“ಹಾರ್ಮೋನಿಯಂ ಜೀವನಕ್ಕೆ ಆಧಾರವಾಗಿದ್ದು, ಅದೇ ನಮ್ಮ ಬದುಕು. ಹೊಲ, ಮನೆ ಎಲ್ಲವೂ ಅದೇ.”
ಹಾರ್ಮೋನಿಯಂನಿಂದ ಗಾಳಿಯು ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಗಾಳಿಯೂದುವ ಸಲಕರಣೆಯನ್ನು ಸ್ಪಂದಿಸುತ್ತಾ, 24ರ ಆಕಾಶ್ ಯಾದವ್ ಮೇಲಿನಂತೆ ನುಡಿದರು. ಕೀಗಳನ್ನು ಸಡಿಲಗೊಳಿಸಿ, ಅವನ್ನು ಸ್ವಚ್ಛಗೊಳಿಸಲು ತಲೆಕೆಳಗಾಗಿ ತಿರುಗಿಸಿದ ಅವರು ಮಾತನ್ನು ಮುಂದುವರಿಸುತ್ತ ಹೀಗೆಂದರು: “ಒಂದು ಹೊತ್ತಿನ ಊಟವನ್ನು ಹೇಗೋ ನಿಭಾಯಿಸುತ್ತಿದ್ದೇವೆ. ನಮ್ಮನ್ನು ದೂಷಿಸದೇ, ಹಸಿವಿನಿಂದಲೇ ನಿದ್ದೆಗೆ ಜಾರುವ ಮಕ್ಕಳೆಡೆಗೆ ಅಸಹಾಯಕರಾಗಿ ದಿಟ್ಟಿಸುತ್ತೇವೆ. ಈ ಲಾಕ್ಡೌನ್ ನಮ್ಮ ಬದುಕಿನ ಅತ್ಯಂತ ಕ್ರೂರ ಹಾಗೂ ಆಘಾತಕಾರಿ ಸಂದರ್ಭವೇ ಸರಿ.”
ಇಲ್ಲಿರುವ ಆಕಾಶ್ ಮತ್ತು ಅವರ ಜೊತೆಗಿನ 17 ಜನ ಹಾರ್ಮೋನಿಯಂ ದುರಸ್ತಿಗಾರರದು ಅಪರೂಪದ ತಂಡ. ಇವರು ಹಾರ್ಮೋನಿಯಂ ಅನ್ನು ದುರಸ್ತಿಗೊಳಿಸುತ್ತಾ, ಪ್ರತಿ ವರ್ಷ ಅಕ್ಟೋಬರ್ನಿಂದ ಜೂನ್ವರೆಗೆ ಮಧ್ಯಪ್ರದೇಶದಿಂದ ಮಹಾರಾಷ್ಟ್ರದ ಸುಮಾರು 20 ಜಿಲ್ಲೆಗಳು ಮತ್ತು ಊರುಗಳಿಗೆ ಪ್ರಯಾಣಿಸುತ್ತಾರೆ. ಈ ವೃತ್ತಿಗೆ ಶಾಸ್ತ್ರೀಯ ಸಂಗೀತದ ಆಳವಾದ ಜ್ಞಾನ ಮತ್ತು ಅಸಾಧಾರಣ ಶ್ರವಣ ಸಾಮರ್ಥ್ಯದೊಂದಿಗೆ ಅಪಾರವಾದ ಕೌಶಲ್ಯವು ಅಗತ್ಯ.
ತಾವು ತೆರಳುವ ಬಹುತೇಕ ಸ್ಥಳಗಳಿಗೆ ಹಾರ್ಮೋನಿಯಂ ಮತ್ತು ಉಪಕರಣಗಳ ಪೆಟ್ಟಿಗೆಗಳನ್ನು ಒಯ್ಯುವ ಕಾರಣದಿಂದಾಗಿ ಅವರನ್ನು ಪೇಟಿವಾಲಾಗಳೆಂದು ಕರೆಯುತ್ತಾರೆ. ಇವರೆಲ್ಲರೂ ಕರಹಿರ್ಗಳು. ಇದು ಮಧ್ಯಪ್ರದೇಶದ ಅಹಿರ್ ಅಥವಾ ಗೌಳಿ ಸುಮುದಾಯಗಳ ಉಪ-ಸಮೂಹವೆನಿಸಿದ್ದು, ಯಾದವ ಜಾತಿಯ ವ್ಯಾಪ್ತಿಗೆ ಸೇರಿದೆ.
