ಕೇವಲ ಒಂದು ತಿಂಗಳಲ್ಲಿ ದೆಹಲಿ ಪೊಲೀಸರು ಮೂರು ಬಾರಿ ಆ ಗ್ರಂಥಾಲಯವನ್ನು ಎತ್ತಂಗಡಿ ಮಾಡಲು ಪ್ರಯತ್ನಿಸಿದರು. ಆದರೆ ಪುಸ್ತಕಗಳನ್ನು ಹಂಚುವ ತನ್ನ ಕಾಯಕವನ್ನು ನಿಲ್ಲಿಸಲೇ ಇಲ್ಲ.
ಜೂನ್ 20, 2026. ಕಾಕ್ರೋಚ್ ಜನತಾ ಪಾರ್ಟಿ ಎಂಬ ಮೀಮ್ ಪೇಜ್ ಮೂಲಕ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಯುವಜನರ ಹೋರಾಟವೊಂದು ಆರಂಭವಾಯಿತು. ಈ ಭ್ರಷ್ಟಾಚಾರದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ಕೂತರು. ಈ ಧರಣಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ (ಎಐಎಸ್ಎಫ್) ಪ್ರತಿಭಟನಾ ಸ್ಥಳದಲ್ಲೇ ಒಂದು ಗ್ರಂಥಾಲಯವನ್ನು ಆರಂಭಿಸಲು ನಿರ್ಧರಿಸಿತು. ಉದ್ದೇಶ ತುಂಬಾ ಸರಳವಾಗಿತ್ತು.
“ಮುಂದಿನ ಕೆಲವು ದಿನಗಳ ವರೆಗೆ ಜಂತರ್ ಮಂತರ್ ಈ ಪ್ರತಿಭಟನಾಕಾರರಿಗೆ ಮನೆ ಇದ್ದಂತೆ. ಇಡೀ ದಿನ ಘೋಷಣೆಗಳನ್ನು ಕೂಗುತ್ತೀರಿ, ಭಾಷಣಗಳನ್ನು ಕೇಳುತ್ತೀರಿ. ಈ ಮಧ್ಯೆ ನಿಮಗೆ ಬೇಕಾದಷ್ಟು ಸಮಯ ಸಿಗುತ್ತದೆ. ಈ ಸಂದರ್ಭದಲ್ಲಿ ಪುಸ್ತಕಗಳಿಗಿಂತ ಉತ್ತಮ ಸಂಗಾತಿ ಬೇರೊಂದಿಲ್ಲ. ಪ್ರತಿಭಟನಾಕಾರರು ಮತ್ತು ವಿದ್ಯಾರ್ಥಿಗಳು ಸಾಹಿತ್ಯ ಓದಿ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು ಎಂಬುದೇ ನಮ್ಮ ಉದ್ದೇಶವಾಗಿತ್ತು,” ಎಂದು ಎಐಎಸ್ಎಫ್ನ ರಾಷ್ಟ್ರೀಯ ಅಧ್ಯಕ್ಷ ವಿರಾಜ್ ದೇವಾಂಗ್ ಹೇಳಿದರು.
ವಿದ್ಯಾರ್ಥಿಗಳು ಒಂದು ಮರದ ಮೇಜನ್ನು ತಂದು ಅದರ ಮೇಲೆ ‘ಪ್ರಧಾನ್ ಮಸ್ಟ್ ಫಾಲ್’ ಎಂದು ಬರೆದಿದ್ದ ಕೆಂಪು ಬಟ್ಟೆಯನ್ನು ಹಾಸಿದರು. “ಮೊದಲ ದಿನ ನಮ್ಮ ಬಳಿ ಛತ್ರಪತಿ ಶಿವಾಜಿ ಮಹಾರಾಜ, ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಕುರಿತಾದ ಪುಸ್ತಕಗಳಿದ್ದವು,” ಎಂದು ಪ್ರತಿದಿನ ಗ್ರಂಥಾಲಯವನ್ನು ನೋಡಿಕೊಳ್ಳುತ್ತಿದ್ದ 20 ವರ್ಷ ಪ್ರಾಯದ ವಿದ್ಯಾರ್ಥಿ ಮೋಹಿತ್ ಹೇಳಿದರು. “ಕ್ರಾಂತಿಕಾರಿ ಸಾಹಿತ್ಯವಿಲ್ಲದ ಪ್ರತಿಭಟನೆಯೆಂದರೆ ಒಂದು ರೀತಿಯಲ್ಲಿ ಸಿದ್ಧಾಂತವಿಲ್ಲದ ನಾಯಕನಿದ್ದಂತೆ. ಸಾಹಿತ್ಯ ಪ್ರತಿಭಟನಾಕಾರರಿಗೆ ಹೇಗೆ ಪ್ರತಿರೋಧ ತೋರಿಸಬೇಕು, ಹೇಗೆ ಬಂಡಾಯ ಏಳಬೇಕು ಎಂಬುದನ್ನು ಕಲಿಸುತ್ತದೆ,” ಎಂದರು ಅವರು.









