ಒಮ್ಮೆ ಬಾಗಿಲಾಗಿದ್ದ ಮರದ ಹಲಗೆಯನ್ನು ಒಡೆಯುತ್ತಾ, ತಮ್ಮ ಜುಗ್ಗಿ (ತಾತ್ಕಾಲಿಕ ಮನೆ)ಯ ಹೊರಗೆ ಕುಳಿತಿರುವ ರುಬೀನಾ ಬೀಬಿ, "ಈಗ ಯಾರೂ ತಾವು ಸಂಗ್ರಹಿಸಿದ ಮರದ ತುಂಡುಗಳನ್ನು ಮಾರಾಟ ಮಾಡುತ್ತಿಲ್ಲ", ಅದರ ಬದಲು "ತಮ್ಮ ಒಲೆಗಳನ್ನು ಉರಿಸಲು ಅದನ್ನು ಇಟ್ಟುಕೊಳ್ಳುತ್ತಾರೆ." ಎನ್ನುತ್ತಾರೆ.
"ಯೇ ದೋ ಲಗ್ ಜಾಯೆಂಗೆ [ಇಂತದ್ದು ಎರಡು ಬೇಕಾಗುತ್ತೆ]"- ಅಂದರೆ ಐದು ಜನರಿರುವ ನಮ್ಮ ಕುಟುಂಬಕ್ಕೆ ಅಡುಗೆ ಮಾಡೋಕೆ ಈ ತರಹದ್ದು ಎರಡು ಹಲಗೆ ಬೇಕಾಗುತ್ತದ್ದೆ ಎನ್ನುತ್ತಾರೆ ರುಬೀನಾ. ಫೆಬ್ರವರಿ 2026 ರಲ್ಲಿ ಇರಾನ್ ಮೇಲಿನ ಯುಎಸ್-ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ ಎಲ್ಪಿಜಿ ಗ್ಯಾಸ್ನ ಬೆಲೆ ಗಗನಕ್ಕೇರಿದೆ. ಈಗ ಎರಡು ಕಿಲೋಗ್ರಾಂನ ಸಿಲಿಂಡರ್ಗೆ 440 ರಿಂದ 500 ರೂಪಾಯಿ ಖರ್ಚಾಗುತ್ತದೆ. ಇದು ಯುದ್ಧಕ್ಕೂ ಮುನ್ನ ಅವರು ಕಾಳಸಂತೆಯಲ್ಲಿ (ಬ್ಲಾಕ್ ಮಾರ್ಕೆಟ್) ನೀಡುತ್ತಿದ್ದ ಹಣದ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.
ಕಸ ಸಂಗ್ರಹಿಸುವವರ ಕುಟುಂಬಗಳು ಅಡುಗೆ ಮಾಡಲು ಈಗ ಮರದ ತುಂಡುಗಳು ಅತ್ಯಗತ್ಯವಾಗಿವೆ. ಒಂದು ವಾರದಲ್ಲಿ ಅವರು ಐದು ಕಿಲೋಗಳಷ್ಟು ಸಂಗ್ರಹಿಸಲು ಶಕ್ತರಾಗಬಹುದು, ಅಥವಾ “ನಾವು ಒಂದು ಕೆಜಿಗೆ ಐದು ರೂಪಾಯಿಯಂತೆ ಕೊಟ್ಟು ಸೌದೆಯನ್ನು ಖರೀದಿಸುತ್ತೇವೆ,” ಎನ್ನುತ್ತಾರೆ ರುಬೀನಾ.
"ಅವರು ವಾಯುವ್ಯ ದೆಹಲಿಯ ʼಭಲ್ಸ್ವಾʼದಲ್ಲಿರುವ ಕಸ ಸಂಗ್ರಹಿಸುವ ಗುಂಪಿನವರಾಗಿ ವಾಸಿಸುತ್ತಿದ್ದಾರೆ. ಇಲ್ಲಿನ ಬಹುತೇಕರೆಲ್ಲರೂ ಪಶ್ಚಿಮ ಬಂಗಾಳದ ʼಪಶ್ಚಿಮ್ ಮೇದಿನಿಪುರ್ʼ ಜಿಲ್ಲೆಯಿಂದ ಬಂದ ಮೊದಲ ಮತ್ತು ಎರಡನೇ ತಲೆಮಾರಿನ ವಲಸಿಗರು. ಅವರು ಮೂರು-ನಾಲ್ಕು ಮಹಡಿಗಳಷ್ಟು ಎತ್ತರಕ್ಕೆ ಬೆಳೆದು ನಿಂತಿರುವ ಬೃಹತ್ ಕಸದ ರಾಶಿಯ (ಲ್ಯಾಂಡ್ಫಿಲ್) ಪಕ್ಕದಲ್ಲೇ ವಾಸಿಸುತ್ತಾರೆ. ಪುರುಷರು ರಸ್ತೆಗಳು, ವಸತಿ ಪ್ರದೇಶಗಳು ಮತ್ತು ಮುನ್ಸಿಪಾಲಿಟಿ ಕಸದ ತೊಟ್ಟಿಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಮಹಿಳೆಯರು ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಕವರ್ಗಳು, ರಬ್ಬರ್, ಗ್ಲಾಸ್, ಥರ್ಮಕೋಲ್ ಮುಂತಾದವುಗಳನ್ನು ಪ್ರತ್ಯೇಕಿಸುತ್ತಾರೆ; ನಂತರ ಇವುಗಳನ್ನು ಗುಜುರಿ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ."














