ನಾನು ಅವಳನ್ನು ಮೊದಲ ಬಾರಿ ಎಲ್ಲಿ ನೋಡಿದ್ದೆ ಎನ್ನುವುದು ಸರಿಯಾಗಿ ನೆನಪಿಲ್ಲ. ಯಾವುದೋ ಪುಸ್ತಕದ ಪುಟಗಳ ನಡುವೆ, ಟಿವಿಯಲ್ಲಿ ನೋಡಿದ ಸಾಕ್ಷ್ಯಚಿತ್ರವೊಂದರಲ್ಲಿ ಅಥವಾ ಯಾವುದೋ ರಸ್ತೆಯಲ್ಲಿ ಅವಳು ಹಕ್ಕಿಗಾಗಿ ಆಗ್ರಹಿಸುತ್ತಾ ಹೋರಾಡುತ್ತಿರುವಾಗ. ಒಟ್ಟಿನಲ್ಲಿ ಎಲ್ಲೋ ಅವಳನ್ನು ನೋಡಿದ್ದೇನೆ. ಆದರೆ ಎಲ್ಲೆಂದು ಸರಿಯಾಗಿ ನೆನಪಾಗುತ್ತಿಲ್ಲ, ಬಹುಶಃ ಯಾವುದೋ ಕವಿತೆಯ ಸಾಲೊಂದರಲ್ಲೋ, ಇಲ್ಲ ಮೈನವಿರೇಳಿಸುವ ಯಾವುದೋ ಸ್ವಾತಂತ್ರ್ಯದ ಘೋಷಣೆಯಲ್ಲಿ ಅವಳನ್ನು ಕಂಡಿರಲೂಬಹುದು.
ಆದರೆ ನಿಜವಾಗಿ ಅವಳನ್ನು ಎಲ್ಲಿ ನೋಡಿದ್ದೆ ಎನ್ನುವುದು ನನಗೆ ಸರಿಯಾಗಿ ನೆನಪಿಲ್ಲ.
ಅವಳು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲದಷ್ಟು ಸಲ ತನ್ನ ಹೆಸರು ಮತ್ತು ಮುಖವನ್ನು ಬದಲಾಯಿಸಿಕೊಂಡಿದ್ದಾಳೆ. ಕೆಲವೊಮ್ಮೆ ಅವಳು ದಿಂಡಿಗಲ್ನ ಟೈಲರ್ ಒಬ್ಬಳ ರೂಪದಲ್ಲಿರುತ್ತಾಳೆ. ತನ್ನ ಕೆಲಸದ ಸ್ಥಳದಲ್ಲಿನ ಮೌನವನ್ನು ಕಲಕಿ, ಆ ತಣ್ಣಗಿನ ಸ್ಥಳದಲ್ಲೇ ಒಂದು ಪ್ರತಿರೋಧವನ್ನು ಕಟ್ಟುತ್ತಾಳೆ. ಮತ್ತೆ ಕೆಲವೊಮ್ಮೆ ಅವಳು ಬಾಡಿಗೆ ಟ್ರಾಕ್ಟರ್ ಓಡಿಸಿಕೊಂಡು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮೆರವಣಿಗೆ ಹೊರಡುವ ಕೃಷಿ ಹೋರಾಟಗಾರಳ ರೂಪದಲ್ಲಿರುತ್ತಾಳೆ. ಮತ್ತೆ ಕೆಲವೊಮ್ಮೆ ಅವಳು ಕೇರಳದ ಕಾಮ್ರೆಡ್ ಆಗಿದ್ದಕೊಂಡು ಯಾರೂ ಹಸಿದುಕೊಂಡಿರಬಾರದೆನ್ನುವ ಕಾರಣಕ್ಕೆ ಸಿಕ್ಕಿದ್ದನ್ನೆಲ್ಲ ಮನೆಮನೆಯಿಂದ ಸಂಗ್ರಹಿಸುತ್ತಾಳೆ. ಅವಳು ಬಹುರೂಪಿ. ಅದೇ ಹಠಮಾರಿ ಧೈರ್ಯ, ಬಗ್ಗಲು ನಿರಾಕರಿಸುವ ಅದೇ ನಿಲುವಿನೊಂದಿಗೆ ವಿಭಿನ್ನ ರೂಪಗಳಲ್ಲಿ ಮತ್ತೆ ಮತ್ತೆ ಹುಟ್ಟಿ ಬರುವವಳು.
ಅಗೋ ಅಲ್ಲಿ ! ಅವಳು ಮತ್ತೆ ಕಾಣುತ್ತಿದ್ದಾಳೆ. ಇಂದು ಬ್ಯಾರಿಕೇಡ್ಗಳ ಮೇಲೆ ಜಿಗಿಯುತ್ತಿರುವ ಯುವತಿಯ ರೂಪದಲ್ಲಿ, ಕೆಳಗೆ ಬಿದ್ದವರಿಗೆ ಆಸರೆಯಾಗುವವಳಾಗಿ, ಶರಣಾಗಲು ನಿರಾಕರಿಸುವ ನಂಬಿಕೆಯ ರೂಪದಲ್ಲಿ ಕಾಣುತ್ತಿದ್ದಾಳೆ.
ಆಜಾದಿ ಎನ್ನುವ ಕೂಗು ಸದಾ ಅವಳ ಕೊರಳಿನಲ್ಲಿರುತ್ತದೆ.


