ಅದು ಬೆಳಗಿನ 7 ಗಂಟೆ. ಅಷ್ಟೊತ್ತಿಗಾಗಲೇ ಡಾಲ್ಟನ್ ಗಂಜ್ ಪ್ರದೇಶದ ಸಾದಿಕ್ ಮಂಜಿಲ್ ಚೌಕ್ ಚಟುವಟಿಕೆಯಿಂದ ಗಿಜಿಗುಡುತ್ತಿತ್ತು. ಒಂದೆಡೆ ವಾಹನಗಳು ಗುರ್ರ್ ಎನ್ನುತ್ತಿದ್ದರೆ, ಅಂಗಡಿಗಳ ಬಾಗಿಲನ್ನು ಎತ್ತುವ ಸದ್ದು ಇನ್ನೊಂದು ಕಡೆಯಿಂದ ಕೇಳುತ್ತಿತ್ತು. ಅದರ ಜೊತೆಗೆ ಹತ್ತಿರದ ಹನುಮಾನ್ ದೇವಸ್ಥಾನದ ಮೈಕಿನಿಂದ ಹನುಮಾನ್ ಚಾಲಿಸಾದ ರೆಕಾರ್ಡ್ ಸೌಂಡ್ ತೇಲಿ ಬರುತ್ತಿತ್ತು.
ಅಂಗಡಿಯೊಂದರ ಮೆಟ್ಟಿಲಿನ ಕುಳಿತಿದ್ದ ರಿಷಿ ಮಿಶ್ರಾ ತನ್ನ ಸುತ್ತ ಕುಳಿತಿದ್ದ ಜನರೊಂದಿಗೆ ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದರು. ಅವರ ಮಾತುಕತೆ ಇತ್ತೀಚೆಗೆ ಮುಗಿದ ಚುನಾವಣೆಯ ಫಲಿತಾಂಶ ಮತ್ತು ಹೊಸ ಸರ್ಕಾರವನ್ನು ಯಾರು ರಚಿಸುತ್ತಾರೆ ಎನ್ನುವುದರ ಸುತ್ತ ಸುಳಿಯುತ್ತಿತ್ತು. ತನ್ನ ಸುತ್ತಲಿನ ಜನರ ಮಾತುಕತೆ ರಾಜಕೀಯದ ಸುತ್ತಲೇ ಸುತ್ತುತ್ತಿರುವುದನ್ನು ಗಮನಿಸಿದ ನಜರುದ್ದೀನ್ ಅಹ್ಮದ್ ಕೈಯಲ್ಲಿದ್ದ ತಂಬಾಕನ್ನು ಇನ್ನಷ್ಟು ತಿಕ್ಕುತ್ತಾ, ಅವರ ಮಾತಿನ ನಡುವೆ ಬಾಯಿ ಹಾಕಿ “ನೀವುಗಳು ಸುಮ್ಮನೆ ಯಾಕೆ ವಾದ ಮಾಡುತ್ತಿದ್ದೀರಿ? ಯಾರು ಸರ್ಕಾರ ಮಾಡಿದರೂ ನಮಗೆ ದುಡಿಯುವ ಹಣೆಬರಹ ತಪ್ಪುವುದಿಲ್ಲ” ಎಂದು ಹೇಳಿದರು.
'ಲೇಬರ್ ಚೌಕ್' ಎಂದೂ ಕರೆಯಲ್ಪಡುವ ಈ ಪ್ರದೇಶದಲ್ಲಿ ಪ್ರತಿದಿನ ಬೆಳಿಗ್ಗೆ ಸೇರುವ ಹಲವಾರು ದಿನಗೂಲಿ ಕಾರ್ಮಿಕರಲ್ಲಿ ರಿಷಿ ಮತ್ತು ನಜರುದ್ದೀನ್ ಕೂಡಾ ಸೇರಿದ್ದಾರೆ. ಪಲಾಮು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಜಾರ್ಖಂಡ್ ರಾಜ್ಯದ ಹತ್ತಿರದ ಹಳ್ಳಿಗಳ ಜನರು ಪ್ರತಿದಿನ ಬೆಳಗ್ಗೆ ಕೆಲಸ ಹುಡುಕಿಕೊಂಡು ಬಂದು ಸೇರುವ ಪಟ್ಟಣದ ಐದು ಚೌಕಗಳಲ್ಲಿ ಸಾದಿಕ್ ಮಂಜಿಲ್ ಕೂಡಾ ಒಂದು. ಅಂದು ಇಲ್ಲಿ ಸುಮಾರು 25-30 ಕಾರ್ಮಿಕರು ದೈನಂದಿನ ಕೂಲಿ ಕೆಲಸಕ್ಕಾಗಿ ಕಾಯುತ್ತಿದ್ದರು.