ಮಹಾರಾಷ್ಟ್ರದ ಲಾತೂರ್ ಎಂಬ ಊರಿನಿಂದ 18 ಕಿ.ಮೀ. ದೂರದ ರೆನಾಪುರ್ನಲ್ಲಿ ಆಕಾಶ್, ನನ್ನೊಂದಿಗೆ ಮಾತನಾಡುತ್ತಿದ್ದರು. ಎಲ್ಲ 18 ಜನ ಹಾರ್ಮೋನಿಯಂ ಶೃತಿಕಾರರೂ ತಮ್ಮ ಪರಿವಾರದೊಂದಿಗೆ ಇಲ್ಲಿಗೆ ಬಂದಿದ್ದು, ಇವರ ಒಟ್ಟು ಸಂಖ್ಯೆ 81. ರೆನಾಪುರ್ ಪುರಸಭೆಯ ಅನುಮತಿಯೊಂದಿಗೆ ಬಯಲು ಪ್ರದೇಶದ ಡೇರೆಗಳಲ್ಲಿ ನೆಲೆಗೊಂಡಿರುವ ಇವರು ಲಾಕ್ಡೌನ್ನಿಂದಾಗಿ ಬೇರೆಡೆಗೆ ಪ್ರಯಾಣಿಸಲು ಸಾಧ್ಯವಾಗದೆ ಅಲ್ಲಿಯೇ ಸಿಲುಕಿದ್ದಾರೆ.
ಅವರೆಲ್ಲರೂ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಸಿಹೊರ ತಾಲ್ಲೂಕಿನಲ್ಲಿ 940 ಜನರನ್ನು (ಜನಗಣತಿ 2011) ಹೊಂದಿರುವ ಗಾಂಧಿಗ್ರಾಮದಿಂದ ಬಂದಿದ್ದರು. “ಈ ರೋಗವು (ಕೋವಿಡ್-19) ಪ್ರಯಾಣಕ್ಕೆ ತಡೆಯೊಡ್ಡುತ್ತಲೇ ಮುಂದುವರಿದರೆ, ನಾವು ಸಾವಿಗೀಡಾಗುತ್ತೇವೆ. ನಮ್ಮಲ್ಲಿ ಹಣವಿಲ್ಲ. ಮಣ್ಣಿನ ಮನೆಗಳಲ್ಲಿ ವಾಸಿಸುವ ಕಾರಣ, ಪ್ರತಿ ವರ್ಷ ಪ್ರಯಾಣವನ್ನು ಆರಂಭಿಸುವ ಮೊದಲು, ನಮ್ಮೆಲ್ಲ ಪ್ರಮುಖ ದಸ್ತಾವೇಜುಗಳನ್ನು ಜಿಲ್ಲೆಯಲ್ಲಿನ ನೆರೆಹೊರೆಯವರ ಬಳಿ ಇಡುತ್ತಿದ್ದೆವು. ಹೀಗಾಗಿ, ನಮ್ಮಲ್ಲಿ ʼಹಳದಿʼ ಪಡಿತರ ಚೀಟಿಗಳಿಲ್ಲ. ನಾವಿಲ್ಲಿ ಹಸಿವಿನಿಂದ ಹೈರಾಣಾಗಿದ್ದೇವೆ. “ನೀವು ದಯವಿಟ್ಟು ನಾವು ವಾಪಸ್ಸು ತೆರಳಲು ಅನುಮತಿಗಾಗಿ ಅಧಿಕಾರಿಗಳಿಗೆ ವಿನಂತಿಸಲ್ಲಿರಾ?” ಎಂದರು ಆಕಾಶ್.






