, “ನಾನು ಅವನಿಗಿಂತಲೂ ಅದೃಷ್ಟವಂತ, ಆವನಿಗೆ ಎರಡೂ ಕೈಗಳಿರಲಿಲ್ಲ,” ಎಂದರು.
ಅವರ ಜಾಗದಲ್ಲಿ ಬೇರೆ ಯಾರೇ ಇರುತ್ತಿದ್ದರೂ ಬದುಕುವ ಧೈರ್ಯವನ್ನೇ ಕಳೆದುಕೊಳ್ಳುತ್ತಿದ್ದರು. ಇನ್ನು ತಮ್ಮ ಪರಿಸ್ಥಿತಿಯ ಬಗ್ಗೆ ಜೋಕ್ ಮಾಡಿ ನಗುವುದಂತೂ ದೂರದ ಮಾತು. ಆದರೆ ಕರಾಳ ಕಷ್ಟಗಳ ನಡುವೆಯೂ 47 ವರ್ಷ ಪ್ರಾಯದ ಶಿಂಧೆಯವರು ತಮ್ಮ ಹಾಸ್ಯಪ್ರಜ್ಞೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಯವತ್ಮಳ್ ಜಿಲ್ಲೆಯ ಉಮ್ರಿ ಎಂಬ ಗ್ರಾಮದ ಈ ರೈತ ತಮ್ಮ 16 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾರೆ. ಹದಿಹರೆಯದ ದಿನಗಳಿಂದಲೇ ಶ್ರದ್ಧೆಯಿಂದ ಕೃಷಿ ಕೆಲಸ ಮಾಡುತ್ತಾ ಬಂದಿದ್ದಾರೆ. ದುರದೃಷ್ಟವಶಾತ್, ಅವರು ಕೃಷಿ ಬದುಕಿಗೆ ಕಾಲಿಟ್ಟ ಸಮಯದಲ್ಲಿ ದಶಕಗಳಿಂದ ಪರಿಹಾರ ಕಾಣದ ಕೃಷಿ ಸಂಕಷ್ಟಗಳನ್ನು ಅವರೂ ಎದುರಿಸಬೇಕಾಯಿತು.
ಅವರ ತಂದೆ ಕೃಷಿಯಿಂದ ಬಂದ ಸಂಪಾದನೆಯಿಂದಲೇ ಸುಗಮವಾಗಿ ಕುಟುಂಬವನ್ನು ನಡೆಸುತ್ತಿದ್ದರು. ಆದರೆ ಶಿಂಧೆಯವರಿಗೆ ಮದುವೆಯಾಗಿ, ಮಕ್ಕಳಾಗುವ ಹೊತ್ತಿಗೆ ಎಲ್ಲವೂ ಬದಲಾಗಿತ್ತು. ಹೆಚ್ಚುತ್ತಿದ್ದ ಹಣದುಬ್ಬರ, ಬೆಲೆ ಕುಸಿತ ಮತ್ತು ಬರದಂತಹ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಸಾಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು.
ಮಹಾರಾಷ್ಟ್ರದಲ್ಲಿ ಒಂದು ಕೃಷಿಕ ಕುಟುಂಬ ವ್ಯವಸಾಯದಿಂದ ತಿಂಗಳಿಗೆ ಕೇವಲ 11,492 ರುಪಾಯಿ ಸಂಪಾದಿಸುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಅಂಕಿಅಂಶಗಳು ಈ ಕೃಷಿ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತದೆ. 2024 ರಲ್ಲಿ ಭಾರತದಲ್ಲಿ ಒಟ್ಟು 10,546 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ, ಪ್ರತಿದಿನ ಸರಾಸರಿ 29 ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಇದು ನಿಜವಾದ ಸಂಖ್ಯೆಗಿಂತ ಕಡಿಮೆಯೇ. ಸ್ಥಳೀಯ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸುವ ವೇಳೆ ಮಹಿಳೆಯರು, ದಲಿತರು ಮತ್ತು ಆದಿವಾಸಿ ರೈತರ ಆತ್ಮಹತ್ಯೆಗಳನ್ನು ಹೆಚ್ಚಾಗಿ ದಾಖಲಿಸುವುದೇ ಇಲ್ಲ. ಏಕೆಂದರೆ, ಬಹುತೇಕ ರೈತರು ಕೃಷಿ ಮಾಡುತ್ತಿರುವ ಜಮೀನು ಅವರ ಹೆಸರಿನಲ್ಲಿ ಇಲ್ಲ ಎಂಬ ಕಾರಣಕ್ಕೆ ಅವರ ಆತ್ಮಹತ್ಯೆಯನ್ನು ಅಧಿಕೃತವಾಗಿ ‘ರೈತರ ಆತ್ಮಹತ್ಯೆ’ ಎಂದು ಪರಿಗಣಿಸಲಾಗುತ್ತಿಲ್ಲ.
2024 ರಲ್ಲಿ ಇಡೀ ದೇಶದಲ್ಲೇ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡದ್ದು ಮಹಾರಾಷ್ಟ್ರದಲ್ಲಿ. ಆ ರಾಜ್ಯದಲ್ಲಿ ಒಟ್ಟು 3,824 ಮಂದಿ, ಅಂದರೆ ಶೇಕಡಾ 36 ರಷ್ಟು ರೈತರು ಜೀವ ತೆಗೆದುಕೊಂಡಿದ್ದರು. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆ ನಡೆದದ್ದು ವಿದರ್ಭದಲ್ಲಿ. ಶಿಂಧೆಯವರ ಊರೂ ಇದೇ ಪ್ರದೇಶದಲ್ಲಿದ್ದು, ದಶಕಗಳಿಂದ ಕೃಷಿ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ.
ಆದರೆ, ಮುಂದೆ ತನ್ನ ಬದುಕು ಇನ್ನಷ್ಟು ಕಠಿಣ ದಾರಿಯಲ್ಲಿ ನಡೆಯಲಿದೆ ಎಂಬ ಅರಿವು ಶಿಂಧೆಯವರಿಗೆ ಇರಲಿಲ್ಲ.














