ಖಾದರ್ ಅಲಿಯವರು ಇನ್ಯಾವತ್ತೂ ನನ್ನೊಂದಿಗೆ ಮಾತನಾಡುವುದಿಲ್ಲ.
2025 ರ ನವೆಂಬರ್ ತಿಂಗಳಲ್ಲಿ ನಾನು ಅವರನ್ನು ಭೇಟಿಯಾದಾಗ ಅವರಿಗೆ ನನ್ನೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ತಗಡಿನ ಛಾವಣಿಯ ಸಣ್ಣ ಮನೆಯೊಳಗೆ ಅವರು ಕೀರಳಾಗಿ ಕೆಮ್ಮುತ್ತಿರುವ ಸದ್ದು ಮಾತ್ರ ಕೇಳುತ್ತಿತ್ತು. ಅಂಗಳದಲ್ಲಿ ಹೇಂಟೆ ತನ್ನ ಕೋಳಿ ಪಿಳ್ಳೆಗಳನ್ನು ಜೋರಾಗಿ ಕೂಗುತ್ತಾ ಬೆನ್ನಟ್ಟುತ್ತಿತ್ತು. ರೋಗ ಹಿಡಿದಿರುವ ಖಾದರ್ ಮರದ ಮಂಚದ ಮೇಲೆ ಮಲಗಿದ್ದರು.
ಮೊದಲೆಲ್ಲಾ ಅವರು ಯಾರ ನೆರವೂ ಇಲ್ಲದೆ ನಡೆದಾಡುತ್ತಿದ್ದರು, ಹಿಂದಿನದೆಲ್ಲಾ ಅವರಿಗೆ ನೆನಪಿರುತ್ತಿತ್ತು, ತಮ್ಮ ದುರ್ಬಲ ದನಿಯಲ್ಲಿ ಅಲ್ಪ ಸ್ವಲ್ಪ ಮಾತನಾಡುತ್ತಿದ್ದರು. ಆದರೆ ನವೆಂಬರ್ ಹೊತ್ತಿಗೆ ಅವರು ಹಾಸಿಗೆ ಹಿಡಿದಿದ್ದರು. ಪಾರ್ಶ್ವವಾಯು ಬಿಗಡಾಯಿಸಿತು, ಕೈಗಳನ್ನು ಅಲ್ಲಾಡಿಸಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೂ ಖಾದರ್ ಅವರಿಗೆ ಇನ್ನೂ ಪ್ರಜ್ಞೆ ಇತ್ತು. ವರ್ಷಗಳಿಂದ ಜೀವ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟವನ್ನು ಧೈರ್ಯದಿಂದ ಮುಂದುವರಿಸಿಕೊಂಡು ಬಂದಿದ್ದರು.
“ಸುಮಾರು ಹದಿನೈದು ವರ್ಷಗಳ ಹಿಂದೆ, ಒಂದು ದಿನ ಇವರಿಗೆ ಜ್ವರ ಬಂತು, ಆಮೇಲೆ ಅವರ ದೇಹದಲ್ಲಿ ರಕ್ತದ ಮಟ್ಟ ಕಡಿಮೆಯಾಗುತ್ತಾ ಹೋಯ್ತು,” ಎಂದು ಖಾದರ್ ಅವರ ಮಗ 33 ವರ್ಷ ಪ್ರಾಯದ ಶಾಹಿದುಲ್ ಇಸ್ಲಾಂ ಅವರು ಅಸ್ಸಾಂನ ಗಮರಿಗುರಿ ಗ್ರಾಮದಲ್ಲಿರುವ ತಮ್ಮ ಮನೆಯ ಜಗಳಿಯಲ್ಲಿ ನಿಂತುಕೊಂಡು ನಮ್ಮೊಂದಿಗೆ ಮಾತನಾಡುತ್ತಿದ್ದರು. “ಈಗ ಅವರಿಗೆ ತಿನ್ನಲು, ಮಾತನಾಡಲು, ನಡೆದಾಡಲು ಸಾಧ್ಯವಿಲ್ಲ. ಇನ್ನೆಷ್ಟು ದಿನ ನಮ್ಮೊಂದಿಗೆ ಇರುತ್ತಾರೆ ಎಂಬುದು ನನಗೆ ಗೊತ್ತಿಲ್ಲ,” ಎಂದು ಅವರು ಹೇಳಿದರು.
ಖಾದರ್ ಅವರ ಪ್ರಜ್ಞೆ ಆಗಲೂ ಕೆಲಸ ಮಾಡುತ್ತಿತ್ತು. ಅಗಲವಾಗಿ ತೆರೆದುಕೊಂಡಿದ್ದ ಅವರ ಕಣ್ಣುಗಳಲ್ಲಿ ಭರವಸೆ ಕಾಣುತ್ತಿತ್ತು. ಆದರೆ ಅದು ಅವರ ಮನೆಯಲ್ಲಿರುವ ಒಂದೇ ಒಂದು ಬಾಗಿಲಿನಿಂದ ಮತ್ತು ತಗಡಿನ ಛಾವಣಿಯ ತೂತುಗಳಿಂದ ಒಳಗೆ ಬರುತ್ತಿದ್ದ ಸಂಜೆ ಸೂರ್ಯನ ಕಿರಣಗಳಂತೆ ಮಂಕಾಗಿತ್ತು.
ನಾವು ಭೇಟಿ ಮಾಡಿದ ಕೆಲವು ದಿನಗಳಲ್ಲಿ ಅವರು ತೀರಿಕೊಂಡರು. 2025 ರ ನವೆಂಬರ್ 18 ರಂದು ತಮ್ಮ 66 ನೇ ಪ್ರಾಯದಲ್ಲಿ ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದರು.











